ಮಹಾ ಕವಿ ಕುವೆಂಪು ಒಬ್ಬ ಮಹಾನ್‌ ದಾರ್ಶನಿಕರು: ಡಾ.ನಾಗರಾಜು

| Published : Nov 10 2025, 12:30 AM IST

ಸಾರಾಂಶ

ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗದ ದಿನಗಳಲ್ಲಿಯೇ ಕರ್ನಾಟಕದ ಸ್ವರೂಪವನ್ನು ಹಾಡಿನಲ್ಲಿ ಕಟ್ಟಿಕೊಟ್ಟಿದ್ದಾರೆ, ೧೯೨೪ರಲ್ಲಿ ಆಗ ಕುವೆಂಪು ಅವರಿಗೆ ವಯಸ್ಸು ೨೦ವರ್ಷ ಇನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದರು. ಈಗ ನಾಡಗೀತೆಗೆ ೧೦೦ ವರ್ಷ ತುಂಬಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಷ್ಟ್ರಕವಿ ಕುವೆಂಪು ಒಬ್ಬ ಮಹಾನ್ ದಾರ್ಶನಿಕರು ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮೈಸೂರು ಜಿಲ್ಲಾಧ್ಯಕ್ಷ ಡಾ.ನಾಗರಾಜು ವಿ.ಭೈರಿ ಹೇಳಿದರು.

ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಶಾರದಾ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ, ಮಂಡ್ಯ ವಿಶ್ವವಿದ್ಯಾಲಯ, ಕೃಷಿಕ್ ಅಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ರಚನೆಗೆ ೧೦೦ ವರ್ಷ ಸಂಭ್ರಮಾಚರಣೆ ಪ್ರಯುಕ್ತ ಭಾವಾಭಿಯಾನ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗದ ದಿನಗಳಲ್ಲಿಯೇ ಕರ್ನಾಟಕದ ಸ್ವರೂಪವನ್ನು ಹಾಡಿನಲ್ಲಿ ಕಟ್ಟಿಕೊಟ್ಟಿದ್ದಾರೆ, ೧೯೨೪ರಲ್ಲಿ ಆಗ ಕುವೆಂಪು ಅವರಿಗೆ ವಯಸ್ಸು ೨೦ವರ್ಷ ಇನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದರು. ಈಗ ನಾಡಗೀತೆಗೆ ೧೦೦ ವರ್ಷ ತುಂಬಿದೆ. ಪ್ರಾಥಮಿಕ ಶಾಲೆಯಿಂದ ಆರಂಭವಾಗಿ ಕಾಲೇಜು ಶಿಕ್ಷಣದ ವಿದ್ಯಾರ್ಥಿಗಳವರೆಗೆ ನಾಡಗೀತೆ ಹಾಡುತ್ತೇವೆ, ಆದರೆ, ಅದರ ರಚನೆ, ಕುವೆಂಪು ಅವರ ಆಶಯ ಏನು ಎಂಬುದು ತಿಳಿಯದು ಎಂದರು.

ಮೈಸೂರು ರಾಜರ ಆಡಳಿತದಲ್ಲಿ ೯ ಜಿಲ್ಲೆಗಳು ಮಾತ್ರ ಇದ್ದವು, ಹೈದರಬಾದ್‌- ಕರ್ನಾಟಕ ಇರಲಿಲ್ಲ, ಬ್ರಿಟಿಷರ ಆಡಳಿತ ವಿತ್ತು, ಏಕೀಕರಣದ ಕನಸು ಕುವೆಂಪು ಅವರಿತ್ತು ಅನ್ನಿಸುತ್ತದೆ. ಈ ಕಾರಣದಿಂದಾಗಿಯೇ ಅವರನ್ನು ಒಬ್ಬ ಮಹಾನ್ ದಾರ್ಶನಿಕರು ಎಂದರೂ ತಪ್ಪಾಗದು ಎಂದರು.

ವಿದ್ಯಾರ್ಥಿಗಳು ಸುಗಮ ಸಂಗೀತ ಕೇಳುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಓದುವ ಆಸಕ್ತಿ ವೃದ್ಧಿಸುತ್ತದೆ. ಸುಗಮ ಸಂಗೀತ ಔಷಧವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಕುವೆಂಪು ವಿರಚಿತ ಭಾವಗೀತೆ, ನಾಡಗೀತೆ, ಕವಿತೆ-ಕವನಗಳನ್ನು ಗಾಯಕರು ಹಾಡಿ ರಂಚಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಅಧ್ಯಕ್ಷ ಕೆ.ಟಿ.ಹನುಮಂತು, ಮಂಡ್ಯ ವಿವಿ ಕುಲಸಚಿವ ಎಂ.ಪಿ.ಕೃಷ್ಣಕುಮಾರ್, ಸಾಂಸ್ಕೃತಿಕ ಸಂಯೋಜಕ ಡಾ.ಶಿವರಾಮು, ಪ್ರತಿಭಾಂಜಲಿ ಡೇವಿಡ್ ಮತ್ತು ಗಾಯಕರು, ಅಧ್ಯಾಪಕರು ಹಾಜರಿದ್ದರು. ಕುವೆಂಪುರವರ ನಾಡಗೀತೆಯನ್ನು ಸಹಸ್ರ ಕಂಠದಲ್ಲಿ ವಿದ್ಯಾರ್ಥಿಗಳು ಮತ್ತು ಗಾಯಕರು ಹಾಡಿದರು.

ಗಾಯನದಲ್ಲಿ ಆನಂದ ಮಾದಲ್ಗೆರೆ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಗೀತೆಯನ್ನು ಹಾಡಿದರು. ಡೇವಿಡ್ ಪ್ರತಿಭಾಂಜಲಿರವರು ಕಾಣದ ಕಡಲಿಗೆ, ಕೋಡಗನ ಕೋಳಿ ನುಂಗಿತ್ತಾ, ಎಲೆಗಳು ನೂರಾರು ಭಾವದ ಎಳೆಗಳು ನೂರಾರು, ಎರ್ರಿಸ್ವಾಮಿ ರವರು ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಗಾನಶ್ರೀರವರು ಮುಗಿಲ ಮಾರಿಗೆ ರಾಗ ರತಿಯ, ದಿಶಾ ಜೈನ್ ಒಂದಿರುಳು ಕನಸಿನಲ್ಲಿ ನನ್ನವಳ ಕೇಳಿದೆನು, ಎಚ್ಎಸ್ ವೆಂಕಟೇಶ್ ಮೂರ್ತಿರವರ ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ವಿಶ್ವಾಸ್ ರವರು ಧ್ವನಿಯಾಗಿದ್ದಾನೆ ಹೀಗೆ ಪ್ರಸಿದ್ಧ ಭಾವಗೀತೆಗಳನ್ನು ಹಾಡಿ ಮನತಣಿಸಿದರು.