ಸಾರಾಂಶ
ಕೊಪ್ಪಳ: ರಾಜ್ಯ ಸರ್ಕಾರ ಅನ್ನ ಕೊಡುವ ರೈತನಿಗೆ ಮಣ್ಣು ತಿನ್ನುವಂತೆ ಮಾಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಾಲಕ್ಕೆ ಯೂರಿಯಾ ಸಿಗದೇ ಕೊಪ್ಪಳದಲ್ಲಿ ರೈತ ಮಣ್ಣು ತಿಂದಿರುವುದನ್ನು ನೋಡಿ ಬಹಳ ಖೇದವೆನಿಸಿತು. ಈ ಸರ್ಕಾರಕ್ಕೆ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ ಎಂದರು.ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಗೋಲಿಬಾರ್ ಆಗಿದ್ದಕ್ಕೆ ಸಿದ್ದರಾಮಯ್ಯ ರಾಜ್ಯದಲ್ಲಿ ಡಂಗೂರ ಹೊಡೆದಿದ್ದರು. ಪ್ರಸ್ತುತ ರಾಜ್ಯಕ್ಕೆ 6 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬೇಕು. ಕೇಂದ್ರ ಸರ್ಕಾರ 8.75 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಕೊಟ್ಟಿದೆ. ಆದರೂ ಪೂರೈಕೆಯಲ್ಲಿ ವ್ಯತ್ಯಯ ಮಾಡುವ ಮೂಲಕ ಸರ್ಕಾರ ಅನ್ನದಾತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನವರ ರಸಗೊಬ್ಬರ ಅಂಗಡಿ ಹಾಗೂ ಕಾಂಗ್ರೆಸ್ ಮುಖಂಡರ ಮನೆಗಳಿಗೆ ಗೊಬ್ಬರ ಪೂರೈಕೆ ಮಾಡಿ, ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಸೊಸೈಟಿಗಳ ಮೂಲಕ ರೈತರಿಗೆ ಯೂರಿಯಾ ಗೊಬ್ಬರ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ, ರೈತರ ಬಗ್ಗೆ ಗಮನ ಹರಿಸದೇ ಗೋವಾ, ಸಿಂಗಾಪುರದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಕೊಪ್ಪಳ ನಗರದಲ್ಲಿ ಬಲ್ಡೋಟಾ ಕಂಪನಿ ಗೂಂಡಾಗಳನ್ನು ಬಿಟ್ಟು ಹೋರಾಟಗಾರರು ಹಾಗೂ ಕುರಿಗಾಹಿಗಳಿಗೆ ಹೊಡೆಸುವ ಕೆಲಸ ಮಾಡುತ್ತಿದೆ. ಸಚಿವ ತಂಗಡಗಿ, ಶಾಸಕ-ಸಂಸದರು ಬಲ್ಡೋಟಾ ಕಂಪನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಜನರ ಸಮಸ್ಯೆ ಪರಿಹರಿಸುವ ಭಾಗವಾಗಿ ಶೀಘ್ರದಲ್ಲಿಯೇ ಬಿಜೆಪಿ ಅಖಾಡಕ್ಕೆ ಇಳಿಯಲಿದೆ ಎಂದರು.ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ರೈತರಿಗೆ ಗೊಬ್ಬರದ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಖುಷ್ಕಿ ಪ್ರದೇಶದ ರೈತರಂತೂ ಪಡಬಾರದ ಯಾತನೆ ಪಡುತ್ತಿದ್ದಾರೆ. ಆಡಳಿತ ಸಂಪೂರ್ಣ ಕುಸಿದಿದೆ. ಬಲ್ಡೋಟಾ ವಿಚಾರದಲ್ಲಿ ಶಾಸಕ ಹಾಗೂ ಸಂಸದರು ನಡೆದುಕೊಳ್ಳುತ್ತಿರುವ ಧೋರಣೆ ಸರಿಯಿಲ್ಲ. ಇಷ್ಟೊತ್ತಿಗೆ ಕಾರ್ಖಾನೆ ರದ್ದತಿ ಆದೇಶ ತರಬೇಕಿತ್ತು. ಅದನ್ನು ಬಿಟ್ಟು ಕೇವಲ ಕಾಲಹರಣ ಮಾಡುತ್ತಿದ್ದಾರೆ. ನಮ್ಮ ಪಕ್ಷ ಹೋರಾಟಗಾರರೊಂದಿಗೆ ಇರಲಿದ್ದು, ಬಲ್ಡೋಟಾ ಕಂಪನಿಯೊಂದಿಗೆ ಎಲ್ಲರೂ ಸೇರಿ ಉಗ್ರ ಹೋರಾಟ ರೂಪಿಸೋಣ ಎಂದರು.
ಮುಖಂಡರಾದ ಗಣೇಶ ಹೊರತಟ್ನಾಳ, ಮಲ್ಲಿಕಾರ್ಜುನ, ಪ್ರಸಾದ ಗಾಳಿ ಇದ್ದರು.