ಸಾರಾಂಶ
ಹೊಸಪೇಟೆ: ಭಾರತೀಯ ಸಂವಿಧಾನದಲ್ಲಿ ಮನುಷ್ಯತ್ವಕ್ಕೆ, ಮನುಷ್ಯ ಸಮಾನತೆಗೆ ಮತ್ತು ಮಹಿಳೆಯರ ಘನತೆಯ ಬದುಕಿಗೆ ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಮೊಗಳ್ಳಿ ಗಣೇಶ್ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ದಲಿತ ಸಂಸ್ಕೃತಿ ಅಧ್ಯಯನ ಪೀಠದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾಪರಿನಿಬ್ಬಾಣ ದಿನಾಚರಣೆಗೆ ಚಾಲನೆ ನೀಡಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬುದ್ಧನ ಕಾರುಣ್ಯ ಮತ್ತು ವೈಜ್ಞಾನಿಕ ಮನೋಧರ್ಮಕ್ಕೆ ಒತ್ತು ನೀಡಿದ್ದಾರೆ. ಜನಸಾಮಾನ್ಯರ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಮಾನತೆಗೆ ಮಹತ್ವ ನೀಡಿದ್ದಾರೆ. ಮಹಾ ಪರಿನಿರ್ವಾಣ ಎಂದರೆ ಎಚ್ಚರಿಕೆ, ಹೊಸ ಬಗೆಯ ಶೋಧ, ಸೃಷ್ಟಿ, ಆಯಾಮ, ಜ್ಞಾನೋದಯ, ಸ್ವಾತಂತ್ರ್ಯ ಎಂಬುದಾಗಿದೆ. ವಿಶಾಲಾರ್ಥದಲ್ಲಿ ನೋಡುವುದಾದರೆ ಜೀವನದ ಲೌಖಿಕ ಜಂಜಾಟಗಳಿಂದ ಮುಕ್ತರಾಗಿ ಸ್ವಾತಂತ್ರ್ಯ ಪಡೆದುಕೊಳ್ಳುವುದೇ ಪರಿನಿರ್ವಾಣವಾಗಿದೆ. ಮಹಾ ಪರಿನಿರ್ವಾಣವು ಬುದ್ಧ ಮತ್ತು ಅಂಬೇಡ್ಕರ್ ಅವರಿಗೆ ಮಾತ್ರ ಸೀಮಿತವಾಗದೇ, ಪ್ರತಿಯೊಬ್ಬರಲ್ಲೂ ಎಚ್ಚರಿಕೆಯ ಪರಿನಿರ್ವಾಣ ನಿರ್ಮಾಣಗೊಳ್ಳಬೇಕು ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಮಾತನಾಡಿ, ಅಂಬೇಡ್ಕರ್ ಅವರು ಎಲ್ಲ ವಿಷಯಗಳಲ್ಲೂ ಪರಿಣಿತರಾಗಿದ್ದರು. ಹಲವಾರು ಭಾಷೆಗಳನ್ನು ಕರಗತ ಮಾಡಿಕೊಂಡಿದ್ದರು. ದೇಶದ ಅರ್ಥವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಜನ ಸಮುದಾಯಗಳ ಮತ್ತು ಮಹಿಳೆಯರ ಸ್ಥಾನಮಾನ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಅವರಿಗಿತ್ತು. ಇಂದು ನಾವು ಅಂಬೇಡ್ಕರ್ ಅವರನ್ನು ಹೃದಯದಲ್ಲಿಟ್ಟುಕೊಂಡು ಪೂಜಿಸುತ್ತಿದ್ದೇವೆ. ಆದರೆ ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವಲ್ಲಿ, ಪಾಲಿಸುವಲ್ಲಿ ಹಿಂದುಳಿದ್ದಿದ್ದೇವೆ ಎಂದರು.ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ಧ ಮತ್ತು ಅಂಬೇಡ್ಕರ್ ಅವರು ಆತ್ಮವಂಚನೆ ಮತ್ತು ಸಮುದಾಯ ವಂಚನೆಗಳನ್ನು ತೊರೆದವರು. ಆದರೆ, ಇಂದು ನಾವು ಎಷ್ಟೇ ವಿದ್ಯಾವಂತರಾದರೂ, ಬುದ್ಧಿವಂತರಾದರೂ ಆತ್ಮವಂಚನೆ ಮತ್ತು ಸಮುದಾಯದ ವಂಚನೆಯನ್ನು ಮಾಡಿಕೊಂಡು ಬಂದಿದ್ದೇವೆ. ನಮ್ಮತನವನ್ನು ಮರೆತು, ಮೊದಲು ನಾನು ಸರಿಯಾಗಬೇಕೆಂಬುದನ್ನು ಬಿಟ್ಟು, ಸಮಾಜ ಸರಿಯಾಗಲಿ ಎಂದು ಆಶಿಸುತ್ತಿದ್ದೇವೆ. ಇದು ಸರಿಯಾದ ಆಲೋಚನೆಯಲ್ಲ. ಮೊದಲು ನಾವು ಸರಿಯಾದರೆ, ಸಮಾಜ ತಾನಾಗಿಯೇ ಸರಿಯಾಗುತ್ತದೆ ಎಂದರು.
ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ.ಚಿನ್ನಸ್ವಾಮಿ ಸೋಸಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಎಲ್ಲ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.