ಸಾರಾಂಶ
ಸಮ್ಮೇಳನಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಜನರು ಇಂತಹ ನಡವಳಿಕೆಗಳ ವಿರುದ್ಧ ಪ್ರತಿಭಟಿಸಬೇಕು. ಅನ್ಯಾಯದ ವಿರುದ್ಧ ನಿಲ್ಲುವ ಮನಸ್ಥಿತಿಯನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಭಾಷೆ, ನಾಡು, ನುಡಿ ಅಭಿವೃದ್ಧಿಯಾಗಲು ಸಾಧ್ಯ.
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡದ ಶ್ರೇಷ್ಠತೆಯ ಬಗ್ಗೆ ತಿಳಿಯಲು ಇತಿಹಾಸ, ಕಾವ್ಯ, ಚಾರಿತ್ರಿಕ ವಿಷಯಗಳನ್ನು ಅಧ್ಯಯನ ಮಾಡಬೇಕು ಎಂದು ನಿವೃತ್ತ ಉಪನ್ಯಾಸಕ ಜಿ.ಟಿ.ವೀರಪ್ಪ ಸಲಹೆ ನೀಡಿದರು.ನಗರದ ಜೈಕರ್ನಾಟಕ ಪರಿಷತ್‌ನಿಂದ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯದ ಅರಿವು ಮತ್ತು ಮಂಕುತಿಮ್ಮನ ಕಗ್ಗದ ವಾಚನ-ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರಿಗೆ ಸಾಂಸ್ಕೃತಿಕ ಪ್ರಜ್ಞೆ ಅತಿ ಅವಶ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ಏರ್ಪಡಿಸುವಂತೆ ಸಲಹೆ ನೀಡಿದರು.
ಮುಂದಿನ ಪೀಳಿಗೆ ಕನ್ನಡ ಭಾಷೆ, ಜಲ, ನಾಡು, ನುಡಿಯ ಬಗ್ಗೆ ಜಾಗೃತರಾಗಿ ಅಸ್ಮಿತೆಯನ್ನು ಕಾಪಾಡಬೇಕಾದ ಅಗತ್ಯತೆ ಹಾಗೂ ಅನಿವಾರ್ಯತೆ ಇದೆ. ಮಂಡ್ಯದಲ್ಲಿ ೧೯೯೪ ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಸ್ಮರಿಸಿದ ಅವರು ೩೦ ವರ್ಷಗಳ ನಂತರ ಕಳೆದ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಹೆಚ್ಚು ಹಣ ವೆಚ್ಚ ಮಾಡಿ ಸಾಹಿತಿಗಳನ್ನೂ ಕಡೆಗಣಿಸಿ ರಾಜಕೀಯ ಪ್ರೇರಿತವಾಗಿ ಮಾಡಿದ ಜಾತ್ರೆ ಎಂದು ಬೇಸರ ವ್ಯಕ್ತಪಡಿಸಿ, ಇಂದಿನ ರಾಜ್ಯಾಧ್ಯಕ್ಷರ ವರ್ತನೆ, ಸರ್ವಾಧಿಕಾರಿ ಧೋರಣೆಗಳು ತೀವ್ರ ಖಂಡನೀಯ ಎಂದರು.ಸಮ್ಮೇಳನಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಜನರು ಇಂತಹ ನಡವಳಿಕೆಗಳ ವಿರುದ್ಧ ಪ್ರತಿಭಟಿಸಬೇಕು. ಅನ್ಯಾಯದ ವಿರುದ್ಧ ನಿಲ್ಲುವ ಮನಸ್ಥಿತಿಯನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಭಾಷೆ, ನಾಡು, ನುಡಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ವಿ. ಧರಣೇಂದ್ರಯ್ಯ ಮಾತನಾಡಿ, ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗುರುತಿಸಿಕೊಳ್ಳುವಂತಾಗಲು ನಮ್ಮ ಅವಧಿಯ ೯ ವರ್ಷಗಳ ಕಾಲ ತಾವು ಹಾಗೂ ಅನೇಕರು ಬೀದಿ ಬೀದಿಗಳಲ್ಲಿ ಪುಸ್ತಕಗಳನ್ನು ಮಾರಿದ್ದೇವೆ. ಗುಣಮಟ್ಟದ ಕಾರ್ಯಕ್ರಮಗಳನ್ನು ನಿತ್ಯ ಸಚಿವ ಕೆ.ವಿ.ಶಂಕರಗೌಡರ ಸಹಕಾರ, ಕಾಳಜಿಯ ಪ್ರತೀಕವಾಗಿ ಮಾಡಿದ್ದೇವೆ. ಇದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲ ಕನ್ನಡಿಗರ ಮೇಲಿದೆ ಎಂದರು.ಜೈಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಪ್ರಾಸ್ತಾವಿಕ ಮಾತನಾಡಿದರು. ಪರಿಷತ್ ಅಧ್ಯಕ್ಷ ಎಂ.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶ್ರೀನಿವಾಸಶೆಟ್ಟಿ, ಶಂಕರೇಗೌಡ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಬಳಿಕ ಕನ್ನಡದ ಭಗವದ್ಗೀತೆ ಹಾಗೂ ಮಂಕುತಿಮ್ಮನ ಕಗ್ಗದ ಆಯ್ದ ಕಗ್ಗಗಳನ್ನು ಗಮಕಿ ಸಿ.ಪಿ. ವಿದ್ಯಾಶಂಕರ್ ವಾಚಿಸಿದರೆ, ಸಾಹಿತಿ ಎಸ್. ಶ್ರೀನಿವಾಸಶೆಟ್ಟಿ ಪ್ರಚನ ನಡೆಸಿಕೊಟ್ಟರು.