ರೈತರ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ವಿಶೇಷ ಸೌಲಭ್ಯ ನೀಡಬೇಕು

| Published : Dec 26 2023, 01:31 AM IST

ರೈತರ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ವಿಶೇಷ ಸೌಲಭ್ಯ ನೀಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತ ಚೇತನ ದಿ.ಕೆ.ಎಸ್. ಪುಟ್ಟಣ್ಣ ಅವರ 75ನೇ ಜನ್ಮ ದಿನೋತ್ಸವದ ಅಂಗವಾಗಿ ತಾಲೂಕು ಅನ್ನದಾತರ ಸಮಾವೇಶ ಹಾಗೂ ಅನುಭವಿ ಅನ್ನದಾತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ಅನ್ನದಾತರ ಸಮಾವೇಶ, ಅನುಭವಿ ರೈತರಿಗೆ ಗೌರವ ಸಮರ್ಪಣೆ

ಮುಂಡರಗಿ: ರೈತ ಜಗತ್ತಿಗೆ ಅನ್ನದಾತನಾಗಿದ್ದಾನೆ. ಆದರೆ ರೈತರ ಬವಣೆಯನ್ನು ನೀಗಿಸುವ ಕಾರ್ಯ ಇದುವರೆಗೂ ನಮ್ಮ ದೇಶದಲ್ಲಿ ಆಗುತ್ತಿಲ್ಲ. ಸರ್ಕಾರ ರೈತರ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಸೌಲಭ್ಯಗಳನ್ನು ನೀಡಬೇಕು ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು. ಅವರು ಸೋಮವಾರ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತ ಚೇತನ ದಿ.ಕೆ.ಎಸ್. ಪುಟ್ಟಣ್ಣ ಅವರ 75ನೇ ಜನ್ಮ ದಿನೋತ್ಸವದ ಅಂಗವಾಗಿ ಮುಂಡರಗಿ ತಾಲೂಕು ಅನ್ನದಾತರ ಸಮಾವೇಶ ಹಾಗೂ ಅನುಭವಿ ಅನ್ನದಾತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.ರೈತರು ಬೆಳೆಯುವ ಉತ್ಪನ್ನಗಳಿಗೆ ಸರಿಯಾದ ರೀತಿಯಲ್ಲಿ ಧಾರಣೆ ಸಿಗುತ್ತಿಲ್ಲ. ಅವರಿಗೆ ಶ್ರಮಕ್ಕೆ ತಕ್ಕ ಬೆಲೆ ಹಾಗೂ ಗೌರವ ಸಿಗಬೇಕು. ಸರ್ಕಾರ ಜನತೆಗೆ ದುಡಿಯದೇ ಆಹಾರ ಧಾನ್ಯಗಳನ್ನು ಕೊಡುತ್ತಿರುವುದಾಗಲಿ, ಹಣ ಕೊಡುತ್ತಿರುವುದಾಗಲಿ ಇದು ಸರಿಯಾದುದಲ್ಲ. ದೇಶದೊಳಗೆ ದುಡಿಯುವಂತವರಿಗೆ ಅವರ ಶ್ರಮಕ್ಕೆ ತಕ್ಕಂತೆ ವೇತನ ಕೊಡಬೇಕು ಎಂದರು.

ಇತ್ತೀಚಿನ ವರ್ಷಗಳಲ್ಲಿ ರೈತರ ಮಕ್ಕಳಿಗೆ ಕನ್ಯೆ ಹುಡುಕುವುದು ಬಹಳ ದುಸ್ತರವಾಗಿದೆ. ರೈತರ ಮಕ್ಕಳಿಗೆ, ಒಕ್ಕಲುತನ ಮಾಡುವವರಿಗೆ ಯಾರೊಬ್ಬರೂ ಕನ್ಯ ಕೊಡಲು ಮುಂದೆ ಬರುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸರ್ಕಾರ ಅಂತರ್ ಜಾತಿ ವಿವಾಹಕ್ಕೆ ಮಾನ್ಯತೆ ನೀಡಿ ಪ್ರೋತ್ಸಾಹ ಧನ ನೀಡುವಂತೆ ಮುಂಬರುವ ದಿನಗಳಲ್ಲಿ ರೈತರ ಮಕ್ಕಳ ಮದುವೆ ಮಾಡಿಕೊಳ್ಳುವವರಿಗೂ ಮಾನ್ಯತೆ ನೀಡಿ ಪ್ರೋತ್ಸಾಹ ಧನ ನೀಡಬೇಕು. ಇಂದು ರೈತರ ಕಣಗಳು ಮಾಯವಾಗಿ ರಸ್ತೆ ಮೆಲೆಯೇ ರಾಶಿಗಳು ನಡೆಯುತ್ತಿರುವುದು ಸರಿಯಲ್ಲ. ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ದೇಶದಲ್ಲಿ ಗೌರವಕ್ಕೆ ಪಾತ್ರವಾದ ವರ್ಗ ಇದ್ದರೆ ಅದು ರೈತ ವರ್ಗ ಮಾತ್ರ. ದಾಸೊಹ ಸಂಸ್ಕೃತಿಯೇ ನಮ್ಮ ರೈತರ ಸಂಸ್ಕೃತಿ. ಆದರೆ ಇಂದು ರೈತ ವರ್ಗ ಅತ್ಯಂತ ನಿರ್ಲಕ್ಷಕ್ಕೆ ಒಳಗಾಗಿದೆ. ರಾಜ್ಯದ 79 ಲಕ್ಷ ರೈತ ಕುಟುಂಬಗಳ ಸರ್ವೇ ನಡೆಸಿದ್ದು ಎಲ್ಲ ಕುಟುಂಬಗಳ ಆದಾಯ ಬಡತನರೇಖೆಗಿಂತ ಕೆಳಗಿರುವವರ ಕುಟುಂಬಗಳಾಗಿವೆ. ಅನೇಕ ವರ್ಷಗಳ ಹಿಂದೆ ವಿಶ್ವಸುಂದರಿಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದನ್ನು ಗಮನದಲ್ಲಿಟ್ಟುಕೊಂಡ ನಮ್ಮ ರೈತ ನಾಯಕರಾಗಿದ್ದ ದಿ.ಕೆ.ಎಸ್. ಪುಟ್ಟಣ್ಣಯ್ಯ ಈಗ್ಗೆ 25 ವರ್ಷದ ಹಿಂದೆ ಕಾಯಕ ಸುಂದರಿಯರು ಎಂದು ನಮ್ಮ ರೈತ ಮಹಿಳೆಯರಿಗೆ ಸನ್ಮಾನ ಮಾಡಿದ್ದರು. ಅಂತದ್ದೇ ಕಾರ್ಯವನ್ನು ಇಂದು ಮುಂಡರಗಿ ರೈತ ಸಂಘದಿಂದ ಮಾಡುತ್ತಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ. ಇದು ಎಲ್ಲೆಡೆ ಮುಂದುವರೆಯಬೇಕು. ತಹಸೀಲ್ದಾರ ಧನಂಜಯ ಮಾಲಗತ್ತಿ ಮಾತನಾಡಿ, ಬರಗಾಲದ ಪರಿಸ್ಥಿತಿಯಲ್ಲಿ ಸರ್ಕಾರದ ನಿಯಮದಂತೆ ಎಫ್.ಐ.ಡಿ. ಮಾಡುವಲ್ಲಿ ಇಲ್ಲಿನ ಎಲ್ಲ ರೈತರು ಸಹಕರಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಮುಂಡರಗಿ ತಾಲೂಕಿನಲ್ಲಿ ಶೇ.85ರಷ್ಟು ಎಫ್.ಐ.ಡಿ. ನೋಂದಣಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ 107 ವರ್ಷದ ರೈತ ಮಹಿಳೆ ಅಂದಮ್ಮ ಹಿರೇಮಠ ಸೇರಿದಂತೆ 300 ಜನ ಹಿರಿಯ ಅನುಭವಿ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ರೈತ ಸಂಘದ ಅಧ್ಯಕ್ಷ ಶರಣಪ್ಪ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್, ರೈತ ಸಂಘದ ರಾಜ್ಯ ಪ್ರ.ಕಾ.ಶಿವಾನಂದ ಇಟಗಿ ಮಾತನಾಡಿದರು. ರವಿಕಿರಣ ಪೂನಚ್ಚ, ಜಿಲ್ಲಾಧ್ಯಕ್ಷ ಮುತ್ತಣಗೌಡ ಚೌಡರಡ್ಡಿ, ಮಲ್ಲಿಕಾರ್ಜುನ ಸಂಕನಗೌಡ್ರ, ಪ್ರಮೋದ ತುಂಬಳ, ಹನಮರಡ್ಡಿ ಗಡ್ಡದ, ರಾಮಚಂದ್ರ ಇಲ್ಲೂರ, ಚಂದ್ರಕಾಂತ ಉಳ್ಳಾಗಡ್ಡಿ, ಹುಸೇನಸಾಬ್ ಕುರಿ, ಶರಣಪ್ಪ ಚೆನ್ನಳ್ಳಿ, ಚಂದ್ರಪ್ಪ ಗದ್ದಿ, ರವಿ ಚಾಕಲಬ್ಬಿ,ತಿಪ್ಪಣ್ಣ ಉಪ್ಪಾರ, ಚಂದ್ರಪ್ಪ ಬಳ್ಳಾರಿ, ಭೀಮೇಶ ಬಂಡಿವಡ್ಡರ, ರಾಘು ಕುರಿ, ಈರಣ್ಣ ಶೀರಿ, ಅಶೋಕ ಬನ್ನಿಕೋಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಂದನಾ ಬೇಲಿಗೌಡ್ರ ಸ್ವಾಗತಿಸಿ, ಅಶ್ವಿನಿ ಗೌಡರ್ ನಿರೂಪಿಸಿದರು.