ವಿಜಯನಗರ ಸಾಮ್ರಾಜ್ಯ ಭವ್ಯತೆ ಹಂಪಿಯಲ್ಲಿ ಜೀವಂತ: ಗೆಹಲೋತ್‌

| Published : Nov 19 2025, 02:45 AM IST

ವಿಜಯನಗರ ಸಾಮ್ರಾಜ್ಯ ಭವ್ಯತೆ ಹಂಪಿಯಲ್ಲಿ ಜೀವಂತ: ಗೆಹಲೋತ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜಭವನದಲ್ಲಿ ಹಂಪಿ: ದಿ ರಿಚುಅಲ್ಸ್ ಆಫ್ ಟೈಮ್’ ಕಾಫಿಟೇಬಲ್ ಪುಸ್ತಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಂಪಿ ಭಾರತದ ಸಾಂಸ್ಕೃತಿಕ ಪ್ರಜ್ಞೆ, ವಾಸ್ತುಶಿಲ್ಪದ ತೇಜಸ್ಸು, ಆಧ್ಯಾತ್ಮಿಕ ಶಕ್ತಿ ಮತ್ತು ಸಮಯ-ಸೂಕ್ಷ್ಮ ಕಲಾತ್ಮಕತೆಯ ವಿಶಿಷ್ಟ ಸಂಗಮವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಛಾಯಾಗ್ರಾಹಕ ಸೈಬಲ್ ದಾಸ್ ಅವರ ‘ಹಂಪಿ: ದಿ ರಿಚುಅಲ್ಸ್ ಆಫ್ ಟೈಮ್’ ಕಾಫಿಟೇಬಲ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದ ಭವ್ಯತೆ, ಅದರ ಕಲಾತ್ಮಕ ದೃಷ್ಟಿ, ಮಾನವ ಸ್ಪರ್ಶ ಮತ್ತು ಅದರ ರೋಮಾಂಚಕ ಇತಿಹಾಸವು ಹಂಪಿಯಲ್ಲಿರುವ ಪ್ರತಿಯೊಂದು ಕಲ್ಲು, ಪ್ರತಿಯೊಂದು ಕಂಬ ಮತ್ತು ಪ್ರತಿಯೊಂದು ಕಲಾಕೃತಿಯಲ್ಲಿ ಇನ್ನೂ ಪ್ರತಿಧ್ವನಿಸುತ್ತದೆ ಎಂದರು.

ಇದು ಐತಿಹಾಸಿಕ ತಾಣ ಮಾತ್ರವಲ್ಲದೆ ಭಾರತದ ಸಾಂಸ್ಕೃತಿಕ ಆತ್ಮಕ್ಕೆ ಜೀವಂತ ಸಾಕ್ಷಿಯಾಗಿದೆ. ಸೈಬಲ್ ದಾಸ್ ಅವರ ಕಾಫಿ ಟೇಬಲ್ ಪುಸ್ತಕವು ಈ ಕಾಲಾತೀತ ಪರಂಪರೆಗಳನ್ನು ದೃಶ್ಯ ಕಾವ್ಯವಾಗಿ ಪ್ರಸ್ತುತಪಡಿಸುತ್ತದೆ. ಈ ಪುಸ್ತಕದಲ್ಲಿನ ಪ್ರತಿಯೊಂದು ಚಿತ್ರವು ಒಂದು ಕಥೆಯಾಗಿದೆ. ಪ್ರತಿ ಪುಟವು ಸಂಪ್ರದಾಯಗಳು, ನಂಬಿಕೆಗಳು, ಆಚರಣೆಗಳು ಮತ್ತು ಮಾನವ ಆಕಾಂಕ್ಷೆಗಳ ಪ್ರಯಾಣವಾಗಿದೆ ಎಂದು ರಾಜ್ಯಪಾಲರು ಬಣ್ಣಿಸಿದರು.

ಹಂಪಿಯು ಸ್ವತಃ ಒಂದು ವಿಶಿಷ್ಟ ಅದ್ಭುತವಾಗಿದೆ. ಬೃಹತ್ ಬಂಡೆಗಳ ನಡುವೆ ನೆಲೆಗೊಂಡಿರುವ ದೇವಾಲಯಗಳು, ಮಂಟಪಗಳು, ಮಾರ್ಗಗಳು ಮತ್ತು ಅರಮನೆಗಳ ಅವಶೇಷಗಳು ಸಮಯದ ಹರಿವನ್ನು ತೋರುತ್ತದೆ. ಈ ಪುಸ್ತಕವು ಕ್ಯಾಮೆರಾದ ಲೆನ್ಸ್ ಮೂಲಕ ಚೆಂದವನ್ನು ಸೆರೆ ಹಿಡಿದಿದೆ. ಬೆಳಗಿನ ಬೆಳಕಿನಲ್ಲಿ ಮುಳುಗಿರುವ ವಿರೂಪಾಕ್ಷ ದೇವಾಲಯದ ಶಿಖರಗಳಿಂದ ಹಿಡಿದು, ವಿಠಲ ದೇವಾಲಯದ ಸ್ತಂಭಗಳ ಮೇಲೆ ಬೀಳುವ ಸಂಜೆಯ ನೆರಳುಗಳವರೆಗೆ ಪ್ರತಿಯೊಂದು ಚೌಕಟ್ಟು ಓದುಗರನ್ನು ಪ್ರಾಚೀನ ಭಾರತದ ಆಧ್ಯಾತ್ಮಿಕ ನಾಡಿಮಿಡಿತಕ್ಕೆ ಸಂಪರ್ಕಿಸುತ್ತದೆ ಎಂದು ರಾಜ್ಯಪಾಲರು ಹೇಳಿದರು.

ಸಮಾರಂಭದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ್, ಯುನೆಸ್ಕೋದ ಭಾರತದ ಮಾಜಿ ರಾಯಭಾರಿ ಚಿರಂಜೀವಿ ಸಿಂಗ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಖ್ಯಾತ ಛಾಯಾಗ್ರಾಹಕ ಎಚ್.ಸಿ. ಸೈಬಲ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.