ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಆರಾಧ್ಯ ದೈವ ಲೋಕೇಶ್ವರ ಜಾತ್ರಾ ಮಹೋತ್ಸವವು ಫೆ.೧೨ ರಿಂದ ೨೦ ರವರೆಗೆ ಆಚರಿಸುವ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಐ ಮಹಾದೇವ ಸಿರಹಟ್ಟಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಸುತ್ತ-ಮುತ್ತಲಿನ ಗ್ರಾಮದ ಗಣ್ಯರು, ಜಾತ್ರಾ ಉತ್ಸವ ಸಮಿತಿ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.ಲೋಕೇಶ್ವರ ಜಾತ್ರಾ ಕಮಿಟಿಯ ಉಸ್ತುವಾರಿ ಪ್ರಕಾಶ ಚುಳಕಿ ಮಾತನಾಡಿ, ಜಾತ್ರೆ ಸಮಯದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಗುಂಪು, ಗುಂಪಾಗಿ ಸೇರಿದ ಮಹಿಳೆಯರಲ್ಲಿ ಕಳ್ಳತನ ಹೆಚ್ಚಾಗುವುದು ಎಲ್ಲರೂ ಎಚ್ಚರಿಕೆಯಿರಲು ಸೂಚಿಸಿದರು. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೇ ಜಾತ್ರೆ ಯಶಸ್ವಿಗೆ ಎಲ್ಲರೂ ಒಗ್ಗಟ್ಟಾಗಿ ಜಾತ್ರೆ ಆಚರಿಸೋಣ ಎಂದರು.ಫೆ.೧೬ ರಂದು ಸಂಜೆ ೫ ಗಂಟೆಗೆ ರಥೋತ್ಸವ ವೇಳೆ ಹೆಚ್ಚಿನ ಭಕ್ತರು ಸೇರಿರುತ್ತಾರೆ. ಆ ವೇಳೆ ಪೊಲೀಸ್ ಬಂದೋಬಸ್ತ ಹೆಚ್ಚಿಗೆ ನಿಯೋಜಿಸಲು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.ಪಟ್ಟಣದ ಮುಖಂಡ ಆನಂದ ಹಿರೇಮಠ ಮಾತನಾಡಿ, ಲೋಕೇಶ್ವರ ದೇವಸ್ಥಾನದ ಪುರಾತನ ದೇವಸ್ಥಾನದಲ್ಲಿ ಒಂದಾಗಿದ್ದು, ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಜನ ಆಗಮಿಸುವರು. ಪಟ್ಟಣ ಪಂಚಾಯತಿ, ಪೊಲೀಸ್ ಇಲಾಖೆ, ಹೆಸ್ಕಾಂ ಅಧಿಕಾರಿಗಳು, ಭಕ್ತರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು. ಯಮನಪ್ಪ ಹೊರಟ್ಟಿ ಮಾತನಾಡಿ, ಹೆಸ್ಕಾಂ ಸಿಬ್ಬಂದಿಯರಿಗೂ ಜಾತ್ರೆಯ ಸಮಯದಲ್ಲಿ ಯಾವುದೇ ರೀತಿಯ ವಿದ್ಯುತ್ ಅವಘಡ ಲೈಟಿಂಗ್ ವ್ಯವಸ್ಥೆಯಲ್ಲಿ ಕೊರತೆ ಉಂಟಾಗದಂತೆ ಮುನ್ನಚ್ಚರಿಕೆ ಕ್ರಮಕೈಗೊಳ್ಳಲು ಸೂಚನೆ ನೀಡಿ ಜಾತ್ರೆ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ೨೪/೭ ನಿಗಾವಹಿಸಲು ಸೂಚನೆ ನೀಡಲಾಯಿತು. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಫೀಕ್ ಭೈರಕದಾರ ಮಾತನಾಡಿ, ಪೊಲೀಸ್ ಸಿಬ್ಬಂದಿ ಜಾತ್ರೆಯ ಸಮಯದಲ್ಲಿ ಬೆಳಗಾವಿ-ರಾಯಚೂರ ಹೆದ್ದಾರಿಯಲ್ಲಿ ಟ್ರಾಫೀಕ್ ಆಗದಂತೆ ನಿಗಾವಹಿಸುವುದು ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ವಾಹನಗಳನ್ನು ಪಾರ್ಕಿಂಗ್‌ನಲ್ಲಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲು ಮನವಿ ಮಾಡಿದರು. ಸಿಪಿಐ ಮಹಾದೇವ ಶಿರಹಟ್ಟಿ ಮಾತನಾಡಿ, ಜಾತ್ರೆಯ ಸಮಯದಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಜಾತ್ರೆಗೆ ಬಂದ ಭಕ್ತರು ಪೊಲೀಸ್ ಇಲಾಖೆ ಸಿಬ್ಬಂದಿಯೊಂದಿಗೆ ಸಹಕರಿಸಲು ಮನವಿ ಮಾಡಿದರು. ಸಭೆಯಲ್ಲಿ ಭಾಗವಹಿಸಿದ್ದ ಅಂಗಡಿಕಾರರು ಮತ್ತು ಮಾಲೀಕರುಗಳಿಗೆ ಜಾತ್ರೆಯ ಸಮಯದಲ್ಲಿ ಸ್ವಚ್ಛತೆ ಕಾಪಾಡಲು ತಿಳಿಸಲಾಯಿತು.
ಸಭೆಯಲ್ಲಿ ಪಿಎಸೈ ಕೆ.ಬಿ.ಜಕ್ಕನ್ನವರ, ಮುಖಂಡರಾದ ಷಣ್ಮುಖಪ್ಪ ಕೋಲ್ಹಾರ, ಮಾರುತಿ ರಂಗಣ್ಣವರ, ಮಹೇಶ ಹುಗ್ಗಿ, ಆನಂದ ಹವಳಖೋಡ, ಗ್ರಾಪಂ ಮಾಜಿ ಅಧ್ಯಕ್ಷ ಅರ್ಜುನ ಕೊಪ್ಪದ, ಅರುಣ ನರಗುಂದ, ಗಿರೀಶ ಹುಕುಮನವರ, ಜಾಕೀರ್ ಅತ್ತಾರ, ಸುಲ್ತಾನ್ ಕಲಾದಗಿ, ಮುತ್ತಪ್ಪ ಚೌಧರಿ, ಭೀಮಶಿ ನಾವಲಗಿ, ಪೊಲೀಸ್ ಸಿಬ್ಬಂದಿಯರಾದ ಎಸ್.ಎಸ್.ಗಂಗಾಯಿ, ಪಪಂ ಆರೋಗ್ಯಾಧಿಕಾರಿ ಭಾಗ್ಯಾಶ್ರೀ ಪಾಟೀಲ, ಎಫ್‌ಡಿಇ ಸಂತೋಷ ಹಾಗೂ ಸ್ಥಳೀಯ ಮುಖಂಡರು, ಲೋಕೇಶ್ವರ ಜಾತ್ರಾ ಕಮಿಟಿ ಪದಾಧಿಕಾರಿಗಳು ಸುತ್ತ-ಮುತ್ತಲಿನ ಗ್ರಾಮಸ್ಥರು ಇದ್ದರು.