ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶದ ಜನರಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ ಪೂರ್ಣ ಪ್ರಮಾಣದ ಜವಾಬ್ದಾರಿ ಹೊತ್ತಿದ್ದರೆ, ಪ್ರಧಾನಿ ನರೇಂದ್ರಮೋದಿ ಚಿತ್ರದುರ್ಗಕ್ಕೆ ಆಗಮಿಸಿ 5300 ಕೋಟಿ ಕೊಡ್ತೀನಿ ಅಂತ ಭಾಷಣ ಮಾಡದಿದ್ದರೆ ಇಷ್ಟೊತ್ತಿಗೆ ಯೋಜನೆ ಮುಗಿದು ಹೋಗಿರುತ್ತಿತ್ತು. ಇತ್ತ ಸಿಎಂ ಸಿದ್ದರಾಮಯ್ಯ ಅನುದಾನ ಕೊಡ್ತಿಲ್ಲ, ಅತ್ತ ಮೋದಿ ತಾವು ಕೊಟ್ಟ ವಚನವ ನೆನಪು ಮಾಡಿಕೊಳ್ಳುತ್ತಿಲ್ಲ, ಜನಪ್ರತಿನಿಧಿಗಳು ಸರ್ಕಾರಗಳ ಮೇಲೆ ಒತ್ತಡ ಹಾಕದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಹಾಗೆ ನೋಡಿದರೆ 25 ವರ್ಷಗಳ ಹಿಂದೆ ಭದ್ರಾ ಹೋರಾಟ ಜಿಲ್ಲೆಯಲ್ಲಿ ಆರಂಭವಾದಾಗ ಸಂಘ ಸಂಸ್ಥೆಗಳು, ರೈತರ ಜೊತೆಗೆ ಮಠಾಧಿಪತಿಗಳು ದನಿಗೂಡಿಸಿದ್ದರು. ಸಾರ್ವಜನಿಕ ಸಭೆ, ಪ್ರತಿಭಟನೆ, ಬಂದ್ ಮುಂತಾದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನೀರಾವರಿ ಯೋಜನೆ ಮಂಜೂರು ಮಾಡಿ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿದ್ದರು. ಮುರುಘಾಶ್ರೀ, ಸಾಣೆಹಳ್ಳಿ ಪಂಡಿತಾರಾಧ್ಯಶ್ರೀ, ಮಾದಾರಚೆನ್ನಯ್ಯಶ್ರೀ, ಕುಂಚಿಟಿಗ ಪೀಠದ ಶಾಂತವೀರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಇಳಕಲ್ ನ ಗುರು ಮಹಾಂತಶ್ರೀ, ಯಾದವಶ್ರೀ, ಛಲವಾದಿ ಶ್ರೀ ಸೇರಿದಂತೆ ಹಲವು ಮಠಾಧಿಪತಿಗಳು ಪಾಲ್ಗೊಂಡಿದ್ದರು. ಜಿಲ್ಲೆಯ ಜನತೆ ಹಾಗೂ ಮಠಾಧಿಪತಿಗಳ ಒತ್ತಡದಿಂದಾಗಿ ಸರ್ಕಾರ ಯೋಜನೆ ಮಂಜೂರು ಮಾಡಿ ಕಾಮಗಾರಿ ಆರಂಭಿಸಿತು. ಎಲ್ಲ ಅಡೆತಡೆಗಳ ನಿವಾರಿಸಿಕೊಂಡು ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಆದರೆ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದರಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಪರಿಷ್ಕೃತ 21 ಸಾವಿರ ಕೋಟಿ ರು. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ ಇದುವರೆಗೂ 10,500 ಕೋಟಿ ರು. ವೆಚ್ಚ ಮಾಡಿದೆ. ಯೋಜನೆ ಸಾಕಾರದ ಕುರುಹಾಗಿ ವಿವಿ ಸಾಗರ ಜಲಾಶಯಕ್ಕೆ ಇದುವರೆಗೂ 26 ಟಿಎಂಸಿಯಷ್ಟು ನೀರನ್ನು ಭದ್ರೆ ಜಲಾಶಯದಿಂದ ಲಿಫ್ಟ್ ಮಾಡಿ ತುಂಬಿಸಲಾಗಿದೆ. ಹಾಲಿ ಗುತ್ತಿಗೆದಾರರಿಗೆ 3 ಸಾವಿರ ಕೋಟಿ ರೂಪಾಯಿಯಷ್ಟು ಬಾಕಿ ಮೊತ್ತ ಕೊಡಬೇಕಾಗಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ.


ಭದ್ರಾ ಮೇಲ್ದಂಡೆಯ ರಾಷ್ಟೀಯ ಯೋಜನೆಯಾಗಿ ಘೋಷಿಸಿ 5300 ಕೋಟಿ ರು ಅನುದಾನ(ಶೇ.60-40 ರ ಅನುಪಾತ) ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಚಿತ್ರದುರ್ಗ ನೆಲದಲ್ಲಿ ಘೋಷಿಸಿದ್ದರು. ಪರಿಣಾಮ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕೇಂದ್ರ ಜಲಶಕ್ತಿ ಸಚಿವಾಲಯ ಸೂಚಿಸಿದ ಎಲ್ಲ ನಿಯಮಗಳ ಪಾಲಿಸಿ ಕೇಂದ್ರ ಅನುದಾನ ಪಡೆಯಲು ಕ್ರಮ ಕೈಗೊಂಡಿದ್ದರು. ತಾಂತ್ರಿಕ ಸಲಹಾ ಸಮಿತಿ, ಸಾರ್ವಜನಿಕ ಬಂಡವಾಳ ಹೂಡಿಕೆ ಸಮಿತಿ ಒಪ್ಪಿಗೆ ಸೂಚಿಸಿತ್ತು. ಅಂತಿಮವಾಗಿ ಕೇಂದ್ರ ಸಂಪುಟ ಯೋಜನೆಗೆ ಒಪ್ಪಿಗೆ ಸೂಚಿಸಿ, ಸರ್ಕಾರಿ ಆದೇಶ ಹೊರಡಿಸುವುದು ಮಾತ್ರ ಬಾಕಿ ಉಳಿದಿತ್ತು.

ಇದಕ್ಕಿದ್ದಂತೆ ತನ್ನ ಆಲೋಚನೆ ಬದಲಿಸಿದ್ದ ಕೇಂದ್ರ ಸರ್ಕಾರ ಕೃಷಿ ಸಂಚಾಯಿನಿ ಯೋಜನೆಯಡಿ ಮರು ಪ್ರಸ್ತಾವನೆ ಸಲ್ಲಿಸಬೇಕು, ಈ ವರೆಗೆ ಆಗಿರುವ ಕಾಮಗಾರಿ ಪ್ರಮಾಣ ಹಾಗೂ ಮುಕ್ತಾಯ ಗೊಳ್ಳಲು ಬೇಕಿರುವ ಅನುದಾನದ ಬಗ್ಗೆ ಮರು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿತು. ಈ ಮೊದಲು 16 ಸಾವಿರ ಕೋಟಿ ರೂಪಾಯಿ ಇದ್ದ ಭದ್ರಾ ಮೇಲ್ದಂಡೆ ಯೋಜನೆ ವೆಚ್ಚ ಪರಿಷ್ಕೃತಗೊಂಡು 21 ಸಾವಿರ ಕೋಟಿ ರುಪಾಯಿಗೆ ಬಂದು ನಿಂತಿದೆ. ಅಧಿಕಾರಿಗಳು ಅನುದಾನ ಪಡೆಯಲು ಮತ್ತೆ ಮೊದಲ ಹೆಜ್ಜೆಯಿಂದ ಆರಂಭಿಸಿ ಅಂತಿಮ ಹಂತಕ್ಕೆ ತಂದಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ತಾಂತ್ರಿಕ ಸಲಹಾ ಸಮಿತಿ ಯೋಜನೆಗೆ ಒಪ್ಪಿಗೆ ನೀಡಿದೆ. ಸಾರ್ವಜನಿಕ ಬಂಡವಾಳ ಹೂಡಿಕೆ ಸಮಿತಿ ಹಾಗೂ ಸಂಪುಟ ಒಪ್ಪಿಗೆ ಮಾತ್ರ ಬಾಕಿ ಇದೆ.

ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ನಾಲ್ಕು ದಿನದ ಹಿಂದೆ ದೆಹಲಿಯಲ್ಲಿ ಕುಳಿತು ರಾಜ್ಯದ ಜನಪ್ರತಿನಿಧಿಗಳ ಒಂದೆಡೆ ಕೂರಿಸಿ ಯೋಜನೆಗೆ ಅನುದಾನ ಬಿಡುಗಡೆಗೆ ಪ್ರಯತ್ನಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಶ್ರೀಗಳು ದೆಹಲಿಯಲ್ಲಿ ಇರುವಾಗಲೇ ತಾಂತ್ರಿಕ ಸಲಹಾ ಸಮಿತಿ ಪರಿಷ್ಕೃತ ಯೋಜನೆಗೆ ಎರಡನೇ ಬಾರಿ ಒಪ್ಪಿಗೆ ನೀಡಿದೆ.

ಕೇಂದ್ರದ ಅನುದಾನ ಪಡೆಯುವಲ್ಲಿ ನಿರ್ಣಾಯಕ ಹಂತಕ್ಕೆ ತಲುಪಿರುವ ಈ ವೇಳೆ ತರಳಬಾಳು ಶ್ರೀಗಳ ಜೊತೆ ಇತರೆ ಶ್ರೀಗಳು ದನಿಗೊಡಿಸಿದರೆ ಕೇಂದ್ರ ಸರ್ಕಾರ ಮನವೊಲಿಸಲು ಸಾಧ್ಯವಾಗುತ್ತದೆ. ಹೋರಾಟಕ್ಕೆ ದನಿಗೂಡಿಸಿದ ಮಠಾಧಿಪತಿಗಳು ಕಾಮಗಾರಿಗೆ ಅನುದಾನ ಕೊಡಿಸಲು ಮುಂದಾಗುವರೇ ಎಂಬ ಪ್ರಶ್ನೆಗಳು ಬಯಲು ಸೀಮೆ ಜನರಲ್ಲಿ ಮೂಡಿವೆ.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೇ.60 ರಷ್ಟು ಮುಗಿದಿದ್ದು ಅನುದಾನದ ಕೊರತೆ ಬಿಟ್ಟರೆ ಯಾವುದೇ ತಾಂತ್ರಿಕ ಅಡಚಣೆಗಳು ಇಲ್ಲ. ಈ ಹಿಂದೆ ನಾವುಗಳು ತರಳಬಾಳು ಜಗದ್ಗುರುಗಳ ಸದ್ದರ್ಮ ಪೀಠಕ್ಕೆ ತೆರಳಿ ತಮಗಿರುವ ಪ್ರಭಾವ ಬೆಳೆಸಿ ಕೇಂದ್ರ ಸರ್ಕಾರದಿಂದ 5300 ಕೋಟಿ ರೂಪಾಯಿ ಅನುದಾನ ದೊರಕಿಸಿಕೊಡುವಂತೆ ಮನವಿ ಮಾಡಿದ್ದೆವು. ಮಾದಾರ ಚೆನ್ನಯ್ಯ ಸ್ವಾಮೀಜಿ ಭೇಟಿ ಮಾಡಿ ಆರ್.ಎಸ್.ಎಸ್ ನ ಮೋಹನ ಭಾಗವತರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಭದ್ರಾ ಮೇಲ್ದಂಡೆಗೆ ಅನುದಾನ ದೊರಕಿಸಿಕೊಡುವಂತೆ ವಿನಂತಿಸಿಕೊಂಡಿದ್ದೆವು. ಅನುದಾನ ಬಿಡುಗಡೆ ಆಗ್ರಹಿಸಿ ಶಾಸಕ ಹಾಗೂ ಸಂಸದರ ಮನೆ ಮುಂಭಾಗ ತಮಟೆ ಚಳವಳಿ ನಡೆಸಿದ್ದೇವೆ.

-ಬಿ.ಎ.ಲಿಂಗಾರೆಡ್ಡಿ, ಕಾರ್ಯಾಧ್ಯಕ್ಷ, ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ.