ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳಕಿನ ಹಬ್ಬ ದೀಪಾವಳಿ ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು
ಜಿ.ದೇವರಾಜ ನಾಯ್ಡು
ಕನ್ನಡಪ್ರಭ ವಾರ್ತೆ ಹನೂರುಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳಕಿನ ಹಬ್ಬ ದೀಪಾವಳಿ ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಹಲವು ವಿಶೇಷತೆಗಳೊಂದಿಗೆ ಮಂಗಳವಾರ ಮಹಾರಥೋತ್ಸವ 8.40ರಿಂದ 9.50ರವರೆಗೆ ಸಾಲೂರು ಬೃಹನ್ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ದೀಪಾವಳಿ ಮಹಾರಥೋತ್ಸವ ಸಂಭ್ರಮದಿಂದ ನಡೆಯಿತು. ಇದೇ ವೇಳೆಯಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪುರುಷೋತ್ತಮ್, ಉಪ ಕಾರ್ಯದರ್ಶಿ ಚಂದ್ರಶೇಖರ್, ಬೇಡಗಂಪಣ ಶರದಿ ಅರ್ಚಕರ ತಂಡ ಹಾಜರಿದ್ದರು.ಮಹಾರಥೋತ್ಸವ ವಿಶೇಷತೆ:
ದೀಪಾವಳಿ ಮಹಾರಥೋತ್ಸವಕ್ಕೂ ಮುನ್ನ ಬೆಳಿಗ್ಗೆ 7ಕ್ಕೆ ಕೆಂಪು ಅನ್ನ ತಯಾರಿಸಿ ಅನ್ನದಿಂದ (ಬಲಿ ಅನ್ನ) ಮಲೆ ಮಹದೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ಬೇಡಗಂಪಣರ ಅರ್ಚಕರು ರಥಕ್ಕೆ ಪೂಜೆ ಸಲ್ಲಿಸಿ ರಥದ ಚಕ್ರಗಳಿಗೆ ಬಲಿ ಅನ್ನ ಇಟ್ಟು ನಂತರ ಮಹಾಮಂಗಳಾರತಿ ಪೂಜೆ ಸಲ್ಲಿಸಿ ಬೆಲ್ಲದ ಆರತಿ ನಂತರ ಬೂದು ಕುಂಬಳಕಾಯಿ ಒಡೆದ ನಂತರ ಸ್ವಾಮೀಜಿಗಳು ತೆಂಗಿನಕಾಯಿ ಒಡೆಯುವ ಮೂಲಕ ಮಹಾರಥೋತ್ಸವಕ್ಕೆ ಬೇಡಗಂಪಣ ಸಮುದಾಯದ ಹೆಣ್ಣುಮಕ್ಕಳಿಂದ ಸಾಂಪ್ರದಾಯದಂತೆ ಬೆಲ್ಲದ ಆರತಿ ಬೆಳಗಿಸಿ ನಂತರ ಚಾಲನೆ ನೀಡಲಾಯಿತು.ಬಿಳಿ ಆನೆ ಉತ್ಸವ:
ಮಹಾರಥೋತ್ಸವ ನಂತರ ಪಾರ್ವತಿ ಪರಮೇಶ್ವರರ ಉತ್ಸವ ಮೂರ್ತಿಯನ್ನು ಬಿಳಿ ಆನೆಯ ಮೇಲೆ ಪ್ರತಿಷ್ಠಾಪಿಸಿ ದೇವಾಲಯದ ಸುತ್ತಲೂ ವಾದ್ಯಗಳೊಂದಿಗೆ ಪ್ರದಕ್ಷಿಣೆ ಹಾಕಿ ಉತ್ಸವ ಮೂರ್ತಿಯನ್ನು ಪೂಜೆ ಸಲ್ಲಿಸಿ ಮಹಾಮಂಗಳಾರತಿ ಯೊಂದಿಗೆ ಪೂಜೆಯ ನಂತರ ಬಿಳಿ ಆನೆ ಉತ್ಸವ ಸಾಂಪ್ರದಾಯದಂತೆ ನಡೆಯಿತು.ಗುರು ಬ್ರಹ್ಮೋತ್ಸವ:
ಮಲೆ ಮಹದೇಶ್ವರ ಉತ್ಸವಮೂರ್ತಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್ನಲ್ಲಿ ಇರುವ ಪಲಕಿಯಲ್ಲಿ ಇಟ್ಟು ಗುರು ಬ್ರಹ್ಮೋತ್ಸವ ಉತ್ಸವ ಮೂರ್ತಿಯನ್ನು ವಾದ್ಯಗಳ ಹಾಗೂ ವೀರಗಾಸೆ ಕತ್ತಿ ವರಸೆ ನವಿಲೂರು ವಾದ್ಯ ಮೇಳೆಗಳ ಜೊತೆ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ನಂತರ ಉತ್ಸವ ಮೂರ್ತಿಗೆ ಧೂಪದ ಅಭಿಷೇಕ ಬಿಲ್ವಾರ್ಚನೆ, ಅಭಿಷೇಕ ಮಹಾಮಂಗಳಾರತಿ ನಂತರ ವಿಶೇಷ ಪೂಜೆ ಸಲ್ಲಿಸುವ ಈ ಸನ್ನಿವೇಶವನ್ನು ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಮಾದಪ್ಪನ ಭಕ್ತರು ಕಣ್ತುಬಿಕೊಂಡರುದಾಸೋಹ ವ್ಯವಸ್ಥೆ:
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಮಾದಪ್ಪನ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಿದೆ ಜೊತೆಗೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೂ ದಾಸೋಹ ವ್ಯವಸ್ಥೆಯನ್ನು ಪ್ರಾಧಿಕಾರದ ವತಿಯಿಂದ ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಿ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯಗಳ ವ್ಯವಸ್ಥೆ, ಪೊಲೀಸ್ ಇಲಾಖೆ ಸೂಕ್ತ ಬಸ್ ಕಲ್ಪಿಸಿತ್ತು.ಕಳೆದ ಐದು ದಿನಗಳಿಂದ ನಡೆಯುತ್ತಿರುವ ಮಲೆ ಮಾದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಅಧಿಕಾರಿ ಸಿಬ್ಬಂದಿ ವರ್ಗ ಬೇಡರ ಗಪಣರ ಅರ್ಚಕರ ತಂಡವೇ ವಿಶೇಷ ಪೂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಲವು ವಿಶೇಷತೆಗಳೊಂದಿಗೆ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.
ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಂಭ್ರಮ ಸಡಗರದೊಂದೆ ನಡೆಯುವ ಮೂಲಕ ದೀಪಾವಳಿ ಜಾತ್ರೆ ಮಹಾರಥೋತ್ಸವ ಸಂಪನ್ನಗೊಂಡಿತು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪುರುಷೋತ್ತಮ್, ಸಹ ಕಾರ್ಯದರ್ಶಿ ಚಂದ್ರಶೇಖರ್, ಇನ್ಸ್ಪೆಕ್ಟರ್ ಆನಂದ್ ಮೂರ್ತಿ. ಅಪಾರ ಸಂಖ್ಯೆಯ ಭಕ್ತಗಣ ಹಾಜರಿದ್ದರು.ಕಳೆದ ಐದು ದಿನಗಳಿಂದ ನಡೆದ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದಿದ್ದಾರೆ. ಭಕ್ತಾದಿಗಳಿಗೆ ಸಕಲಸೌಕರ್ಯ, ವಿಶೇಷ ದಾಸೋಹ ವ್ಯವಸ್ಥೆ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಸ್ವಚ್ಛತೆಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆದ್ಯತೆ ನೀಡಲಾಗಿತ್ತು.
ಎಂ.ಆರ್.ಮಂಜುನಾಥ್ ಶಾಸಕ, ಹನೂರು.