ಬೇಂದ್ರೆ ಭಾವಗೀತೆಗೆ ಮಹಾಕಾವ್ಯದ ಕಿರೀಟ ತೊಡಿಸಿದ ಮಹಾಕವಿ: ಡಿ.ವಿ. ಬಡಿಗೇರ

| Published : Feb 01 2025, 12:02 AM IST

ಬೇಂದ್ರೆ ಭಾವಗೀತೆಗೆ ಮಹಾಕಾವ್ಯದ ಕಿರೀಟ ತೊಡಿಸಿದ ಮಹಾಕವಿ: ಡಿ.ವಿ. ಬಡಿಗೇರ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದ ಕಬ್ಬಿಗರ ಕೂಟದಲ್ಲಿ ದ.ರಾ. ಬೇಂದ್ರೆ 129ನೇ ಜಯಂತಿ ಆಚರಿಸಲಾಯಿತು.

ಗದಗ: ಆಧುನಿಕ ಕನ್ನಡ ಕಾವ್ಯದ ಇಬ್ಬರು ಮಹಾ ಕವಿಗಳೆಂದರೆ ಕುವೆಂಪು ಮತ್ತು ದ.ರಾ. ಬೇಂದ್ರೆ. ಕುವೆಂಪು ರಾಮಾಯಣದರ್ಶನಂ ಮಹಾಕಾವ್ಯ ರಚಿಸಿ ಮಹಾಕವಿ ಎನಿಸಿದರು. ಆದರೆ, ವರಕವಿ ಬೇಂದ್ರೆಯವರು ಯಾವುದೇ ಮಹಾಕಾವ್ಯ ರಚಿಸದಿದ್ದರೂ ಭಾವಗೀತೆಗಳಿಗೆ ಮಹಾಕಾವ್ಯದ ಕಿರೀಟ ತೊಡಿಸಿದ ಮಹಾಕವಿ ಎಂದು ಸಾಹಿತಿ, ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಹೇಳಿದರು.

ನಗರದ ಕಬ್ಬಿಗರ ಕೂಟದಲ್ಲಿ ನಡೆದ ದ.ರಾ. ಬೇಂದ್ರೆ 129ನೇ ಜಯಂತಿಯಲ್ಲಿ ದ.ರಾ. ಬೇಂದ್ರೆ ಸಾಹಿತ್ಯ ಸಾಧನೆ ಕುರಿತು ಮಾತನಾಡಿದರು.ದ.ರಾ. ಬೇಂದ್ರೆಯವರು ನಾಟಕ, ವಿಮರ್ಶೆ, ಕಥನ ಕವನ ಇತ್ಯಾದಿ ಹಲವು ಪ್ರಕಾರಗಳಲ್ಲಿ ಕೃತಿ ರಚಿಸಿದರೂ ಮೂಲತಃ ಅವರದು ಕವಿ ಹೃದಯ. ಆಡು ಮಾತಿನ ಸೊಗಡಿನಿಂದಲೇ ಕಾವ್ಯಕ್ಕೆ ಜನಮನ್ನಣೆ ಪಡೆದು ಜ್ಞಾನಪೀಠದ ಗರಿ ಮುಡಿದ ಕನ್ನಡದ ಹಿರಿಯ ಕಾವ್ಯ ಚೇತನ ಅವರು ಎಂದರು.

ಬೆಳಗು, ಶ್ರಾವಣ, ಯುಗಾದಿ ಮುಂತಾದ ಭಾವಗೀತೆಗಳಿಗೆ ನಿಸರ್ಗದ ಸೊಬಗಿನಿಂದಲೇ ಅಮರ ಕಾವ್ಯದ ಲೇಪ ನೀಡಿ ಪ್ರಕೃತಿಯ ಈ ಸನ್ನಿವೇಶಗಳನ್ನು ಕನ್ನಡ ಸಾಹಿತ್ಯದಲ್ಲಿ ಜೀವಂತವಾಗಿರಿಸಿದ ಕನ್ನಡದ ಏಕಮೇವ ಕವಿ ಬೇಂದ್ರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಬ್ಬಿಗರ ಕೂಟದ ಅಧ್ಯಕ್ಷ ನ್ಯಾ. ಮನೋಹರ ಮೇರವಾಡೆ ಮಾತನಾಡಿ, ಕನ್ನಡದ ಇಬ್ಬರು ಮೇರು ಕವಿಗಳಾದ ಕುವೆಂಪು ಮತ್ತು ಬೇಂದ್ರೆಯವರ ಪುತ್ಥಳಿ ಸ್ಥಾಪನೆಗೆ ಮನವಿ ಸಲ್ಲಿಸಿ ತಿಂಗಳ ಮೇಲಾದರೂ ನಗರಸಭೆ ಅಧಿಕಾರಿಗಳು ಗಮನ ಹರಿಸಿಲ್ಲ. ಈ ಬಗ್ಗೆ ನೂತನ ಜಿಲ್ಲಾಧಿಕಾರಿಗಳು ಹಾಗೂ ನೂತನ ಪೌರಾಯುಕ್ತರಿಗೆ ನೆನಪೋಲೆ ಸಲ್ಲಿಸಿ ಬೇಂದ್ರೆ ಮತ್ತು ಕುವೆಂಪು ಅವರ ಪುತ್ಥಳಿಗಳನ್ನು ಅವಳಿ ನಗರದಲ್ಲಿ ಸ್ಥಾಪಿಸಲು ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಮಹಾಂತೇಶ ಹೂಗಾರ, ಟಿ.ಐ. ಗದಗಿನ, ಎಂ.ವಿ. ಕೆಂಬಾವಿಮಠ, ವಿಕ್ರಮ ಮುನವಳ್ಳಿ, ಗಣೇಶ ಕಾಟಿಗರ, ಎಂ.ಎ. ಜಲಗೇರಿ, ವಿನಯ ಹಿರೇಮಠ, ವಿನಾಯಕ ಗಾಣಿಗೇರ ಮುಂತಾದವರು ಉಪಸ್ಥಿತರಿದ್ದರು. ಬಿ.ಎಸ್. ಹಿಂಡಿ ಸ್ವಾಗತಿಸಿದರು. ಪ್ರ.ತೋ. ನಾರಾಯಣಪೂರ ವಂದಿಸಿದರು.