ಸ್ವಚ್ಛ ವಾಹಿನಿ ನೌಕರರಿಗೆ ಸರ್ಕಾರ ಕೆಲಸ ನೀಡಿ ಘನತೆಯ ಬದುಕು ಖಾತ್ರಿಪಡಿಸಬೇಕು-ನಾಡಗೌಡ

| Published : Oct 21 2024, 12:38 AM IST

ಸ್ವಚ್ಛ ವಾಹಿನಿ ನೌಕರರಿಗೆ ಸರ್ಕಾರ ಕೆಲಸ ನೀಡಿ ಘನತೆಯ ಬದುಕು ಖಾತ್ರಿಪಡಿಸಬೇಕು-ನಾಡಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮಗಳ ಸ್ವಚ್ಛತೆಯ ಜವಾಬ್ದಾರಿ ನಿರ್ವಹಿಸಿ ಗ್ರಾಮೀಣ ಜನತೆಯ ನೈರ್ಮಲ್ಯ ಕಾಪಾಡುತ್ತಿರುವ ಸ್ವಚ್ಛವಾಹಿನಿ ನೌಕರರಿಗೆ ಸರ್ಕಾರ ಕೆಲಸ ಒದಗಿಸಿ, ಘನತೆಯ ಬದುಕನ್ನು ಖಾತ್ರಿ ಪಡಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ. ನಾಡಗೌಡ ಒತ್ತಾಯಿಸಿದರು.

ಹಾವೇರಿ: ಗ್ರಾಮಗಳ ಸ್ವಚ್ಛತೆಯ ಜವಾಬ್ದಾರಿ ನಿರ್ವಹಿಸಿ ಗ್ರಾಮೀಣ ಜನತೆಯ ನೈರ್ಮಲ್ಯ ಕಾಪಾಡುತ್ತಿರುವ ಸ್ವಚ್ಛವಾಹಿನಿ ನೌಕರರಿಗೆ ಸರ್ಕಾರ ಕೆಲಸ ಒದಗಿಸಿ, ಘನತೆಯ ಬದುಕನ್ನು ಖಾತ್ರಿ ಪಡಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ. ನಾಡಗೌಡ ಒತ್ತಾಯಿಸಿದರು.ನಗರದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸ್ವಚ್ಛವಾಹಿನಿ ನೌಕರರ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಸ ವಿಲೇವಾರಿ ಮಾಡುವ ಕಾರ್ಮಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಶೋಷಣೆಗೊಳಪಡಿಸುತ್ತಿರುವುದು ಖಂಡನೀಯ. ಕೂಡಲೇ ಸರ್ಕಾರ ತರಬೇತಿ ಪಡೆದ ಎಲ್ಲ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನೀಡಬೇಕು ಹಾಗೂ ಪ್ರತಿ ತಿಂಗಳು ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಸಮಾಜದ ನೈರ್ಮಲ್ಯ ಕಾಪಾಡುವ ಸ್ವಚ್ಛವಾಹಿನಿ ಸಿಬ್ಬಂದಿಗಳ ಜೀವನವೂ ಸಹ ನಮ್ಮ ನಾಗರೀಕ ಸಮಾಜದಲ್ಲಿ ಘನತೆಯಿಂದ ಕೂಡಿರಬೇಕು. ಆದರೆ ಸರ್ಕಾರ ಕನಿಷ್ಠ ಮೂಲ ಸೌಲಭ್ಯ ಒದಗಿಸದಿರುವುದು ನಾಚಿಕೆಗೇಡಿನ ಸಂಗತಿ. ಎಲ್ಲ ನೌಕರರು ಸಂಘಟಿತರಾಗಿ ಐಕ್ಯತೆಯಿಂದ ಹೋರಾಡಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.

ಸಂಘಟನೆಯ ರಾಜ್ಯ ಮುಖಂಡ ಡಿ.ಎಂ. ಮಲಿಯಪ್ಪ ಮಾತನಾಡಿ, ಕಾಯಂ ಸ್ವರೂಪದ ಕೆಲಸ ಮಾಡುತ್ತಿರುವ ಸ್ವಚ್ಛವಾಹಿನಿ ಸಿಬ್ಬಂದಿಗಳಿಗೆ ಕೆಲಸ ಕಾಯಂ ನೀಡದೇ ವಂಚಿಸಲಾಗುತ್ತಿದೆ. ಮಾಡಿದ ಕೆಲಸಕ್ಕೂ ವೇತನ ನೀಡದೇ ಬಾಕಿ ಉಳಿಸಿಕೊಳ್ಳುತ್ತಿದ್ದು ಕಾರ್ಮಿಕರು ಬದುಕು ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಬಾಕಿಯಿರುವ ಎಲ್ಲ ವೇತನವನ್ನು ಕೂಡಲೇ ಸಿಬ್ಬಂದಿಗಳಿಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ನೌಕರ ಸಂಘದ ಜಿಲ್ಲಾಧ್ಯಕ್ಷ ಅಂದಾನೆಪ್ಪ ಹೆಬಸೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾವೇಶದಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ನಿರ್ದೇಶಕ ವಿ. ಕೆ. ಶಿವಲಿಂಗಪ್ಪ ಅವರು ಮನವಿ ಸ್ವೀಕರಿಸಿ ಮಾತನಾಡಿ, ಮೇಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯುವುದಾಗಿ ಹೇಳಿದರು.

ಸಂಘಟನೆಯ ಜಿಲ್ಲಾ ಮುಖಂಡರಾದ ಸುಭಾಸ್ ಸೊಟ್ಟಪ್ಪನವರ, ಶಿಲ್ಪಾ ಶೇಷಗಿರಿ, ಗೀತಾ ಬಾಗಿಲದ, ರಚನಾ ಎಚ್., ಫಕ್ಕಿರೇಶ ಹಕ್ಕಿಮರೆಣ್ಣನವರ, ಆದಂ ಇತರರು ಇದ್ದರು. ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಸ್ವಚ್ಛವಾಹಿನಿ ಸಿಬ್ಬಂದಿ ಸಮಾವೇಶದಲ್ಕಿ ಪಾಲ್ಗೊಂಡಿದ್ದರು.