ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದಲ್ಲಿ ಶ್ರೀ ಹಿಂಡಿಮಾರಮ್ಮನ ಕೊಂಡೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಯಳಂದೂರು
ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದಲ್ಲಿ ಶ್ರೀ ಹಿಂಡಿಮಾರಮ್ಮನ ಕೊಂಡೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಬೆಳಿಗ್ಗೆಯಿಂದಲೇ ಹಿಂಡಿಮಾರಮ್ಮ ದೇವಿಗೆ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳನ್ನು ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಂಜೆ 5 ಗಂಟೆಗೆ ತಮ್ಮಡಿಗಳು ದೇವಿಯ ಉತ್ಸವ ಮೂರ್ತಿಯೊಂದಿಗೆ ಅಗರ ಗ್ರಾಮದ ರಸ್ತೆ ಬದಿಯಲ್ಲೇ ಹಾಕಿದ್ದ ಕೊಂಡದ ಸ್ಥಳಕ್ಕೆ ಹೋಗಿ ಕೊಂಡವನ್ನು ಹಾಯ್ದರು, ತಮ್ಮಡಿಗಳಲ್ಲದೇ ಈ ಕೊಂಡಕ್ಕೆ ಹರಕೆ ಹೊತ್ತು ಬಂದಿದ್ದ ನೂರಾರು ಭಕ್ತರು ತಮ್ಮಡಿಗಳ ನಂತರ ಕೊಂಡವನ್ನು ಹಾಯ್ದರು. ಜೊತೆಗೆ ಹರಕೆ ಹೊತ್ತಿದ್ದ ಭಕ್ತರು ಸಹ ಕೊಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು. ಯಳಂದೂರು, ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಹಾಗೂ ಕೊಳ್ಳೇಗಾಲ ತಾಲೂಕುಗಳೂ ಸೇರಿದಂತೆ ವಿವಿಧ ಜಿಲ್ಲೆ, ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ಕೊಂಡೋತ್ಸದ ದೃಶ್ಯವನ್ನು ಕಣ್ತುಂಬಿಕೊಂಡರು.
ಹಿಂಡಿ ಮಾರಮ್ಮನ ಕೊಂಡೋತ್ಸವದ ಪ್ರಯುಕ್ತ ಬಂದಿದ್ದ ಭಕ್ತಾಧಿಗಳು ದೇವಸ್ಥಾನದ ಅಕ್ಕಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ಸಿಹಿ ತಿನಿಸುಗಳು, ಬಲೂನ್ಗಳು ಸೇರಿದಂತೆ ಇತರೆ ಮಕ್ಕಳ ಆಟಿಕೆಗಳನ್ನು ಕೊಂಡುಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು.ದೀಪಾವಳಿ ಹಬ್ಬದಂದು ಆರಂಭವಾಗುವ ತಾಲೂಕಿನ ಅಗರ- ಮಾಂಬಳ್ಳಿ ಗ್ರಾಮದ ಹಿಂಡಿಮಾರಮ್ಮನ ದೇವರ ಹಬ್ಬವು 4 ದಿನಗಳ ಕಾಲ ನಡೆಯುತ್ತದೆ. ಅಗರ ಮಾಂಬಳ್ಳಿ, ಕಿನಕಹಳ್ಳಿ, ಕಟ್ನವಾಡಿ, ಬಸವಾಪುರ, ಬನ್ನಿಸಾರಿಗೆ, ಸೂರಪುರ, ಕುಣಗಳ್ಳಿ, ರಾಮಾಪುರ, ಹೊಸ ಉಪ್ಪಲಗೇರಿ ಗ್ರಾಮಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಕೊಂಡೋತ್ಸವದಲ್ಲಿ ಹರಕೆ ಹೊತ್ತಿದ್ದ ನೂರಾರು ಭಕ್ತರು ತಮ್ಮ ಬಾಯಿಗೆ ಬೀಗಗಳನ್ನು ಹಾಕಿಕೊಂಡು ಹರಕೆ ತೀರಿಸಿದರಲ್ಲದೇ ಕೊಂಡವನ್ನು ಹಾಯ್ದರು. ತಮ್ಮ ಇಷ್ಟಾರ್ಥಗಳನ್ನು ಮಾರಮ್ಮ ದೇವಿಯ ಬಳಿ ಹರಕೆ ಹೊತ್ತಿಕೊಂಡ ಭಕ್ತರು ತಮ್ಮ ಹರಕೆಗಳು ಫಲಪ್ರದವಾದ ನಂತರ ದೀಪಾವಳಿ ಸಮಯದಲ್ಲಿ ನಡೆಯುವ ಕೊಂಡೋತ್ಸವದಲ್ಲಿ ಈ ವಿಧಿಯನ್ನು ತೀರಿಸುವ ವಾಡಿಕೆ ಇದೆ. ತಮ್ಮ ಬಾಯಿಗೆ ದೇವಸ್ಥಾನದ ತಮ್ಮಡಿಗಳಿಂದ ಬೀಗ ಹಾಕಿಸಿಕೊಂಡು ದೇವಸ್ಥಾನದಿಂದ ಹೊರಡುವ ಇವರು, ಕೊಂಡೋತ್ಸವವು ನಡೆಯುವ ಸ್ಥಳದವರೆಗೆ ಮಾರಮ್ಮ ದೇವಿಯ ಉತ್ಸವ ಮೂರ್ತಿಯ ಜತೆ ಹೋಗಿ ತಮ್ಮಡಿಗಳು ಕೊಂಡವನ್ನು ಹಾಯ್ದ ನಂತರ ಇವರು ಕೊಂಡವನ್ನು ಹಾಯುವುದು ವಾಡಿಕೆ.