ಸಾರಾಂಶ
ಹಾನಗಲ್ಲ: ಬದಲಾದ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳು ದೊಡ್ಡ ಸವಾಲುಗಳನ್ನು ಎದುರಿಸಿಯೂ ಮಾನವೀಯ ಮೌಲ್ಯ ಪ್ರೇರೇಪಣೆಗೊಳಿಸುವ ಶಿಕ್ಷಣ ನೀಡಿ, ಶೈಕ್ಷಣಿಕ ಪಾವಿತ್ರ್ಯತೆ ಉಳಿಸಬೇಕಾಗಿದೆ, ಮೌಲ್ಯ ಬಿತ್ತುವ ಮಹತ್ಕಾಯ ಗುರು ಬಳಗದಿಂದಾಗಲಿ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಗುರುವೇ ಅರಿವಿನ ಮೂಲ ಸ್ತಂಭ. ಸರ್ಕಾರಿ ಶಾಲೆಗಳಿಗೆ ಸೌಲಭ್ಯಗಳ ಕೊರತೆ ಇದೆ. ಆರ್ಥಿಕ ಪರಿಸ್ಥಿತಿ ಸಹಕರಿಸುತ್ತಿಲ್ಲ. ಇದರ ನಡುವೆ ಶಿಕ್ಷಕರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಒಂದಷ್ಟು ಆರ್ಥಿಕವಾಗಿ ಕೈಜೋಡಿಸಬೇಕಾಗಿದೆ ಎಂದರು.ಶಾಲೆಗಳ ಅಭಿವೃದ್ಧಿಗೆ ದಾನಿಗಳು ಕೊಟ್ಟಷ್ಟು ಹಣವನ್ನು ನಾನು ದಾನವಾಗಿ ಕೊಡುತ್ತೇನೆ. ಶಾಲೆಗಳಿಗೆ ಏನು ಕೊರತೆಯಾಗದಂತೆ ಕಾಳಜಿ ವಹಿಸೋಣ ಎಂದ ಅವರು, ಸಾಮಾಜಿಕ ಭದ್ರತೆ ಹಾಳಾಗಿದೆ. ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆ ಉಳಿಸಿಕೊಳ್ಳಬೇಕಾಗಿದೆ. ಎಲ್ಲದರಲ್ಲೂ ರಾಜಕಾರಣ ತೂರಿಸುವುದು ಬೇಡ. ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ನಮ್ಮ ಆದ್ಯತೆ ಇರಲಿ. ನಾನು ಇರುವಷ್ಟು ದಿನ ಈ ಕ್ಷೇತ್ರದ ಕಾಳಜಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ ಮಾತನಾಡಿ, ಮಕ್ಕಳ ಭವಿಷ್ಯದ ಗುರಿಗೆ ಗುರುವೇ ಸರಿಯಾದ ಮಾರ್ಗದರ್ಶಕ. ಎಲ್ಲವನ್ನೂ ಗುರುಗಳಿಂದಲೇ ನಿರೀಕ್ಷಿಸದೆ ಪಾಲಕರ ಪರಿಶ್ರಮವೂ ಬೇಕು. ಏಕಲವ್ಯನಂತಹ ವಿದ್ಯಾರ್ಥಿಗಳಿದ್ದರೆ ದ್ರೋಣಾಚಾರ್ಯರಂತಹ ಗುರುಗಳು ಮಾರ್ಗದರ್ಶನ ಮಾಡಬಲ್ಲರು. ಶಾಲಾ ಶಿಕ್ಷಣಕ್ಕೆ ಏನು ಕೊರತೆಯಾಗದಂತೆ ಎಲ್ಲರೂ ಕೂಡಿ ಮುಂದೇ ಸಾಗಬೇಕಿದೆ ಎಂದರು.ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ದೇಶದ ಕೀರ್ತಿ, ವೈಭವ ಗುರುವಿನ ಮಾರ್ಗದರ್ಶನವನ್ನೇ ಅವಲಂಬಿಸಿದೆ. ಶಿಕ್ಷಕರು ವಿದ್ಯಾರ್ಥಿಗಳ ಪಾಲಿಗೆ ಬದುಕಿಗೆ ಮಾರ್ಗದರ್ಶನ ಮಾಡುವ ಅಂಬಿಗನಂತೆ. ವಿದ್ಯಾದಾನ ಶ್ರೇಷ್ಠವಾದುದು. ನಾವೆಲ್ಲ ಪುಸ್ತಕ ಪ್ರೇಮಿಗಳಾಗಬೇಕು. ಪ್ರಾಂಜಲ ಮನಸ್ಸಿನಿಂದ ಸೇವೆ ಸಲ್ಲಿಸಬೇಕು. ಯಾವ ಕಾಲಕ್ಕೂ ಗುರುವಿನ ಮಹತ್ವ ಕಡಿಮೆಯಾಗಲು ಸಾಧ್ಯವಿಲ್ಲ. ದೂರುವ ಶಿಕ್ಷಕರಾಗುವುದು ಬೇಡ. ದೂರದೃಷ್ಟಿಯ ಶಿಕ್ಷಕರಾಗೋಣ ಎಂದರು.
ಬಿಇಒ ವಿ.ವಿ. ಸಾಲಿಮಠ, ಶಿರಹಟ್ಟಿಯ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಎ. ಬಳಿಗಾರ ಉಪನ್ಯಾಸ ನೀಡಿದರು. ಗ್ರೇಡ್-೨ ತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಇಒ ಪರಶುರಾಮ ಪೂಜಾರ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಗುಂಡಪಲ್ಲಿ, ಎಸ್.ಎಸ್. ಹಿರೇಮಠ, ವಿಜಯಕುಮಾರ ದೊಡ್ಡಮನಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕಲ್ಲಪ್ಪ ಚಿಕ್ಕೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ. ಪಾಟೀಲ, ರಾಜೇಶ ಜಿಗಳಿ, ಆರ್.ಬಿ. ಬಡಿಗೇರ, ಡಿ.ಡಿ. ಲಂಗೋಟಿ, ಎಸ್.ವಿ. ಬೂದಿಹಾಳ, ಮಹೇಶ ನಾಯಕ, ಸಂತೋಷ ವಡ್ಡರ, ಸಂತೋಷ ದೊಡ್ಡಮನಿ, ಸುರೇಶ ಹೀರೂರ, ಎ.ವಿ. ಹನುಮಾಪುರ, ಬಿ.ಎಂ. ಅರಳೇಶ್ವರ, ಅನಿತಾ ಕಿತ್ತೂರ, ಎಸ್.ಕೆ. ದೊಡ್ಡಮನಿ, ಮಖಬುಲ್ ಲಿಂಗದಹಳ್ಳಿ, ಶಿವಯೋಗಿ ನರೇಗಲ್ಲ, ಪಿ.ಆರ್. ಚಿಕ್ಕಳ್ಳಿ, ಅನಿಲಕುಮಾರ ಗೋಣೆಣ್ಣನವರ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.ಇದೇ ವೇಳೆ ನಿವೃತ್ತ ಶಿಕ್ಷಕರು ಹಾಗೂ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.