ಸಾರಾಂಶ
ರಟ್ಟೀಹಳ್ಳಿ: ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ ವಿರುದ್ಧ ಸುಗ್ರೀವಾಜ್ಞೆ ಸಿದ್ಧಪಡಿಸಿ ರಾಜ್ಯಪಾಲರಿಗೆ ಕಳುಹಿಸಿದರೆ ರಾಜ್ಯ ಪಾಲರು ಕ್ಷುಲ್ಲಕ ಕಾರಣ ನೀಡಿ ಅಂಕಿತ ಹಾಕದೆ ತಿರಸ್ಕರಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಖಾರವಾಗಿ ಪ್ರಶ್ನಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸಾಲಗಾರರು ರಾಜ್ಯದಲ್ಲಿ ಸಾಲು ಸಾಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಹಾವೇರಿ ಜಿಲ್ಲೆಯೂ ಹೊರತಾಗಿಲ್ಲ, ರೈತ ಸಂಘಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಒತ್ತಡಕ್ಕೆ ಮಣಿದ ರಾಜ್ಯ ಸರಕಾರ ಮೈಕ್ರೋ ಫೈನಾನ್ಸ್ ವಿರುದ್ಧ ಸುಗ್ರಿವಾಜ್ಞೆ ಹೊರಡಿಸಿ ಬಡವರ ಪರ ಕೆಲ ಅಂಶಗಳನ್ನು ಸಿದ್ಧಪಡಿಸಿರಾಜ್ಯಪಾಲರಿಗೆ ಅಂಕಿತ ಹಾಕಲು ಕಳುಹಿಸಿದರೆ ರಾಜ್ಯಪಾಲರು ಇದರಿಂದ ಫೈನಾನ್ಸ ಕಂಪನಿಗಳಿಗೆ ತೊಂದರೆಯಾಗುವುದಲ್ಲದೆ ಮುಂದಿನ ದಿನಗಳಲ್ಲಿ ಬಡವರಿಗೆ ಸಕಾಲದಲ್ಲಿ ಸಾಲ ಸಿಗುವುದಿಲ್ಲ ಹಾಗೂ ಸುಗ್ರೀವಾಜ್ಞೆಯನ್ನು ಸದನದಲ್ಲಿಟ್ಟು ಚರ್ಚೆ ಮಾಡಿ ಅಂಗೀಕಾರ ಮಾಡಿಕೊಳ್ಳಿ ಎಂದು ಸಬೂಬು ಹೇಳಿ ಸುಗ್ರಿವಾಜ್ಞೆಗೆ ಸಹಿ ಹಾಕದೆ ವಾಪಸ್ ಕಳಿಸಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೀವ್ರವಾಗಿ ಖಂಡಿಸುತ್ತಿದೆ ಎಂದರು.
ತಾಲೂಕಾಧ್ಯಕ್ಷ ಶಂಕರಗೌಡ ಶಿರಗಂಬಿ ಮಾತನಾಡಿ, ಮುಂಬರುವ ದಿನಗಳಲ್ಲಿ ಬಡವರ ರಕ್ತ ಹಿರುವ ಫೈನಾನ್ಸ ಕಂಪನಿಗಳ ವಿರುದ್ಧ ಕಡಿವಾಣ ಹಾಕದೇ ನಿರ್ಲಕ್ಷ್ಯ ವಹಿಸಿದರೆ ರೈತ ಸಂಘಟನೆ ಮೂಲಕ ಪ್ರತಿ ಹಳ್ಳಿಗಳಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಅಕ್ರಮ ಬಡ್ಡಿ ದಂಧೆಕೋರರ ಕಾವಲು ಪಡೆ ತಂಡಗಳ ರಚನೆ ಮಾಡಿ ರೈತ ಸಮುದಾಯ ಮತ್ತು ಬಡವರ ರಕ್ಷಣೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಾ ಸಿದ್ಧ ಎಂದು ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ನೇರ ಎಚ್ಚರಿಕೆ ನೀಡಿದರು.ಎ.ಆರ್. ಮಣಕೂರ, ರಾಜು ಮಳಗೊಂಡರ, ಬಸನಗೌಡ ಗಂಟೆಪ್ಪಗೌಡ್ರ, ಶಂಭಣ್ಣ ಮುತ್ತಿಗಿ, ಗಣೇಶ ಸಾಳುಂಕೆ, ಚಂದ್ರಪ್ಪ ಅಂಗಡಿ, ಎಚ್.ಎಸ್. ಮುಲ್ಲಾ, ನಾಗನಗೌಡ ಪಾಟೀಲ್, ಜಗದೀಶ ಮೂಲಿಮನಿ, ಎ.ಎ. ಪಾಟೀಲ್ ಮುಂತಾದವರು ಇದ್ದರು.