ಹಾವೇರಿ: ರಾಜ್ಯದಲ್ಲಿ ಅಹಿಂದ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಹಾಗೂ ಸಾಮಾಜಿಕ ಅನ್ಯಾಯದ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನೂತನ ಅಹಿಂದ ಸಂಘಟನೆಯ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಹಿಂದ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಆದ್ಯತೆ ನೀಡಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಹಿಂದ ಸಮುದಾಯದ ಮೇಲೆ ದೌರ್ಜನ್ಯ, ಹಲ್ಲೆ ಹಾಗೂ ತಾರತಮ್ಯದ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಬಾರದು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.ಅಹಿಂದ ಸಮುದಾಯದ ಜನರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕಿದ್ದು, ಸಾಮಾಜಿಕ ನ್ಯಾಯದ ಪರ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಪರಮೇಶ ದೇಸಳ್ಳಿ, ರಾಜ್ಯ ಉಪಾಧ್ಯಕ್ಷ ನಾಗರಾಜ ಬಾಲಣ್ಣನವರ, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ನ್ಯಾಯವಾದಿ ಜಗದೀಶ ಮಲ್ಲೀಕೇರಿ, ಜಿಲ್ಲಾ ಉಪಾಧ್ಯಕ್ಷ ಪುಟ್ಟಪ್ಪ ಕುರಿ, ನಿಂಬಣ್ಣ ಹರಿಜನ ಸೇರಿದಂತೆ ನೂತನ ಪದಾಕಾರಿಗಳನ್ನು ಸನ್ಮಾನಿಸಲಾಯಿತು.ವಕೀಲ ನಾಗರಾಜ ಮಾಳಗಿ, ಅಶೋಕ ಮರೆಯಣ್ಣನವರ, ಉಡಚಪ್ಪ ಮಾಳಗಿ, ರಾಜಶೇಖರ ಮಣ್ಣಮ್ಮನವರ, ಹನುಮಂತಪ್ಪ ಕಂಬಾರ, ನಾಗಪ್ಪ ಮುಳಗುಂದ, ವೀರೇಶ ನಿಂಬಣ್ಣನವರ, ಜಗದೀಶ ಬಣಕಾರ, ಡಿಳ್ಳೇಪ್ಪ ಅಗಡೇರ, ಮಂಜಪ್ಪ ಹಿತ್ತಲಮನಿ, ಮಾಲತೇಶ ಹುಚ್ಚಮರೆಣ್ಣನವರ, ಮಲ್ಲೇಶಪ್ಪ ಡಂಬಳ, ಗುಡ್ಡಪ್ಪ ಪೂಜಾರ ಸೇರಿದಂತೆ ಇತರರು ಇದ್ದರು.