ಹಗರಿಬೊಮ್ಮನಹಳ್ಳಿ: ದಮನಿತರ ಹಾಗೂ ಶೋಷಿತರ ಪರ ಧ್ವನಿ ಎತ್ತುವ ಸಾರ್ವಜನಿಕ ಹಿತಾಸಕ್ತಿಗೆ ಬದ್ಧರಾಗಿರುವ ಪತ್ರಕರ್ತರ ನೆರವಿಗೆ ಸರ್ಕಾರ ಧಾವಿಸಬೇಕು. ಪತ್ರಕರ್ತರ ಸಂಘಟನೆಗಳ ಬದಲಾಗಿ ಸಮಾಜ ಹಾಗೂ ಸಂಘ, ಸಂಸ್ಥೆಗಳು ಪತ್ರಿಕಾ ದಿನಾಚರಣೆ ಆಚರಿಸಬೇಕು ಎಂದು ನಂದೀಪುರ ಶ್ರೀಗಳಾದ ಡಾ. ಮಹೇಶ್ವರ ಶ್ರೀಗಳು ಆಶಿಸಿದರು.
ಪಟ್ಟಣದ ಮಹರ್ಷಿ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಪತ್ರಕರ್ತರು ತಮ್ಮ ತಮ್ಮಲ್ಲಿನ ಒಡಕುಗಳನ್ನು ಸರಿಮಾಡಿಕೊಳ್ಳಬೇಕು. ಮುಂದಿನ ವರ್ಷ ಶ್ರೀ ಮಠದಿಂದ ಪತ್ರಿಕಾ ದಿನಾಚರಣೆ ಆಚರಿಸುವ ಚಿಂತನೆ ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ಖಾಕಿ, ಕಾವಿ ಹಾಗೂ ಖಾದಿಗಳನ್ನು ಪ್ರಶ್ನಿಸುವ ಅಧಿಕಾರ ಪತ್ರಕರ್ತರಿಗೆ ಮಾತ್ರ ಇದೆ. ಪತ್ರಕರ್ತರು ಕೇವಲ ಗುದ್ದಲಿಪೂಜೆ, ಶಂಕುಸ್ಥಾಪನೆ ವರದಿಗಳಿಗೆ ಸೀಮಿತರಾಗದೇ ಜನರ ಸಂಕಷ್ಟಗಳಿಗೆ ಕಿವಿಯಾಗಬೇಕು. ಸಾಮಾಜಿಕ ಅನಿಷ್ಟಗಳು, ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿಯಾಗಬೇಕು ಎಂದು ಸಲಹೆ ನೀಡಿದರು.ಪತ್ರಕರ್ತರಿಗೆ ಬಸ್ ಪಾಸ್ ಸಹಿತ ರಕ್ಷಣಾ ಕಾಯ್ದೆ ಮತ್ತು ಕಾರ್ಮಿಕ ಕಾನೂನುಗಳ ಅನುಷ್ಠಾನ ಜಾರಿಗೆ ಹೋರಾಟ ಮಾಡಿ, ಎರಡೇ ವರ್ಷಗಳಲ್ಲಿ ಪತ್ರಕರ್ತರ ಕುಟುಂಬದವರ ಮುಖದಲ್ಲಿ ಮಂದಹಾಸ ಮೂಡಿಸುವ ವರೆಗೆ ವಿರಮಿಸುವುದಿಲ್ಲ ಎಂದು ಘೋಷಿಸಿದರು.
ಸಾನ್ನಿಧ್ಯ ವಹಿಸಿದ್ದ ಹಾಲಸಿದ್ದೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಧ್ವನಿ ಸಂಘಟನೆಯ ತಾಲೂಕು ಅಧ್ಯಕ್ಷ ಜಿ. ಸೋಮನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಎಂ. ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ, ಪೊಲೀಸ್, ಆರೋಗ್ಯ, ಸಾಹಿತ್ಯ, ಜಾನಪದ, ರಂಗಭೂಮಿ, ಸಂಗೀತ ಸಹಿತ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದ ೨೫ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಮರಿ ರಾಮಣ್ಣ, ಹೆಗ್ಡಾಳು ರಾಮಣ್ಣ, ಚಿಂತ್ರಪಳ್ಳಿ ದೇವೇಂದ್ರಪ್ಪ, ಡಿಶ್ ಮಂಜುನಾಥ್, ಗುಂಡ್ರು ಹನುಮಂತಪ್ಪ, ಸೊನ್ನದ ಗುರುಬಸವರಾಜ್, ಜಂದೀಸಾಬ್, ಜೆ. ಯೋಗಾನಂದ್, ಹಿ.ಮ. ಕೊಟ್ರಯ್ಯ, ಪ್ರಧಾನ ಕಾರ್ಯದರ್ಶಿ ಸರ್ದಾರ್ ಯಮನೂರಪ್ಪ, ಎಂ. ಮಂಜುನಾಥ್, ಮಹೇಶ್ ಜಿಟ್ಟಿ ಉಪಸ್ಥಿತರಿದ್ದರು. ಬಿ. ರಮೇಶ್, ನಕರಾಳ್ ಪರಶುರಾಮ್, ಹನುಮಂತಪ್ಪ ಗದುಗಿನ ಹಾಗೂ ಎ. ಮಹೇಶ್ ನಿರ್ವಹಿಸಿದರು.