ಸಾರಾಂಶ
ಎಲ್ಲ ಲೆಕ್ಕ ಪತ್ರಗಳ ಕಾಯ್ದಿರಿಸಿದ್ದೇವೆ । ಮುುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸ್ಪಷ್ಟನೆ. ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಸವಕೇಂದ್ರ ಮುರುಘಾಮಠದ ವತಿಯಿಂದ ನಿರ್ಮಿಸಲಾಗುತ್ತಿರುವ 280 ಕೋಟಿ ರುಪಾಯಿ ವೆಚ್ಚದ 325 ಅಡಿ ಎತ್ತರದ ಬಸವ ಪುತ್ಥಳಿ ಕಾಮಗಾರಿಯಲ್ಲಿ ಯಾವುದೇ ಬಗೆಯ ಅನುದಾನ ದುರುಪಯೋಗವಾಗಿಲ್ಲ. ಮಠದ ಭಕ್ತಾದಿಗಳು ಅಪಪ್ರಚಾರಗಳಿಗೆ ಕಿವಿಗೊಡಬಾರದೆಂದು ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸ್ಪಷ್ಟಪಡಿಸಿದರು.ಮುರುಘಾಮಠದ ಆವರಣದಲ್ಲಿರುವ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಬಿಡುಗಡೆಯಾದ ಅನುದಾನ, ವೆಚ್ಚ ಎಲ್ಲವೂ ಸರಿಯಾಗಿ ನಿರ್ವಹಣೆ ಮಾಡಲಾಗಿದೆ. ಹಣ ದುರುಪಯೋಗವಾಗಿದೆ ಎಂಬ ಪ್ರಶ್ನೆಯೇ ಎದುರಾಗದು. ಮಠದ ಅಭಿವೃದ್ಧಿ ಸಹಿಸದವವರು ಇಂತಹ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಪರೋಕ್ಷವಾಗಿ ಏಕಾಂತಯ್ಯ ವಿರುದ್ಧ ವಾಗ್ದಾಳಿ ಮಾಡಿದರು.
ಬಸವ ಪುತ್ಥಳಿ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಅನುದಾನ ದುರುಪಯೋಗವಾಗಿದೆ ಎಂಬ ಅಂಶವ ಪ್ರಸ್ತಾಪಿಸಲಾಗಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಐದು ಮಂದಿ ಅಧಿಕಾರಿಗಳ ತಂಡ ರಚಿಸಿ ಪರಿಶೀಲನೆಗೆ ನಿಯೋಜಿಸಿದ್ದಾರೆ. ಇದುವರೆಗೂ ಪರಿಶೀಲನೆ ಸಂಬಂಧ ಯಾವುದೇ ಪತ್ರವಾಗಲೀ ಬಂದಿಲ್ಲ. ಅಧಿಕಾರಿಗಳ ತಂಡ ಆಗಮಿಸಿಲ್ಲ. ಬಸವ ಪುತ್ಥಳಿಗೆ ಖರ್ಚು ಮಾಡಲಾದ ಹಣದ ಎಲ್ಲ ಲೆಕ್ಕಪತ್ರಗಳ ಇಟ್ಟಿದ್ದೇವೆ. ಅಧಿಕಾರಿಗಳ ತಂಡ ಬಂದಲ್ಲಿ ಅವರಿಗೆ ನೀಡುತ್ತೇವೆ ಎಂದರು.ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 35 ಕೋಟಿ ರುಪಾಯಿ ಹಣ ಬಿಡುಗಡೆಯಾಗಿದ್ದು, ಇದರಲ್ಲಿ 25 ಕೋಟಿ ರುಪಾಯಿ ಖರ್ಚಾಗಿದೆ. ಹತ್ತು ಕೋಟಿ ರುಪಾಯಿ ಬ್ಯಾಂಕ್‌ನಲ್ಲಿದೆ. ಕಾಮಗಾರಿ ಪ್ರತಿ ಹಂತದಲ್ಲಿಯೂ ಹಣ ಬಳಕೆ ಪ್ರಮಾಣ ಪತ್ರ(ಯುಸಿ) ಸಲ್ಲಿಸಿ ಅನುದಾನ ಪಡೆಯಲಾಗಿದೆ. ಭಕ್ತರು ಹಾಗೂ ಸರ್ಕಾರ ಕೊಟ್ಟ ದುಡ್ಡಿಗೆ ನಮ್ಮಲ್ಲಿ ವೆಚ್ಚದ ಬಾಬತ್ತಿನ ಲೆಕ್ಕವಿದೆ. ಅಧಿಕಾರಿಗಳ ತಂಡ ಬಂದು ಹೋದ ನಂತರ ವಾಸ್ತವಾಂಶ ಬಹಿರಂಗವಾಗಲಿದೆ ಎಂದರು.
ಚಿತ್ರದುರ್ಗವನ್ನು ಪ್ರವಾಸಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಮುರುಘಾ ಶರಣರು ಚಿಂತಿಸಿ ಆ ನಿಟ್ಟಿನಲ್ಲಿ ಬಸವ ಪುತ್ಥಳಿ ಸ್ಥಾಪನೆಗೆ ಮುಂದಾಗಿದ್ದರು. ಪುತ್ಥಳಿ ಸ್ಥಾಪನೆಯಾದಲ್ಲಿ ಚಿತ್ರದುರ್ಗ ಪ್ರವಾಸಿ ಕೇಂದ್ರವಾಗಿ ರಾಷ್ಟ್ರದ ಗಮನ ಸೆಳೆಯಲಿದ್ದು, ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇಂತಹ ಅಭಿವೃದ್ಧಿ ಕಾರ್ಯವನ್ನು ಸಹಿಸದ ಕೆಲವರು ಉದ್ದೇಶ ಪೂರ್ವಕವಾಗಿಯೇ ತೊಂದರೆ ಕೊಡುತ್ತಿದ್ದಾರೆ. ಇವೆಲ್ಲವನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಮುರುಘಾ ಮಠಕ್ಕಿದೆ. ಕೆಲ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಪುತ್ಥಳಿ ಕಾಮಗಾರಿ ಸ್ಥಗಿತಗೊಂಡಿದೆ. ಶೀಘ್ರ ಕಾಮಗಾರಿಗೆ ಪುನರ್ ಚಾಲನೆ ದೊರೆಯಲಿದೆ ಎಂದರು.ಮಠದ ಸಲಹಾ ಸಮಿತಿ ಸದಸ್ಯ ಹುಲಿಕುಂಟೆ ಜಿತೇಂದ್ರ ಮಾತನಾಡಿ, ಮಾಜಿ ಸಚಿವ ಎಚ್.ಏಕಾಂತಯ್ಯ ಜಿಲ್ಲಾಧಿಕಾರಿಗೆ ದೂರು ನೀಡಿ ಬಸವ ಪುತ್ಥಳಿ ಅನುದಾನ ದುರುಪಯೋಗವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಅನುದಾನ ಎಷ್ಟು ಖರ್ಚು ಆಗಿದೆ ಎಂಬ ಬಗ್ಗೆ ಇದವರೆಗೂ ಯಾರೊಬ್ಬರೂ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿ ಲೆಕ್ಕಪತ್ರಗಳ ಪಡೆದಿಲ್ಲ. ಹಿಂದೆ ಇದ್ದ ಆಡಳಿತಾಧಿಕಾರಿ ವಸ್ತ್ರದ ಅವಧಿಯಲ್ಲಿ ಮಠದ ಕೆಲ ದಾಖಲೆಗಳ ನೋಡಿ ಇಂತಹ ಆರೋಪ ಮಾಡಲಾಗಿದೆ. ಸರ್ಕಾರ ಹಾಗೂ ಭಕ್ತರು ಕೊಟ್ಟ ಪ್ರತಿ ಪೈಸೆಗೂ ಲೆಕ್ಕ ಇಡಲಾಗಿದೆ. ಅಧಿಕಾರಿಗಳು ಬಂದಾಗ ಮಾಹಿತಿ ನೀಡಲಾಗುತ್ತಿದೆ ಎಂದರು.
ಶಾಸಕ ವೀರೇಂದ್ರ ಪಪ್ಪಿ ಅವರ ಸಹೋದರ ಕೆ.ಸಿ.ನಾಗರಾಜ್ ಮಾತನಾಡಿ, ಮಠಕ್ಕೆ ಅನುದಾನ ನೀಡುವಾಗ ಕೆಲ ನಿಯಮಾವಳಿಗಳು ಇರುತ್ತವೆ. ಪಾರದರ್ಶಕ ಕಾಯ್ದೆ ಯಿಂದ ಹೊರಗಿಡಲಾಗಿದೆ. ಅನುದಾನ ಪರಿಶೀಲನೆಗೆ ಇದುವರೆಗೂ ಜಿಲ್ಲಾಡಳಿತದಿಂದ ನೋಟಿಸ್ ಬಂದಿಲ್ಲ. ಯಾವ ತಂಡವೂ ಸಂಪರ್ಕಿಸಿಲ್ಲವೆಂದರು. ಇಂಜಿನಿಯರ್ ಜಗದೀಶ್ ಇದ್ದರು.