ಹುಸಿ ಭಾವನಾತ್ಮಕತೆಯಿಂದ ಯುವಜನರ ದಾರಿ ತಪ್ಪಿಸುತ್ತಿರುವ ಸರ್ಕಾರ: ಬಸವರಾಜ ಪೂಜಾರ

| Published : Jan 30 2024, 02:05 AM IST

ಹುಸಿ ಭಾವನಾತ್ಮಕತೆಯಿಂದ ಯುವಜನರ ದಾರಿ ತಪ್ಪಿಸುತ್ತಿರುವ ಸರ್ಕಾರ: ಬಸವರಾಜ ಪೂಜಾರ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಸ್ವತಂತ್ರಗೊಂಡು ಇಷ್ಟು ವರ್ಷಗಳಾದರೂ ಈಗಲೂ ಜನರು ಹಸಿವಿನಿಂದ ಸಾಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹಾವೇರಿ

ದೇಶ ಸ್ವತಂತ್ರಗೊಂಡು ಇಷ್ಟು ವರ್ಷಗಳಾದರೂ ಈಗಲೂ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಇದು ಅತ್ಯಂತ ಕಳವಳಕಾರಿಯಾದುದು. ಕೇಂದ್ರ ಸರ್ಕಾರದ ಹತ್ತು ವರ್ಷಗಳ ಸಾಧನೆ ಶೂನ್ಯವಾಗಿದ್ದು, ಮೋದಿ ಸರ್ಕಾರ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹರಿಹಾಯ್ದರು.

ನಗರದ ಪರಿವೀಕ್ಷಣಾ ಮಂದಿರದ ಸಭಾಂಗಣದಲ್ಲಿ ಭಾನುವಾರ ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಘೋಷಣೆಯಡಿ ನಡೆದ ಡಿವೈಎಫ್ಐ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಪೊರೇಟ್ ಕುಳಗಳ ಸೇವೆ ಮಾಡುತ್ತಿದೆ. ಯುವಜನರು, ಮಹಿಳೆಯರು, ಬಡಜನತೆ ನಿರುದ್ಯೋಗ, ಬೆಲೆ ಏರಿಕೆಯಂತಹ ಕಠಿಣ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳನ್ನು ಮರೆ ಮಾಚಲು ಮುಂದಿನ ಲೋಕಸಭೆ ಚುನಾವಣೆ ಎದುರಿಸಲು ರಾಮ ಮಂದಿರದಂತಹ ಭಾವನಾತ್ಮಕ ವಿಷಯಗಳನ್ನು ಹರಿಬಿಟ್ಟು ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತಬ್ಯಾಂಕ್ ಗಾಗಿ ಕಾಲ್ಪನಿಕ ಕಥೆಗಳಿಗೆ ದೇಶದ ಪ್ರಧಾನಮಂತ್ರಿ ಮೋದಿಯವರು ಒತ್ತು ಕೊಡುತ್ತಿದ್ದಾರೆ. ಹಳ್ಳಿಯಲ್ಲಿ ಇರುವ ಕೋಟ್ಯಂತರ ಬಡ ರಾಮರಿಗೆ ಮನೆ ಇಲ್ಲದೆ ಗುಡಿಸಲು ವಾಸ ಮಾಡುತ್ತಿದಾರೆ. ಇನ್ನೂ ಕೆಲವರಿಗೆ ಬೀದಿಯೇ ಗತಿಯಾಗಿದೆ. ಇವರಿಗೆ ಮನೆ ವಸತಿ ಖಾತ್ರಿ ಯಾವಾಗ ಎಂಬುದಕ್ಕೆ ಉತ್ತರ ನೀಡುತ್ತಿಲ್ಲ. ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ ಎಂದು ಹುಯಿಲೆಬ್ಬಿಸಿ ಚುನಾವಣೆ ಪ್ರಚಾರ ನಡೆಸಿದ ಬಿಜೆಪಿಯವರು, ಯುವಜನತೆಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಅಧಿಕಾರ ಹಿಡಿದು ದಶಕ ಕಳೆದರೂ ಉದ್ಯೋಗ ಸೃಷ್ಟಿಸದೇ ದೇಶದ ಜನತೆಗೆ ದ್ರೋಹವೆಸಗಿದ್ದಾರೆ. ಒಂದು ಉದ್ಯೋಗಕ್ಕೆ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಅರ್ಜಿ ಹಾಕುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಅಗ್ನಿ ಪಥ ಎಂಬ ಗುತ್ತಿಗೆ ಯೋಜನೆಯನ್ನು ಸೇನಾ ವ್ಯವಸ್ಥೆಯಲ್ಲಿ ಜಾರಿ ಮಾಡಿ ಬಿಜೆಪಿ ಸರ್ಕಾರ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಖ್ಯೋಪಾಧ್ಯಾಯ ಬಸವರಾಜ ಬಾರ್ಕಿ ಮಾತನಾಡಿ, ನಿರುದ್ಯೋಗ ಅನಿಷ್ಟ ವ್ಯವಸ್ಥೆ ವಿರುದ್ಧ ಉದ್ಯೋಗಕ್ಕಾಗಿ ಯುವಜನರ ಸಂಘಟಿತರಾಗಬೇಕು. ಜಿಲ್ಲೆಯಲ್ಲಿ ಸ್ಥಳೀಯ ಉದ್ಯೋಗಗಳು ಸೃಷ್ಟಿಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಸಂಚಾಲಕ ನಾರಾಯಣ ಕಾಳೆ ಮಾತನಾಡಿ, ನಿರುದ್ಯೋಗವನ್ನು ಹೋಗಲಾಡಿಸಲು ವೃತ್ತಿ ಕೌಶಲ್ಯ ಉನ್ನತ ಶಿಕ್ಷಣದ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಇರುವ ಎಲ್ಲಾ ಇಲಾಖೆಯ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದರು.

ಡಿವೈಎಫ್ಐ ಸದಸ್ಯತ್ವಕ್ಕೆ ಚಾಲನೆ ನೀಡಿ ವಕೀಲ ಅಣ್ಣಪ್ಪ ಚಿಕ್ಕಣ್ಣನವರ ಮಾತನಾಡಿದರು. ರಾಹುಲ್ ಕಡೆಮನಿ, ಬಸಯ್ಯ ಸಾಲಿಮಠ, ವಿಠೋಬ ಆರೇರ್, ಸ್ವಾತಿ ಕಹಾರ, ಮಾಲತೇಶ್ ದುರಗಣ್ಣನವರ, ರಾಜು ಮಲ್ಲೂರು, ನನ್ನೂರಸಾಬ್ ನಧಾಪ್, ಗರೀಬಸಾಬ್ ನಧಾಪ್, ವಿಶಾಲಾ ಬಿ.ಎಂ ಇತರರು ಇದ್ದರು.

ಡಿವೈಎಫ್ಐ ಮುಖಂಡರಾದ ರೇಣುಕಾ ಕಹಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ನಿರೂಪಿಸಿದರು. ಬಸವನಗೌಡ ಭರಮನಗೌಡರ ವಂದಿಸಿದರು.