ಕುಶಾಲನಗರ ಶ್ರೀ ಗಣಪತಿ ಐತಿಹಾಸಿಕ ರಥೋತ್ಸವ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಸಾವಿರಾರು ಸಂಖ್ಯೆಯ ಭಕ್ತಾದಿಗಳ ಉಪಸ್ಥಿತಿಯಲ್ಲಿ ನಡೆಯಿತು.

ಕುಶಾಲನಗರ : ಕುಶಾಲನಗರ ಶ್ರೀ ಗಣಪತಿ ಐತಿಹಾಸಿಕ ರಥೋತ್ಸವ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಸಾವಿರಾರು ಸಂಖ್ಯೆಯ ಭಕ್ತಾದಿಗಳ ಉಪಸ್ಥಿತಿಯಲ್ಲಿ ನಡೆಯಿತು.

ಕಾರ್ತಿಕ ಮಾಸ ಕೃಷ್ಣ ಪಕ್ಷದಲ್ಲಿ ನಡೆಯುವ ದೇವಾಲಯದ ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಬೆಳಗಿನಿಂದಲೇ ದೇವರಿಗೆ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ ಪುಷ್ಪಾಲಂಕಾರ ರಥ ಪೂಜೆ ರಥ ಬಲಿ ನಂತರ ಗಣಪತಿ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತಾದಿಗಳು ರಥ ಬೀದಿಯ ಮೂಲಕ ಆಂಜನೇಯ ದೇವಾಲಯ ತನಕ ಘೋಷಣೆಗಳೊಂದಿಗೆ ಭಕ್ತಿಭಾವದಿಂದ ಎಳೆದರು.ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ನೇತೃತ್ವದಲ್ಲಿ ರಾಘವೇಂದ್ರ ಭಟ್ ಮತ್ತು ಅರ್ಚಕರ ತಂಡದಿಂದ ಪೂಜಾ ವಿಧಿ ವಿಧಾನಗಳು ನಡೆಯಿತು. ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು. ಜಾತ್ರೋತ್ಸವ ಅಂಗವಾಗಿ ದೇವಾಲಯದ ಒಳ ಆವರಣವನ್ನು ವಿಶೇಷವಾಗಿ ಹೂಗಳಿಂದ ಸಿಂಗರಿಸಲಾಗಿತ್ತು. ರಥ ಎಳೆಯುವುದಕ್ಕೂ ಮುನ್ನ ದೇವಾಲಯ ಮುಂಭಾಗ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ಅಯ್ಯಪ್ಪ ಸ್ವಾಮಿ ದೇವರ ಮಾಲಾಧಾರಿಗಳು ರಥದ ಮುಂದೆ ಕರ್ಪೂರ ಆರತಿ ಬೆಳಗಿ ಅಯ್ಯಪ್ಪ ಸ್ವಾಮಿ ಘೋಷಣೆ ಕೂಗಿದರು. ಭಕ್ತರು ತಮ್ಮ ಹರಕೆಯ ಹೆಸರಿನಲ್ಲಿ ತಮಗಿಷ್ಟ ಬಂದಷ್ಟು ಈಡುಗಾಯಿಯನ್ನು ಒಡೆಯುತ್ತಿದ್ದ ದೃಶ್ಯ ಕಂಡು ಬಂತು.

ಮಡಿಕೇರಿ ಶಾಸಕ ಡಾ ಮಂತರ್ ಗೌಡ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಶ್ರೀ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಎಂ. ಕೆ. ದಿನೇಶ್‌ ರಥೋತ್ಸವ ಅಂಗವಾಗಿ ಅನ್ನದಾನ ಸಮಿತಿ ಮೂಲಕ ಸಾವಿರಾರು ಸಂಖ್ಯೆಯ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು ಎಂದರು. ಪ್ರಧಾನ ಅರ್ಚಕ ಆರ್. ಕೆ. ನಾಗೇಂದ್ರ ಬಾಬು ಮಾತನಾಡಿ, ರಥೋತ್ಸವ ಅಂಗವಾಗಿ ಪ್ರತಿದಿನ ಉತ್ಸವವಾದಿಗಳು ವಿಶೇಷ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ: ಗುಂಡೂರಾವ್ ಜಾತ್ರಾ ಮೈದಾನದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರಾ ಮೈದಾನದಲ್ಲಿ ನಡೆಯಲಿದೆ ಎಂದು ಸಾಂಸ್ಕೃತಿಕ ಸಮಿತಿ ಸಂಚಾಲಕ ವಿ.ಪಿ. ಶಶಿಧರ್ ತಿಳಿಸಿದರು.ದೇವಾಲಯ ಸೇವಾ ಸಮಿತಿಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎಂ.ಕೆ. ದಿನೇಶ್, ಉಪಾಧ್ಯಕ್ಷ ಆರ್. ಬಾಬು, ಗೌರವಾಧ್ಯಕ್ಷ ವಿ ಎನ್ ವಸಂತಕುಮಾರ್, ಕಾರ್ಯದರ್ಶಿ ಬಿ ಕೆ ಮುತ್ತಣ್ಣ, ಖಜಾಂಚಿ ಎಸ್ ಕೆ ಸತೀಶ್, ಸಹ ಕಾರ್ಯದರ್ಶಿ ಕೆ ಎನ್ ದೇವರಾಜ್, ನಿರ್ದೇಶಕರಾದ ವಿ.ಡಿ. ಪುಂಡರಿಕಾಕ್ಷ, ವಿ.ಪಿ. ಶಶಿಧರ್, ಹೆಚ್.ಎಂ. ಚಂದ್ರು ಟಿ.ಆರ್. ಶರವಣಕುಮಾರ್ ಮತ್ತು ವಿಶೇಷ ಆಹ್ವಾನಿತರಾದ ಹೆಚ್.ಎನ್. ರಾಮಚಂದ್ರ, ಡಿ ಅಪ್ಪಣ್ಣ, ಡಿ.ಸಿ. ಜಗದೀಶ್, ಕೆ.ಎನ್. ಸುರೇಶ್, ಕೆ.ಸಿ. ನಂಜುಂಡಸ್ವಾಮಿ, ಎಂ ಮುನಿಸ್ವಾಮಿ, ವಿ ಎಸ್ ಆನಂದಕುಮಾರ್ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ್ ರಾವ್ ಇದ್ದರು. ಹಳೆಯ ಮಾರುಕಟ್ಟೆ ರಸ್ತೆಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.