ತಾಲೂಕಿನ ರೈತರು ಬರಗಾಲದಿಂದ ತೊಂದರೆಯಲ್ಲಿದ್ದಾರೆ. ಆದ್ದರಿಂದ ಬೆಳೆ ವಿಮೆ ತುಂಬಿದ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು.

ರೈತ ಸೇನಾ ಸಂಘಟನೆ ರಾಜ್ಯ ಕಾರ್ಯದರ್ಶಿ ಆಗ್ರಹ

ಕನ್ನಡಪ್ರಭ ವಾರ್ತೆ ನರಗುಂದ

ತಾಲೂಕಿನ ರೈತರು ಬರಗಾಲದಿಂದ ತೊಂದರೆಯಲ್ಲಿದ್ದಾರೆ. ಆದ್ದರಿಂದ ಬೆಳೆ ವಿಮೆ ತುಂಬಿದ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕೆಂದು ರೈತ ಸೇನಾ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಆಗ್ರಹಿಸಿದರು.

ಪಟ್ಟಣದ 3992ನೇ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ಹೋರಾಟ ವೇದಿಕೆಯಲ್ಲಿ ಮಾತನಾಡಿ, ತಾಲೂಕಿನ ರೈತರು ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಸೂರ್ಯಕಾಂತಿ, ಬಿ.ಟಿ.ಹತ್ತಿ, ಈರಳ್ಳಿ, ತೊಗರಿ, ಸೇರಿದಂತೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿ, ಬೆಳೆ ವಿಮೆ ತುಂಬಿದ್ದಾರೆ. ಆದರೆ ಸಕಾಲಕ್ಕೆ ಮಳೆಯಾಗದೆ, ತೇವಾಂಶ ಕೊರತೆಯಿಂದ ಬಿಸಿಲಿನ ತಾಪಕ್ಕೆ ಬೆಳೆ ಒಣಗಿ ಹೋಗಿವೆ. ಆದ್ದರಿಂದ ಬೆಳೆ ವಿಮೆ ತುಂಬಿಕೊಂಡ ಖಾಸಗಿ ಬೆಳೆ ವಿಮೆ ಕಂಪನಿಗೆ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕೆಂದು ಸರ್ಕಾರ ಆ ಕಂಪನಿಯವರಗೆ ಆದೇಶ ಮಾಡಬೇಕೆಂದು ಹೇಳಿದರು.

ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗಲೆಂದು ಜಾರಿಗೆ ತಂದ ಪ್ರಧಾನಿ ಮಂತ್ರಿ ಬಿಮಾ ಫಸಲ ಯೋಜನೆಯಲ್ಲಿ ಬೆಳೆ ವಿಮೆ ತುಂಬಿದ 20 ದಿನದಲ್ಲಿ ಆ ಬೆಳೆ ಹಾನಿಯಾದರೆ ಪರಿಹಾರ ನೀಡಬೇಕೆಂದು ನಿಯಮವಿದೆ. ಆದರೆ ಬೆಳೆ ವಿಮೆ ತುಂಬಿಕೊಂಡ ಖಾಸಗಿ ಕಂಪನಿಯವರು ಪರಿಹಾರ ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಸಿ.ಎಸ್. ಪಾಟೀಲ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಫಕೀರಪ್ಪ ಅಣ್ಣಿಗೇರಿ, ಶಿವಪ್ಪ ಸಾತಣ್ಣವರ, ಅನಸವ್ವ ಶಿಂದೆ, ನಾಗರಾತ್ನ ಸವಳಭಾವಿ, ಯಲ್ಲಪ್ಪ ಚಲವಣ್ಣವರ, ವಾಸು ಚವ್ಹಾಣ, ವಿಜಯಕುಮಾರ ಹೂಗಾರ ಇದ್ದರು.