ಸಾರಾಂಶ
ನಾಲ್ಕು ದಿನಗಳ ಕಾಲ ವೈಭವಪೂರ್ವಕವಾಗಿ ನಡೆದ ಹಲಗೂರು ಮತ್ತು ವಳಗೆರೆದೊಡ್ಡಿ ಎರಡು ಗ್ರಾಮಗಳ ಆರಾಧ್ಯ ದೇವತೆ ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವ ಶನಿವಾರ ಬೆಳಗಿನ ಜಾವ ಕೊಂಡೋತ್ಸವದೊಂದಿಗೆ ತೆರೆ ಕಂಡಿತು.
ಕನ್ನಡಪ್ರಭ ವಾರ್ತೆ ಹಲಗೂರು
ನಾಲ್ಕು ದಿನಗಳ ಕಾಲ ವೈಭವಪೂರ್ವಕವಾಗಿ ನಡೆದ ಹಲಗೂರು ಮತ್ತು ವಳಗೆರೆದೊಡ್ಡಿ ಎರಡು ಗ್ರಾಮಗಳ ಆರಾಧ್ಯ ದೇವತೆ ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವ ಶನಿವಾರ ಬೆಳಗಿನ ಜಾವ ಕೊಂಡೋತ್ಸವದೊಂದಿಗೆ ತೆರೆ ಕಂಡಿತು.ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ದೇವಿಗೆ ಅಭಿಷೇಕ, ಶ್ರೀಸ್ತೋತ್ರ ಪಾರಾಯಣ, ದುರ್ಗ ಸ್ತೋತ್ರ ಪಾರಾಯಣಗಳೊಂದಿಗೆ ಮಹಾ ಮಂಗಳಾರತಿ ಮಾಡಿದ ನಂತರ ಮುತ್ತೈದೆಯರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ವಿನಿಮಯ ಮಾಡಿಕೊಂಡು ಪಾನಕ ಕೋಸಂಬರಿ ನೀಡಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಶುಕ್ರವಾರ ಕರಿಬೀದಿಯ ಕರಗದ ಮನೆಯಲ್ಲಿ ಪಟ್ಟಲದಮ್ಮನ ದೇವರ ಕರಗಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿದ ನಂತರ ಎಳವಾರ ಓಲೆ ಬಂಡಿ ಮತ್ತು ಹರಕೆ ಹೊತ್ತವರು ಪಾನಕ, ಮಜ್ಜಿಗೆ ಮಾಡಿಕೊಂಡು ಪ್ರಮುಖ ಬೀದಿಗಳಲ್ಲಿ ಗೊಂಬೆ ಕುಣಿತ, ವೀರಗಾಸೆ ಕುಣಿತ, ಮರಗಾಲು ಕುಣಿತ ಹಾಗೂ ಕೇರಳದ ತೆಂಡೆವಾದ್ಯಗಳನ್ನು ಬಾರಿಸುತ್ತಾ ಮೆರವಣಿಗೆ ಮುಖಾಂತರ ಗ್ರಾಮದ ಹೊರಭಾಗದಲ್ಲಿರುವ ದೇವಸ್ಥಾನಕ್ಕೆ ಹೋಗಿ ಕೊಂಡದ ಬಾಯಿಗೆ ಸೌದೆಗಳನ್ನು ಹಾಕಿದರು. ನಂತರ ಬಂದ ಭಕ್ತರಿಗೆ ಪಾನಕ ಮಜ್ಜಿಗೆಯನ್ನು ನೀಡಿದರು.ರಾತ್ರಿ ದೇವರ ಕರಗವನ್ನು ಕರಗದ ಮನೆಯಿಂದ ತೆಗೆದುಕೊಂಡು ಬಂದು ಶ್ರೀವೀರಭದ್ರ ದೇವಸ್ಥಾನದ ಆವರಣದಲ್ಲಿ ಕರಗಕ್ಕೆ ಹಾಗೂ ಪಟ್ಟಲದಮ್ಮನ ಗಿಂಡಿಗೆ ಮಲ್ಲಿಗೆ, ಕನಕಾಂಬರ ಪುಷ್ಪಾಗಳಿಂದ ಮತ್ತು ಹೊಂಬಾಳೆ ಯಿಂದ ಅಲಂಕರಿಸಲಾಯಿತು.
ಕರಗ ಹೊತ್ತು ಮಡಿವಾಳ ಹಾಸುವ ಮಡಿಯ ಮೇಲೆ ಹೊರಟಾಗ ಜೊತೆಯಲ್ಲಿ ಕೊಂಡ ಹಾಯುವ ಅರ್ಚಕ ಕೃಷ್ಣಪ್ಪ ಪಟ್ಟಲದಮ್ಮನ ಗಿಂಡಿಯನ್ನು ಹೊತ್ತು, ಪೂಜೆ ಪುನಸ್ಕಾರಗಳ ನೇತೃತ್ವ ವಹಿಸಿದ ಪ್ರಸಾದ್ ಅಗೋರ ಹಾಗೂ ವಿದ್ಯಾಗಣಪತಿ ದೇವಸ್ಥಾನದ ಅರ್ಚಕರಾದ ನಾಗರಾಜು ಸೇರಿದಂತೆ ಅವರ ಶಿಷ್ಯಂದಿರು, ದೇವರ ಬಸವ ಹಾಗೂ ತಂಬಿಟ್ಟಿನ ಆರತಿ ಹೊತ್ತ ಮುತ್ತೈದೆಯರು ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ತೆರಳಿ, ಪೂಜೆ ಪುನಸ್ಕಾರಗಳು ನಡೆದ ನಂತರ ಶನಿವಾರ ಬೆಳಗ್ಗೆ ಕೊಂಡೋತ್ಸವ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.ನಡುಕೇರಿ ವೀರಭದ್ರ ದೇವಸ್ಥಾನದಲ್ಲಿ ವೀರಭದ್ರ ಸ್ವಾಮಿ ಪ್ರಳಯ ರುದ್ರ ಅಲಂಕಾರದಿಂದ ಕಂಗೊಳಿಸುತ್ತಿದ್ದರೆ, ಪಟ್ಟಲದಮ್ಮನ ದೇವಿಗೆ ಕಪ್ಪು ದ್ರಾಕ್ಷಿ ಹಾಗೂ ಅನಾನಸ್ ಹಣ್ಣುಗಳಿಂದ ತಯಾರಿಸಿದ ಬೃಹತ್ ಹಾರ, ಹಸಿರು ಗಾಜಿನ ಬಳೆ ಹಾರ ಮತ್ತು ತಾವರೆ ಹೂ ಹಾರಗಳಿಂದ ಅಲಂಕಾರಗೊಂಡ ದೇವರ ಮೂರ್ತಿಗಳನ್ನು ನೋಡಿ ಭಕ್ತರು ಕಣ್ತುಂಬಿಕೊಂಡರು.