ಪ್ರಭುತ್ವವು ಸಂವಿಧಾನ ಬದಲಾವಣೆ ದೃಷ್ಟಿಯಿಂದ ಕೆಲಸ ಮಾಡುತ್ತಿದೆ: ಭನ್ವರ್ ಮೇಘವಂಶಿ

| Published : Nov 22 2025, 01:15 AM IST

ಪ್ರಭುತ್ವವು ಸಂವಿಧಾನ ಬದಲಾವಣೆ ದೃಷ್ಟಿಯಿಂದ ಕೆಲಸ ಮಾಡುತ್ತಿದೆ: ಭನ್ವರ್ ಮೇಘವಂಶಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ಮೂಲಕ ಶೋಷಿತ ಸಮುದಾಯದಲ್ಲಿ ಬದಲಾವಣೆಯಾಗುತ್ತಿರುವುದನ್ನು ಮನುವಾದಿಗಳು ಸಹಿಸುತ್ತಿಲ್ಲ. ಹೀಗಾಗಿ, ಪ್ರತ್ಯೇಕ ವ್ಯವಸ್ಥೆ ಅಥವಾ ಸಂವಿಧಾನ ಬದಲಾವಣೆಗೆ ಪ್ರಯತ್ನಗಳಾಗುತ್ತಿವೆ. ಸಂವಿಧಾನವು ಆದಿವಾಸಿ, ದಲಿತ, ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಸಮಾನ ಅವಕಾಶ ನೀಡುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಶೋಷಿತ ವರ್ಗಗಳ ಜನರು, ಅವಕಾಶ ವಂಚಿತರು ಸಂವಿಧಾನ ಅಪ್ಪುವುದು ಪ್ರಭುತ್ವಕ್ಕೆ ಭಯ. ಹೀಗಾಗಿ, ಸಂವಿಧಾನವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪ್ರಭುತ್ವವು ಸಂವಿಧಾನ ಬದಲಾವಣೆಯ ದೃಷ್ಟಿಯಿಂದ ಕೆಲಸ ಮಾಡುತ್ತಿದೆ ಎಂದು ರಾಜಸ್ತಾನದ ಸಾಮಾಜಿಕ ಕಾರ್ಯಕರ್ತ, ಲೇಖಕ ಭನ್ವರ್ ಮೇಘವಂಶಿ ತಿಳಿಸಿದರು.

ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಗಾಂಧಿ ವಿಚಾರ ಪರಿಷತ್ತು ಹಾಗೂ ಮೈಸೂರು ವಿವಿ ವಿದ್ಯಾರ್ಥಿಗಳು, ಸಂಶೋಧಕರು ಸಂಯುಕ್ತವಾಗಿ ಶುಕ್ರವಾರ ಪ. ಮಲ್ಲೇಶ್ ನನೆಪಿನಲ್ಲಿ ಆಯೋಜಿಸಿದ್ದ ಸಮಕಾಲಿನ ಸಂಘರ್ಷ- ಸವಾಲು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದ ಮೂಲಕ ಶೋಷಿತ ಸಮುದಾಯದಲ್ಲಿ ಬದಲಾವಣೆಯಾಗುತ್ತಿರುವುದನ್ನು ಮನುವಾದಿಗಳು ಸಹಿಸುತ್ತಿಲ್ಲ. ಹೀಗಾಗಿ, ಪ್ರತ್ಯೇಕ ವ್ಯವಸ್ಥೆ ಅಥವಾ ಸಂವಿಧಾನ ಬದಲಾವಣೆಗೆ ಪ್ರಯತ್ನಗಳಾಗುತ್ತಿವೆ. ಸಂವಿಧಾನವು ಆದಿವಾಸಿ, ದಲಿತ, ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಸಮಾನ ಅವಕಾಶ ನೀಡುತ್ತದೆ ಎಂದರು.

ಆದರೆ. ಜಾತ್ಯತೀತ, ಸಮಾಜವಾದಿ ಭಾರತವನ್ನು ಆಶಿಸದಿರುವ ಬಾಬಾಗಳು ಹಿಂದೂ ರಾಷ್ಟ್ರ ನಿರ್ಮಿಸಲು ಪಣತೊಟ್ಟಿದ್ದಾರೆ. ಅವರು ಕೆಲವರ್ಗದ ಜನ ಗುಲಾಮರಾಗಿಯೇ ಉಳಿಯಬೇಕೆಂಬ ಆಶಯ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಕುಂಭಮೇಳದಲ್ಲಿ ದೇಶಿ ಸಂವಿಧಾನ ಪರಿಚಯಿಸಿದ್ದು, ಅವು ಹಿಂದಿನ ವರ್ಣ ಹಾಗೂ ಶ್ರೇಣೀಕೃತ ವ್ಯವಸ್ಥೆಯನ್ನು ಹೊಂದಿವೆ ಎಂದು ಆರೋಪಿಸಿದರು.

ಸಾಮಾನ್ಯರಿಗಾಗಿ ಹೋರಾಡುವ ಕ್ರಾಂತಿಕಾರಿಗಳನ್ನು ಜೈಲಿಗಟ್ಟಿ, ಬಲತ್ಕಾರ ಮಾಡುವವರಿಗೆ ಜಾಮೀನು ನೀಡುತ್ತಿದ್ದಾರೆ. ಸುಪ್ರೀಂಕೋರ್ಟ್‌ ನ ಆದೇಶವನ್ನೂ ಲೆಕ್ಕಿಸದೆ ಬುಲ್ಡೋಜರ್ ಕಾನೂನು ತರಲಾಗಿದೆ. ಡಿಜಿಟಲ್ ವ್ಯವಸ್ಥೆಯ ಮೇಲೆ ಸರ್ಕಾರದ ನಿರ್ಬಂಧ ಹೆಚ್ಚುತ್ತಿದ್ದು, ರಾಷ್ಟ್ರೀಯ ಸುರಕ್ಷತೆ ನೆಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮವನ್ನು ಪ್ರಗತಿಪರರ ಚಿಂತನೆಗಳನ್ನು ಟೀಕಿಸಲು, ಬೆದರಿಕೆ ಹಾಕಲು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ನಾನು ಆರ್‌ಎಸ್‌ಎಸ್‌ನ ಮೌಲ್ಯಕ್ಕೂ ನಡವಳಿಕೆಗೂ ವ್ಯತ್ಯಾಸ ಇರುವುದು ಕಂಡು ಅಲ್ಲಿಂದ ಹೊರ ಬಂದರೂ, ಅನೇಕ ವರ್ಷ ಅವರು ತುಂಬಿದ ವಾಟ್ಸಾಪ್ ಯುನಿವರ್ಸಿಟಿಯ ಚಿಂತನೆಗಳಿಂದ ಹೊರ ಬರಲಾಗಲಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಗಾಂಧಿ, ಅಂಬೇಡ್ಕರ್, ಕಮ್ಯುನಿಸ್ಟ್ ಎಂಬ ಸಣ್ಣ ಭೇಧಗಳನ್ನು ಮರೆತು ವಿಚಾರವಾದಿಗಳು ಒಂದೇ ವೇದಿಕೆಯಲ್ಲಿ ಸೇರಿ ಭಾರತ ದೇಶವನ್ನು ರಕ್ಷಿಸುವ ಅವಶ್ಯಕತೆಯಿದೆ ಎಂದರು.

ರಂಗಾಯಣ ಮಾಜಿ ನಿರ್ದೇಶಕ ಎಚ್.ಜನಾರ್ಧನ್, ಚಿಂತಕಿ ಸವಿತಾ ಪ.ಮಲ್ಲೇಶ್, ಮಹಿಳಾ ಹೋರಾಟಗಾರ್ತಿ ಸುಶೀಲಾ, ಹೋರಾಟಗಾರ ಎಂ.ಕೆ.ಸಾಹೇಬ್ ಮೊದಲಾದವರು ಇದ್ದರು.ಉತ್ತರ ಭಾರತದಲ್ಲಿ ಆರ್‌ ಎಸ್‌ಎಸ್ ಸಣ್ಣ ಮಕ್ಕಳನ್ನು ಗುರಿಯಾಗಿಸಿ, ಅವರ ನಿಷ್ಕಲ್ಮಶ ಮನಸ್ಸಿಗೆ ತಮ್ಮ ವಿಚಾರಗಳನ್ನು ತುಂಬುವ ಬ್ರೈನ್ ಎಂಜಿನಿಯರಿಂಗ್ ಕೆಲಸ ಮಾಡುತ್ತಿದೆ. ಪ್ರಾಥಮಿಕ ತರಗತಿಗಳ ಶಿಕ್ಷಕರೂ ಇದರಲ್ಲಿ ಭಾಗಿಗಳಾಗಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ.

- ಭನ್ವರ್ ಮೇಘವಂಶಿ, ಲೇಖಕ