ಸರ್ಕಾರ ಖಂಡಿತವಾಗಿಯೂ ಡಿಸೆಂಬರ್ 31 ದಾಟಲ್ಲ: ಸಂಸದ ಗೋವಿಂದ ಕಾರಜೋಳ

| Published : Jul 02 2025, 12:24 AM IST

ಸರ್ಕಾರ ಖಂಡಿತವಾಗಿಯೂ ಡಿಸೆಂಬರ್ 31 ದಾಟಲ್ಲ: ಸಂಸದ ಗೋವಿಂದ ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರದಲ್ಲಿನ ಕಚ್ಚಾಟ ಗಮನಿಸಿದರೆ ಖಂಡಿತವಾಗಿಯೂ ಡಿಸೆಂಬರ್ 31 ದಾಟುವುದಿಲ್ಲ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಾಂಗ್ರೆಸ್ ಸರ್ಕಾರದಲ್ಲಿನ ಕಚ್ಚಾಟ ಗಮನಿಸಿದರೆ ಖಂಡಿತವಾಗಿಯೂ ಡಿಸೆಂಬರ್ 31 ದಾಟುವುದಿಲ್ಲ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಸದ್ಯ 70-80 ಜನ ಶಾಸಕರು ಅಸಮಾಧಾನಿತರಾಗಿದ್ದಾರೆ. ಎರಡು ವರ್ಷ ಆಯ್ತು ಅಧಿಕಾರಕ್ಕೆ ಬಂದು. ಗ್ರಾಮಗಳಲ್ಲಿ ಒಂದೇ ಒಂದು ಕಾಮಗಾರಿ ಆಗಿಲ್ಲ. ಹಳ್ಳಿ ಜನ ಛೀಮಾರಿ ಹಾಕುತ್ತಿದ್ದಾರೆ ಎಂದು ಹೈಕಮಾಂಡ್ ನಾಯಕರ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರೆ. 52 ಜನ ನಾಯಕರು ಪತ್ರವನ್ನೂ ಕೊಟ್ಟಿದ್ದಾರೆ. ಬಡವರಿಗೆ ಮನೆ ಕೊಡೋಕೆ ಆಗ್ತಿಲ್ಲ. ಅವರಿಗೆ ಮನೆ ಕೊಡಬೇಕೆಂದರೆ ₹25000 ದುಡ್ಡು ಕೇಳಲಾಗುತ್ತಿದೆ ಎಂದು ಸುರ್ಜೆವಾಲಾ ಹಾಗೂ ಖರ್ಗೆ ಎದುರು ಹೇಳುತ್ತಿದ್ದಾರೆ. ಸುರ್ಜೆವಾಲಾ ಅವರು ತೇಪೆ ಹಚ್ಚುವ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ತೇಪೆ ಹಚ್ಚುವುದು ಅಂದರೆ ಹಳೆಯ ಬಟ್ಟೆಗಳಿಗೆ ಹೊಲಿಗೆ ಹಾಕಿದಂತೆ. ಆ ಹೊಲಿಗೆ ಬಹಳ ದಿನ ಉಳಿಯಲ್ಲ. ಬಟ್ಟೆ ಜಿಗಿಸತ್ತ ಮೇಲೆ ಹೊಲಿಗೆ ಬಿಚ್ಚಿಹೋಗುತ್ತೆ ಎಂದು ಲೇವಡಿ ಮಾಡಿದರು.

ನನ್ನ ಮಂತ್ರಿ ಮಾಡಿಲ್ಲ. ನಿನ್ನ ಮಂತ್ರಿ ಮಾಡಿಲ್ಲ ಎಂದು ಈ ಸರ್ಕಾರ ಇದ್ದರೆ ಎಷ್ಟು, ಹೋದ್ರೆ ಎಷ್ಟು ಎಂದು ರಾಯರಡ್ಡಿ, ಬಿ.ಆರ್. ಪಾಟೀಲ, ದೇಶಪಾಂಡೆ ಅಂತಹ ಹಿರಿಯರು ಹೇಳುತ್ತಿದ್ದಾರೆ. ಸರ್ಕಾರದಲ್ಲಿ ನಾಲ್ಕು ಗುಂಪುಗಳಾಗಿ ಕಚ್ಚಾಡುತ್ತಿದ್ದಾರೆ. ಅಲ್ಪಸಂಖ್ಯಾತ, ದಲಿತ, ಒಕ್ಕಲಿಗ, ಲಿಂಗಾಯತ ಎಂದು ಸತ್ತ ದನ ತಿನ್ನಲು ರಣಹದ್ದುಗಳಂತೆ ಕಚ್ಚಾಡುತ್ತಿದ್ದಾರೆ. ಇದನ್ನು ನೋಡಿದರೆ ಈ ಸರ್ಕಾರ ಖಂಡಿತವಾಗಿಯೂ ಡಿಸೆಂಬರ್ 31 ದಾಟುವುದಿಲ್ಲ ಎಂದು ಪುನರುಚ್ಚರಿಸಿದರು.

ಕಾಂಗ್ರೆಸ್‌ನ ಒಡಕಿನ ಲಾಭವನ್ನ ಬಿಜೆಪಿ ಪಡೆದುಕೊಳ್ಳುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಸೆಂಬರ್ 31ರ ನಂತ್ರ ಹೇಳುತ್ತೇನೆ. ನಾವು ಯಾವುದೇ ಕಾರಣಕ್ಕೂ ತೇಪೆ ಸರ್ಕಾರ ಮಾಡಲ್ಲ. ಹಾಲು ಕುಡಿದೇ ಸಾಯುತ್ತಿದ್ದಾರೆ. ನಾವೇಕೆ ವಿಷ ಹಾಕೋಣ. ಮಧ್ಯಂತರ ಚುನಾವಣೆ 224 ಜನರಿಗೆ ಇಷ್ಟ ಇರಲಿಕ್ಕಿಲ್ಲ. ಪರಿಸ್ಥಿತಿ ಹಂಗಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾರಜೋಳ, ವಿಜಯೇಂದ್ರ ಅವರು ಸಮರ್ಥವಾಗಿದ್ದಾರೆ. ಸಮರ್ಥವಾಗಿ ಅಧ್ಯಕ್ಷ ಸ್ಥಾನ ನಿರ್ವಹಿಸುತ್ತಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ ಅವರೂ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ತೂಕ ಹೆಚ್ಚಾದ ಕಡೆಗೆ ಒಲವು ಜಾಸ್ತಿ:

ಡಿಕೆಶಿ ಸಿಎಂ ಆಗಬೇಕು ಎಂಬ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಗೆ ಸಂಸದ ಕಾರಜೋಳ ಉತ್ತರಿಸಿ, ಅವರಲ್ಲಿ ಈಗಾಗಲೇ 70 ರಿಂದ 80 ಜನ ಶಾಸಕರು ಅಸಮಾಧಾನಗೊಂಡಿದ್ದಾರೆ. ರಾಜನೀತಿ ಅಂದರೆ ಮಂಗ್ಯಾ ಬೆಣ್ಣೆ ತೂಗಿದ ಹಾಗಿರುತ್ತೆ. ಯಾವ ಕಡೆ ತೂಕ ಹೆಚ್ಚಾಗುತ್ತೋ ಆ ಕಡೆಗೆ ಇರುತ್ತೆ. ತೂಕ ಹೆಚ್ಚಾದ ಕಡೆಗೆ ಒಲುವು ಜಾಸ್ತಿ ಇರುತ್ತೆ. ಅದೇ ರೀತಿ ಪರಿಸ್ಥಿತಿ ಈಗ ಕಾಂಗ್ರೆಸ್‌ನಲ್ಲಿದೆ ಎಂದು ಕಾರಜೋಳ ತಿಳಿಸಿದರು.ಹುಲಿಗಳ ಸಾವಿನ ಹೊಣೆ ಸರ್ಕಾರ ಹೊರಲಿ:

ರಾಜ್ಯದಲ್ಲಿ ಐದು ಹುಲಿಗಳಿಗೆ ವಿಷ ಹಾಕಿ ಸಾಯಿಸಿರುವ ಪ್ರಕರಣ ಪ್ರಸ್ತಾಪಿಸಿದ ಸಂಸದ ಕಾರಜೋಳ ಅವರು, ಸರ್ಕಾರದಲ್ಲಿ ಆಡಳಿತ ಕುಸಿದಿದೆ. ಹೊಟ್ಟೆ ಪಾಡಿಗಾಗಿ ಅರಣ್ಯ ಕಾವಲುಗಾರರಿಗೆ ಪ್ರತಿ ತಿಂಗಳು ಸಂಬಳ ಕೊಟ್ಟರೆ ಮನೆ ನಡೆಯುತ್ತದೆ. ಆರೇಳು ತಿಂಗಳು ಸಂಬಳ ಕೊಡದೇ ಹೋದರೆ ಅವರು ಹೇಗೆ ಬದುಕಬೇಕು? ಅದಕ್ಕಾಗಿ ಕಾವಲುಗಾರರು ಇಲ್ಲ. ಕಾವಲುಗಾರರು ಇಲ್ಲದ್ದಕ್ಕೆ ಹುಲಿಗಳು ಸಾಯುವಂತಾಯಿತು. ಆ ಹುಲಿಗಳ ಸಾವಿನ ಹೊಣೆಯನ್ನು ಸರ್ಕಾರ ಹೊರಬೇಕು. ರಾಜ್ಯದಲ್ಲಿ ಪ್ರವಾಹ ಸ್ಥಿತಿ ಎದುರಿಸುವ ಬಗ್ಗೆ ಸಚಿವರು, ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸದಿರುವ ಹಿನ್ನೆಲೆ ಗಮನಿಸಿದರೆ ರಾಜ್ಯದಲ್ಲಿ ಸರ್ಕಾರವೇ ಇಲ್ಲವೆಂದ ಮೇಲೆ ಅಧಿಕಾರಿಗಳು ಸಭೆ ಎಲ್ಲಿಂದ ನಡೆಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಸೆಂಬರ್ 31ರ ಬಳಿಕ ಹೇಳುವೆ: ರಾಜ್ಯ ಸರ್ಕಾರ ಡಿಸೆಂಬರ್ 31 ದಾಟುವುದಿಲ್ಲ, ಅಂತಹ ಪರಿಸ್ಥಿತಿಯನ್ನು ಬಿಜೆಪಿ ಸದುಪಯೋಗ ಮಾಡಿಕೊಂಡು, ಅಧಿಕಾರಕ್ಕೆ ಬರುವ ವಿಚಾರ ಪ್ರಸ್ತಾಪಿಸಿದ ಸಂಸದ ಗೋವಿಂದ ಕಾರಜೋಳ, ನಮ್ಮದು ರಾಜಕೀಯ ಪಕ್ಷ, ಎಣ್ಣಿ ಬಂದಾಗ ಕಣ್ಣು ಮುಚ್ಚಿಕೊಂಡು ಕುಂಡ್ರುವುದು ರಾಜಕೀಯ ಅಲ್ಲ. ಮಧ್ಯಂತರ ಚುನಾವಣೆ 224 ಶಾಸಕರಿಗೆ ಬೇಕಾಗಿರಲಿಕ್ಕಿಲ್ಲ. ಆದರೆ, ಪರಿಸ್ಥಿತಿ ಹಂಗಿದೆ. ರಾಜ್ಯದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಅಲ್ಪಾಯು ಇದೆ. ನಮ್ಮದು ರಾಜಕೀಯ ಪಕ್ಷವಾಗಿ ಕಾಲಕಾಲಕ್ಕೆ ನಿರ್ಣಯಗಳನ್ನು ರಾಜಕೀಯವಾಗಿ, ಆಡಳಿತಾತ್ಮವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಆ ಎಲ್ಲ ನಿರ್ಣಯಗಳನ್ನು ಪ್ರಬುದ್ಧ ನಾಯಕತ್ವ ತೆಗೆದುಕೊಳ್ಳುತ್ತದೆ. ಬಿಜೆಪಿ ಸಂಪರ್ಕದಲ್ಲಿ ಕೆಲ ಕಾಂಗ್ರೆಸ್‌ನ ಅಸಮಾಧಾನ ಶಾಸಕರು ಇದ್ದಾರೆಯೇ ಎನ್ನುವ ಪ್ರಶ್ನೆಗೆ ನಾನಿವತ್ತು ಏನೂ ಹೇಳಲ್ಲ. ಡಿಸೆಂಬರ್ 31ರ ಬಳಿಕ ಆ ಬಗ್ಗೆ ಹೇಳುತ್ತೇನೆ ಎಂದು ಹೇಳಿದರು.