ಗದಗ: ಮಹಮ್ಮದೀಯನಾಗಿ ಹುಟ್ಟಿ ವೀರಶೈವ ಧರ್ಮ ಸಿದ್ಧಾಂತ ಹಾಗೂ ವೈದಿಕ ಧರ್ಮ ಸಿದ್ಧಾಂತದ ಬಗ್ಗೆ ಅಳವಾಗಿ ಚಿಂತನೆಗೈದು ಸರ್ವರೂ ಕೂಡಿ ಬಾಳುವ ತತ್ವ ಸಂದೇಶ ಸಾರಿದ ಶಿಶುನಾಳ ಶರೀಫರು ಕನ್ನಡ ನಾಡು ಕಂಡ ಜಾತ್ಯತೀತ ಧೋರಣೆಯ ಶ್ರೇಷ್ಠ ಸಂತರಾಗಿದ್ದರು ಎಂದು ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಹೇಳಿದರು.

ನಗರದ ಕಬ್ಬಿಗರ ಕೂಟದಲ್ಲಿ ಶರೀಫ ಸಾಹೇಬರ ಭಾವೈಕ್ಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಶರೀಫರ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಠ ಮಂದಿರ, ಚರ್ಚ್‌, ಮಸೀದಿ, ಬಸದಿಗಳಾಚೆಗಿನ ಸಮಾನ ದೃಷ್ಟಿಯ ಮಾನವ ಧರ್ಮವೇ ಭಾರತೀಯ ಸಂಸ್ಕೃತಿಯ ಸಾರವೆಂದು ಶರೀಫರು ನಂಬಿದ್ದರು. ಮಹಮ್ಮದೀಯನಾಗಿ ತಂದೆಯಿಂದ ಇಸ್ಲಾಂ ಧರ್ಮದ ಶ್ರದ್ಧೆ ಬೆಳೆಸಿಕೊಂಡ ಅವರು ವೀರಶೈವ ಗುರುವಿನಿಂದ ಶೈವ ಸಿದ್ಧಾಂತ, ಬ್ರಾಹ್ಮಣ ಗುರುವಿನಿಂದ ವೈದಿಕ ಧರ್ಮ ಸಿದ್ಧಾಂತದ ದೀಕ್ಷೆ ಪಡೆದು ಮೂರು ಧರ್ಮಗಳನ್ನು ಸಮನ್ವಯಗೊಳಿಸಿ ಮನಸ್ಸಿನೊಳಗೆ ಮಹದೇವನನ್ನು ಗುರುವಿನ ಮೂಲಕ ಸಾಕ್ಷಾತ್ಕಾರಗೊಳಿಸಿಕೊಂಡರು. ಕೋಮು ಸೌಹಾರ್ದಕ್ಕೆ ಸಾಕ್ಷಿ ಪುರುಷನಾಗಿ ಕಾಯ ಆಳಿದರೂ ತತ್ವಬೋಧೆಗಳಿಗೆ ಸಾವಿಲ್ಲ ಎಂಬುದನ್ನು ಸಾಬೀತು ಪಡಿಸಿದರು. ಅಂತೆಯೇ 200 ವರ್ಷ ಗತಿಸಿದರೂ ಅವರ ತತ್ವಪದಗಳು ಇಂದಿಗೂ ಜನರ ನಾಲಿಗೆಯಲ್ಲಿ ನಲಿದಾಡುತ್ತಿವೆ. ಅವರು ಐಕ್ಯವಾದ ಶಿಶುನಾಳದ ಶರೀಫಗಿರಿ, ಸರ್ವ ಜನಾಂಗದ ಶಾಂತಿಯ ತೋಟವಾಗಿ ಪ್ರತೀತಿ ಪಡೆದಿದೆ ಎಂದು ತಿಳಿಸಿದರು.

ಸಾಹಿತಿ ಬಸವರಾಜ ಗಣಪ್ಪನವರ ಮಾತನಾಡಿ, ಶರೀಫ ಸಾಹೇಬರು ಸರಳ ಜೀವನದ ಮೂಲಕ ಮೌಲಿಕ ಜೀವನ ಸತ್ವಗಳನ್ನು ತಮ್ಮ ತತ್ವಪದಗಳ ಮೂಲಕ ಸಾರಿದರು. ಸಾಹಿತ್ತಿಕವಾಗಿ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡ ಅವರ ಗೀತೆಗಳು ಭಾವುಕರ ಮನಸೂರೆಗೊಳ್ಳುವ ವಿಶೇಷ ಗುಣ ಪಡೆದಿವೆ ಎಂದರು.

ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಮಾತನಾಡಿ, ಇಂದಿನ ಜಾತಿ ಗಲಭೆ, ಕೋಮು ಗಲಭೆಗಳ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಶರೀಫರ ಜೀವನ ಸಂದೇಶ ಪರಿಣಾಮಕಾರಿಯಾಗಿದ್ದು, ಯುವ ಪಿಳಿಗೆಯವರಿಗೆ ಶರೀಫರ ಸಂದೇಶ, ತತ್ವಪದ ಸರಳ, ಸೌಹಾರ್ದ ಬದುಕಿನ ಬಗ್ಗೆ ಪರಿಚಯಿಸಬೇಕಾದ ಅಗತ್ಯವಿದೆ ಎಂದರು.


ಈ ವೇಳೆ ಪ್ರ.ತೋ. ನಾರಾಯಣಪೂರ, ಎಸ್.ಎಸ್. ಮಲ್ಲಾಪೂರ, ಅಶೋಕ ಸತ್ಯಮ್ಮನವರ, ರಾಘವೇಂದ್ರ ಮೇದಾರ, ಟಿ.ಐ. ಗದಗಿನ, ಶ್ರೀಶ ಕಬಾಡಿ, ಉಮಾ ಗಂಟಿ, ವೆಂಕಟೇಶ ಮೇರವಾಡೆ, ಗಣಪತಸಾ ಕಲಬುರ್ಗಿ, ಕಿರಣ ದಾನಿ, ಅರುಣ ಪವಾರ, ವಿನೋದ ಕಲಬುರ್ಗಿ ಮುಂತಾದವರು ಇದ್ದರು. ಬಾಬಾಜಾನ ಯಲಿಗಾರ ಸ್ವಾಗತಿಸಿದರು. ನಜೀರ ಸಂಶಿ ವಂದಿಸಿದರು.