ಸವಣೂರು ತಾಲೂಕಿನ ಕಾರಡಗಿ ಕ್ಷೇತ್ರದಲ್ಲಿ ಮಂಗಳವಾರ ವೀರಭದ್ರೇಶ್ವರ ಜಯಂತ್ಯುತ್ಸವವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಸವಣೂರು: ತಾಲೂಕಿನ ಕಾರಡಗಿ ಕ್ಷೇತ್ರದಲ್ಲಿ ಮಂಗಳವಾರ ವೀರಭದ್ರೇಶ್ವರ ಜಯಂತ್ಯುತ್ಸವವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಜಯಂತ್ಯುತ್ಸವದ ಅಂಗವಾಗಿ ಪ್ರಾಥಃಕಾಲ ಕಾರಡಗಿ ಕ್ಷೇತ್ರದ ಉದ್ಭವ ವೀರಭದ್ರೇಶ್ವರ ಮಹಾಸ್ವಾಮಿಗೆ ವಿಶೇಷ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳಲಾಯಿತು.

ಬೆಳಗ್ಗಿನಿಂದಲೇ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಮಧ್ಯಾಹ್ನ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಂತರ, ವೀರಭದ್ರೇಶ್ವರ ಸ್ವಾಮಿಯ ಭಾವಚಿತ್ರವನ್ನು ವಿಶೇಷವಾಗಿ ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಕೈಗೊಳ್ಳಲಾ ಯಿತು. ಮೆರವಣಿಗೆಯಲ್ಲಿ ವೀರಗಾಸೆ ಕಲಾವಿದರು ಹಾಗೂ ವಿವಿಧ ವಾದ್ಯಮೇಳಗಳ ತಂಡಗಳು ಪಾಲ್ಗೊಂಡು ಭಕ್ತಿಯ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಿದವು.

ಗ್ರಾಮದ ಗುರು-ಹಿರಿಯರು, ಮಹಿಳೆಯರು, ಯುವಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ ವೀರಭದ್ರೇಶ್ವರ ಸ್ವಾಮಿಯ ಜಯಘೋಷ ಮೊಳಗಿಸಿದರು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಸ್ವಾಮಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.

ಕಾರಡಗಿ ದೇವಸ್ಥಾನ ಕಮಿಟಿ ಪದಾಧಿಕಾರಿಗಳು, ಸರ್ವ ಸದಸ್ಯರು, ಗ್ರಾಮದ ಪ್ರಮುಖರು, ಭಕ್ತಾದಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಪುರೋಹಿತ ಘಟಕದ ರಾಜ್ಯ ಉಪಾಧ್ಯಕ್ಷ ವೇ.ಮೂ. ಸಂತೋಷಕುಮಾರಯ್ಯಶಾಸ್ತ್ರಿ ಹಾಗೂ ಅವರ ಸಹಸ್ನೇಹ ಬಳಗ ವೀರಭದ್ರೇಶ್ವರ ಸ್ವಾಮಿಯ ಭಾವಚಿತ್ರದ ಮೆರವಣಿಗೆ ನೇತೃತ್ವ ವಹಿಸಿದ್ದರು. ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂತಿಮವಾಗಿ ಕಾರಡಗಿ ವೀರಭದ್ರೇಶ್ವರ ಸನ್ನಿಧಿಗೆ ಸಂಪನ್ನಗೊಳಿಸಲಾಯಿತು.

ಸಂಜೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸುವ ಮೂಲಕ ಜಯಂತ್ಯುತ್ಸವದ ಧಾರ್ಮಿಕ ಕಾರ್ಯಕ್ರಮ ಸಮಾರೋಪಗೊಂಡಿತು.