ಸರ್ಕಾರದಿಂದಲೇ ಗೊಬ್ಬರದ ಕಳ್ಳ ದಂಧೆ

| Published : Jul 31 2025, 01:06 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿತ್ಯ ಜನರ ಮೇಲೆ ಹೊರೆ ಹಾಕುತ್ತಲೇ ಇದೆ. ರಾಜ್ಯದಲ್ಲಿ ರಸಗೊಬ್ಬರದ ಹಾಹಾಕಾರ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಸ್ಪಂದಿಸದ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ ಎಂಬ ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿತ್ಯ ಜನರ ಮೇಲೆ ಹೊರೆ ಹಾಕುತ್ತಲೇ ಇದೆ. ರಾಜ್ಯದಲ್ಲಿ ರಸಗೊಬ್ಬರದ ಹಾಹಾಕಾರ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಸ್ಪಂದಿಸದ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ ಎಂಬ ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಕಿಡಿಕಾರಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದ್ದರೂ ಕೃತಕ ಅಭಾವ ಸೃಷ್ಟಿಸಿ, ರಸಗೊಬ್ಬರ ವಿಚಾರದಲ್ಲಿ ಸರ್ಕಾರವೇ ಕಳ್ಳದಂಧೆ ನಡೆಸುತ್ತಿದೆ. ಸರ್ಕಾರಿ ಯೋಜನೆಗಳನ್ನು ರೈತರಿಗೆ ಡಿಬಿಟಿ ಮೂಲಕ ಜಾರಿಗೆ ತಂದು ನೇರವಾಗಿ ಅವರ ಖಾತೆಗೆ ಹಣ ಹೋಗುವಂತೆ ಮಾಡಿ ಅವರಿಗೆ ಅನುಕೂಲ ಕಲ್ಪಿಸಬೇಕು ಎಂದು ಕೇಂದ್ರ ಹೇಳಿದ್ದರೂ, ರಾಜ್ಯ ಸರ್ಕಾರ ಹಾಗೂ ಕೃಷಿ ಸಚಿವರು ಸೇರಿ ಡಿಬಿಟಿ ಜಾರಿ ಮಾಡದೆ ತಮ್ಮ ಲಾಭ ನೋಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 50ಕ್ಕೂ ಅಧಿಕ ಜನರು ಆಸ್ಪತ್ರೆ ಸೇರಿದ್ದಾರೆ. ಸರ್ಕಾರ ಏನು ಮಾಡುತ್ತಿದೆ? ಕುಡಿಯಲು ಶುದ್ಧ ನೀರು ಸಹ ಕೊಡದ ಸ್ಥಿತಿಗೆ ಈ ಸರ್ಕಾರ ತಲುಪಿದೆ. ಬಹುಹಳ್ಳಿ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡಲು ಇರುವ ಏಜೆನ್ಸಿಗಳಿಗೆ ಸರಿಯಾಗಿ ಪೇಮೆಂಟ್ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ಹಣವಿಲ್ಲದೆ ನಮಗೆ ಕೆಲಸ ಮಾಡುವುದು ಆಗುವುದಿಲ್ಲ ಎಂದು ಏಜೆನ್ಸಿಯವರು ಕಳೆದ ಎಂಟು ತಿಂಗಳ ಹಿಂದೆಯೇ ಹೇಳಿದ್ದರು. ಅಲ್ಲದೇ, ಡಿಸಿ ಕಚೇರಿಗೆ ಬಂದಾಗ ಹಣ ಬಿಡುಗಡೆಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿ ಮನವೊಲಿಸಿದ್ದರು. ಈ ಸರ್ಕಾರಕ್ಕೆ ಕಣ್ಣಿಲ್ಲ, ಕಿವಿಯಿಲ್ಲ. ಸರ್ಕಾರ ಬಂದಾಗಿನಿಂದ ರೈತರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಸಮ್ಮಾನ, ವಿದ್ಯಾನಿಧಿ ಯೋಜನೆಗೆ ಕೊಕ್ಕೆ ಹಾಕಿದೆ. ಕೇವಲ ₹ 25 ಸಾವಿರಕ್ಕೆ ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಸಿಗುತ್ತಿತ್ತು. ಆದರೆ ಇದೀಗ ಅದನ್ನು ಮೂರು ಲಕ್ಷಕ್ಕೆ ಹೆಚ್ಚಳ ಮಾಡಿದ್ದಾರೆ. ಬಿತ್ತನೆ ಬೀಜಕ್ಕೆ 20 ಪರ್ಸೆಂಟ್ ಟ್ಯಾಕ್ಸ್ ಹೆಚ್ಚಿಸಿದ್ದಾರೆ. ಕೇಂದ್ರಿಂದ ಬಂದ ಕೋಟ್ಯಾಂತರ ರೂಪಾಯಿಯಲ್ಲಿ ಒಂದು ಬಿಡಿಗಾಸು ಯಾವ ರೈತರಿಗೂ ಬರ ಪರಿಹಾರದ ಹಣ ಕೊಡಲಿಲ್ಲ. ಎಲ್ಲವನ್ನೂ ರಾಜ್ಯದವರೇ ಲೂಟಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 2400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಯತ್ನಾಳಗೆ ವಿಜಯೇಂದ್ರ ಹೆದರಿದರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣ ಎಂಬುದು ವೈರತ್ವ ಅಲ್ಲ. ಹಾಗಾಗಿ ಬಸನಗೌಡರಿಗೆ ವಿಜಯೇಂದ್ರ ಅವರು ಅಂಜುವ ಪ್ರಶ್ನೆಯೇ ಇಲ್ಲ. ಹಿಂದೂಗಳ ರಕ್ಷಣೆಗೆ ಆರ್‌ಎಸ್‌ಎಸ್ ಇದೆ. ಅದರ ಜೊತೆಗೆ ಬಿಜೆಪಿಯ ಮೂಲ ಉದ್ದೇಶವೇ ದೇಶಭಕ್ತಿಯಾಗಿದೆ. ಬಿಜೆಪಿಯಲ್ಲಿ ಮಾತ್ರ ಹಿಂದೂಗಳ ರಕ್ಷಣೆಯಾಗಲಿದೆ. ಹಾಗಂತ ಇದು ಅಲ್ಪಸಂಖ್ಯಾತರ ವಿರೋಧಿಯಲ್ಲ. ಯಾರು ದೇಶಭಕ್ತರು ಇದ್ದಾರೋ ಅವರ ಪರವಾಗಿ ಪಕ್ಷ ಇರಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಹೇಂದ್ರ ನಾಯ್ಕ, ಈರಣ್ಣ ರಾವೂರ, ಸಾಬು ಮಾಶ್ಯಾಳ, ವಿಜಯ ಜೋಶಿ ಹಾಜರಿದ್ದರು.

-------

ಬಾಕ್ಸ್‌

ಆ.2ರ ವಿಜಯೇಂದ್ರ ಕಾರ್ಯಕ್ರಮ ರದ್ದು

ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆ ಹಾಗೂ ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಗೆಲುವಿಗಾಗಿ ಜಿಲ್ಲೆಯಲ್ಲಿ ಆಗಸ್ಟ್ 2ರಂದು ಆಯೋಜನೆಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕಾರ್ಯಕ್ರಮ ರದ್ದಾಗಿದೆ ಎಂದು ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ವಿಜಯಪುರದಲ್ಲಿ ಆಗಸ್ಟ್ 2ರಂದು ಬೆಳಗಾವಿ ವಿಭಾಗದ ಸಾಧನಾ ಕಾರ್ಯಕ್ರಮ ನಿಗದಿಯಾಗಿತ್ತು. ಇದಕ್ಕಾಗಿಯೇ ಜಿಲ್ಲೆಯಲ್ಲಿ ಎಲ್ಲ ಮಂಡಳಗಳ ಜೊತೆಗೆ ಸಂಘಟನಾತ್ಮಕ ಸಭೆಗಳನ್ನೂ ಸಹ ಏರ್ಪಾಡು ಮಾಡಲಾಗಿತ್ತು. ಆದರೆ ಅಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಬೆಂಗಳೂರಿಗೆ ಬರುತ್ತಿರುವುದರಿಂದ ರಾಜ್ಯಾಧ್ಯಕ್ಷರು ಆ ಕಾರ್ಯಕ್ರಮದಲ್ಲಿ ಇರಬೇಕಾಗುತ್ತದೆ. ಹೀಗಾಗಿ, ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ತಿಳಿಸಿದರು.