ಸಿದ್ದು ನೇತೃತ್ವ ಸರ್ಕಾರ ಅಭಿವೃದ್ಧಿ ಶೂನ್ಯ: ರೇಣುಕಾಚಾರ್ಯ

| Published : Jul 18 2024, 01:38 AM IST

ಸಾರಾಂಶ

ರಾಜ್ಯದಲ್ಲಿ ಸರ್ಕಾರ ಸತ್ತಿದೆಯೋ ಅಥವಾ ಬದುಕಿದೆಯೋ ಎಂಬುದೇ ಗೊತ್ತಾಗುತ್ತಿಲ್ಲ. ಅಧಿಕಾರದಲ್ಲಿ ಇರುವುದಕ್ಕೂ ಇದು ನಾಲಾಯಕ್‌ ಸರ್ಕಾರವಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- ಒಂದು ವರ್ಷದಲ್ಲಿ ಸಿಎಂ, ಡಿಸಿಎಂ ಅಭಿವೃದ್ಧಿ ಕಾರ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ?: ಮಾಜಿ ಸಚಿವ ಪ್ರಶ್ನೆ

- - - - ವಾಲ್ಮೀಕಿ ನಿಗಮ, ಮುಡಾ ಸೈಟ್‌ ಹಗರಣಗಳ ಹಿನ್ನೆಲೆ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯ

- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶೇ.04 ಸಹ ಕಮಿಷನ್ ಪಡೆದಿಲ್ಲ, ಈಗಿರುವುದು ಶೇ.100 ಕಮಿಷನ್‌ ಸರ್ಕಾರ

- ವಾಲ್ಮೀಕಿ ನಿಗಮ ಹಗರಣದಲ್ಲಿ ₹187 ಕೋಟಿ ಅಲ್ಲ, ₹89 ಕೋಟಿ ಎಂದು ಸದನದಲ್ಲೇ ಸಿಎಂ ಹೇಳಿಕೆ ಭ್ರಷ್ಟಾಚಾರ ಒಪ್ಪಿದಂತಾಗಿದೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯದಲ್ಲಿ ಸರ್ಕಾರ ಸತ್ತಿದೆಯೋ ಅಥವಾ ಬದುಕಿದೆಯೋ ಎಂಬುದೇ ಗೊತ್ತಾಗುತ್ತಿಲ್ಲ. ಅಧಿಕಾರದಲ್ಲಿ ಇರುವುದಕ್ಕೂ ಇದು ನಾಲಾಯಕ್‌ ಸರ್ಕಾರವಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಂತೂ ಶೂನ್ಯವಾಗಿದೆ. ಇದೊಂದು ಅಭಿವೃದ್ಧಿ ವಿರೋಧಿ ಸರ್ಕಾರವಾಗಿದೆ. ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಸಿಎಂ, ಡಿಸಿಎಂ ಅಭಿವೃದ್ಧಿ ಕಾರ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ ಎಂಬುದನ್ನು ಹೇಳಲಿ ಎಂದರು.

ಕಾಂಗ್ರೆಸ್ ಸರ್ಕಾರ ಬಂದ ನಂತರ ಒಂದೇ ಒಂದು ಅಭಿವೃದ್ಧಿ ಕಾರ್ಯಕ್ಕೆ ಶಂಕುಸ್ಥಾಪನೆಯಾಗಿಲ್ಲ. ಆ ಯೋಗ್ಯತೆಯೂ ಸರ್ಕಾರಕ್ಕೆ ಇಲ್ಲ. ಭ್ರಷ್ಟಾಚಾರವೆಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಸರ್ಕಾರ, ಪೇ ಸಿಎಂ ಅಂತೆಲ್ಲಾ ಅಪಪ್ರಚಾರ ಮಾಡಿದ್ದರು. ಬಿಜೆಪಿ ಸರ್ಕಾರ ಶೇ.40 ಅಲ್ಲ, ಶೇ.04 ರು. ಸಹ ಕಮೀಷನ್ ಪಡೆಯದ ಸರ್ಕಾರ. ಆದರೆ, ರಾಜ್ಯದಲ್ಲಿ ಈಗಿರುವುದು ಶೇ.100 ಕಮಿಷನ್‌ ಸರ್ಕಾರ ಎಂದು ಆರೋಪಿಸಿದರು.

ಗೃಹಲಕ್ಷ್ಮಿಯಡಿ ಮಾರ್ಚ್‌, ಏಪ್ರಿಲ್‌ನಲ್ಲಿ ಹಣ ಹಾಕಿದ್ದರು. ಈಗ ಹಣವನ್ನೇ ನೋಡುತ್ತಿಲ್ಲ. ₹800 ಕೋಟಿ ಹಾಲಿನ ಪ್ರೋತ್ಸಾಹಧನ ಇನ್ನೂ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲೇ ₹187 ಕೋಟಿ ಅಲ್ಲ, ₹89 ಕೋಟಿ ಎನ್ನುವ ಮೂಲಕ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದ್ದನ್ನು ಒಪ್ಪಿಕೊಂಡಂತಾಗಿದೆ ಎಂದರು.

ಮೈಸೂರಿನ ಮುಡಾ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತೊಂದು ಸೈಟ್‌ ಹಗರಣ‍ಾಗಿದೆ. ತಮ್ಮ ಪತ್ನಿಗೆ ಕುಂಕುಮದ ರೂಪದಲ್ಲಿ ಜಮೀನು ನೀಡಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ, 2013ರ ಚುನಾವಣೆಯಲ್ಲಿ ಯಾವ ಕಾರಣಕ್ಕೆ ನಿವೇಶನದ ಬಗ್ಗೆ ಮಾಹಿತಿ ನೀಡಲಿಲ್ಲ? ಪಾರದರ್ಶಕ ತನಿಖೆಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಎರಡೂ ದೊಡ್ಡ ಹಗರಣಗಳ ತನಿಖೆ ಸಿಬಿಐಗೆ ಒಪ್ಪಿಸಬೇಕು ಎಂದರು.

ಪಕ್ಷದ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಕಡ್ಲೇಬಾಳು ಧನಂಜಯ, ಚಂದ್ರಶೇಖರ ಪೂಜಾರಿ ಇತರರು ಇದ್ದರು.

- - -

ಬಾಕ್ಸ್‌ * ಲೋಕಸಭೆ ಸೋಲಿಗೆ ಸ್ವಯಂಕೃತಾಪರಾಧ ಕಾರಣ

ದಾವಣಗೆರೆ: ದಾವಣಗೆರೆ ಲೋಕಸಭೆ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸ್ವಯಂಕೃತ ಅಪರಾಧ ಕಾರಣವೇ ಹೊರತು, ನಾವ್ಯಾರೂ ಕಾರಣರಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಹೇಳಿಕೆಗೆ ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ ಅವರು, ಜಗಳೂರಿನಲ್ಲಿ ಸುಪುತ್ರ (ಜಿ.ಎಂ.ಸಿದ್ದೇಶ್ವರ ಮಗ), ಇಬ್ಬರು ಮಾಜಿ ಶಾಸಕರು ಇದ್ದರೂ ಬಿಜೆಪಿಗೆ ಮುನ್ನಡೆ ಸಿಗಲಿಲ್ಲ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಪೈಲ್ವಾನರು, ಜಗಜಟ್ಟಿಗಳಿದ್ದರೂ ಕಾಂಗ್ರೆಸ್ಸಿಗೆ 24 ಸಾವಿರ ಮತ ಮುನ್ನಡೆ ದೊರಕಿತು. ಹರಿಹರದಲ್ಲಿ ಹಾಲಿ ಬಿಜೆಪಿ ಶಾಸಕರು, ಎನ್‌ಡಿಎ ಸಂಚಾಲಕರಿದ್ದರೂ 5 ಸಾವಿರ ಮತಗಳ ಮುನ್ನಡೆ ಕಾಂಗ್ರೆಸ್ಸಿಗೆ ಸಿಕ್ಕಿತು. ಇದಕ್ಕೆಲ್ಲಾ ಉತ್ತರ ಕೊಡಲಿ ಎಂದು ಸಿದ್ದೇಶ್ವರ ಹೆಸರನ್ನು ಪ್ರಸ್ತಾಪಿಸದೇ ಅವರು ಒತ್ತಾಯಿಸಿದರು.

- - -

ಟಾಪ್‌ ಕೋಟ್‌

ಲಗಾನ್ ಟೀಂ ಅಂತೆಲ್ಲಾ ನಮ್ಮನ್ನು ಅಂದವರು. ಇನ್ನು ಮುಂದೆ ನಮ್ಮ ಬಗ್ಗೆ ಏನಾದರೂ ಮಾತನಾಡಿದರೆ ನಾವಂತೂ ಸುಮ್ಮನಿರುವುದಿಲ್ಲ. ಮಾಜಿ ಸಂಸದ ಸಿದ್ದೇಶ್ವರರ ಜನ್ಮದಿನದ ಸಮಾರಂಭದ ಬಗ್ಗೆ ನಮಗೆ ಗೊತ್ತೇ ಇಲ್ಲ. ನಮ್ಮನ್ನು ಯಾರೂ ಕಾರ್ಯಕ್ರಮಕ್ಕೂ ಆಹ್ವಾನಿಸಿಲ್ಲ. ಅವ್ರು (ಸಿದ್ದೇಶ್ವರ) ಹಿರಿಯರು, ಜನ್ಮದಿನ ಮಾಡಿದ್ದಾರೆ. ಸಂತೋಷದ ಸಂಗತಿ

- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ

- - - -17ಕೆಡಿವಿಜಿ35, 36: ದಾವಣಗೆರೆಯಲ್ಲಿ ಬುಧವಾರ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.