ಕನ್ನಡ ನಾಡಿನ ಹಿರಿಮೆ ಬೆಳೆಸಿ ನೈಸರ್ಗಿಕ ಸೊಬಗು ಉಳಿಸಬೇಕು-ಸ್ವಾಮೀಜಿ

| Published : Sep 23 2025, 01:04 AM IST

ಕನ್ನಡ ನಾಡಿನ ಹಿರಿಮೆ ಬೆಳೆಸಿ ನೈಸರ್ಗಿಕ ಸೊಬಗು ಉಳಿಸಬೇಕು-ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿನ್ನದಂತಹ ಕನ್ನಡ ನಾಡಿನ ಹಿರಿಮೆ ಸೌಂದರ್ಯವನ್ನು ಬೆಳೆಸಿ ನೈಸರ್ಗಿಕ ಸೊಬಗನ್ನು ಉಳಿಸಬೇಕಾಗಿದೆಯೇ ಹೊರತು, ದುರಾಸೆಗೆ ಕೊಳ್ಳೆ ಹೊಡೆದು ಹಾಳು ಮಾಡುವುದು ಬೇಡ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಕರೆ ನೀಡಿದರು.

ಹಾನಗಲ್ಲ: ಚಿನ್ನದಂತಹ ಕನ್ನಡ ನಾಡಿನ ಹಿರಿಮೆ ಸೌಂದರ್ಯವನ್ನು ಬೆಳೆಸಿ ನೈಸರ್ಗಿಕ ಸೊಬಗನ್ನು ಉಳಿಸಬೇಕಾಗಿದೆಯೇ ಹೊರತು, ದುರಾಸೆಗೆ ಕೊಳ್ಳೆ ಹೊಡೆದು ಹಾಳು ಮಾಡುವುದು ಬೇಡ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಕರೆ ನೀಡಿದರು. ಸೋಮವಾರ ಹಾನಗಲ್ಲಿನ 88ನೇ ನಾಡಹಬ್ಬದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ಎಲ್ಲ ಸಂಪತ್ತನ್ನು ಈ ನಾಡು ನಮಗಾಗಿ ನೀಡಿದೆ. ಆದರೆ ನಾಡ ಸೊಬಗು ಹೆಚ್ಚಿಸುವ ಬದಲು ಇಲ್ಲಿನ ಖನಿಜ, ಗುಡ್ಡ ಬೆಟ್ಟಗಳನ್ನು ಕೊಳ್ಳೆ ಹೊಡೆದು ನಮ್ಮ ದುರಾಸೆಯನ್ನು ತೀರಿಸಿಕೊಳ್ಳುತ್ತಿದ್ದೇವೆ. ನದಿಗಳಿಂದ ರಮಣೀಯವಾಗಿರುವ ಕನ್ನಡ ನಾಡಿನಲ್ಲಿ ಕವಿ ಮಹಾಶಯರು ನಾಡನ್ನು ಹಾಡಿ ಹೊಗಳಿದ್ದಾರೆ. ಇಲ್ಲಿನ ಸಂಸ್ಕೃತಿ ವೈಭವವನ್ನು ಎಲ್ಲರೂ ಆನಂದಿಸಿದ್ದಾರೆ. ಇದು ಸಾಹಿತ್ಯ ಸಂಸ್ಕೃತಿ ಕಲೆಯಿಂದ ಶ್ರೀಮಂತಗೊಂಡ ನಾಡಾಗಿದೆ. ಕರ್ನಾಟಕ ಸಂಗೀತ ಎಂಬ ಸಂಗೀತ ವೈಭವವೇ ಇಲ್ಲಿಂದ ಆರಂಭವಾಗಿದೆ. ಈಗ ಮಠಾಧೀಶರು ಸತ್ಯ ಧರ್ಮ ಬೋಧನೆಗೆ ಮುಂದಾಗಬೇಕಾದ ಕಾಲ. ಆದರೆ ಮಠಗಳು ಆತಂಕದಲ್ಲಿವೆ. ಭಕ್ತರು ಮಠ ಹಾಗೂ ಧಾರ್ಮಿಕ ಸಂಸ್ಕೃತಿಯನ್ನು ಉಳಿಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.ಸಮಾರಂಭದ ಉದ್ಘಾಟಿಸಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ನಾಡಹಬ್ಬ ನಮ್ಮ ಸಾಂಸ್ಕೃತಿಕ ಹೆಮ್ಮೆ. ಇಡೀ ರಾಜ್ಯದಲ್ಲಿಯೇ ಮೈಸೂರು ದಸರೆಯ ನಂತರ ದೀರ್ಘ ಕಾಲದ ಅರ್ಥಪೂರ್ಣ ಹಬ್ಬ ಆಚರಣೆ ಮಾಡಿರುವುದು ಇಲ್ಲಿನ ಹಿತಿಹಾಸ. ಎಲ್ಲರೂ ಜೊತೆಗೂಡಿ ಗಟ್ಟಿ ಹೆಜ್ಜೆ ಹಾಕಿದರೆ ಮಾತ್ರ ಹಾನಗಲ್ಲ ನಾಡಹಬ್ಬದ ಗತ ವೈಭವ ಮತ್ತೆ ಮರಳಲು ಸಾಧ್ಯ. ಮುಕ್ತ ಮನಸ್ಸಿನಿಂದ ಅರ್ಥಪೂರ್ಣ ಹಬ್ಬದ ಆಚರಣೆಗೆ ಪ್ರಯತ್ನಿಸಿದ್ದೇನೆ. ಆದರೆ ಬೇರೆ ಬೇರೆ ಬೆಳವಣಿಗೆಗಳನ್ನು ಕಂಡು ಮೌನವಾಗಿದ್ದೇನೆ. ಈಗಲೂ ಕಾಲ ಮಿಂಚಿಲ್ಲ. ರಾಜ್ಯದ ಗಣ್ಯಾತಿಗಣ್ಯರಿಂದ ಹಾನಗಲ್ಲ ನಾಡಹಬ್ಬ ಮೆಚ್ಚುಗೆಗೆ ಪಾತ್ರವಾಗಿದೆ. ಹಾನಗಲ್ಲ ನೆಲದ ಇತಿಹಾಸ ಹಾಗೂ ಘನತೆಯನ್ನು ನೆನಪಿಸುವಂತೆ ಈ ನಾಡಹಬ್ಬ ಮಾಡಿದೆ. ಅದನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಲು ಕೂಡಿ ಹೆಜ್ಜೆ ಹಾಕೋಣ. ಎಲ್ಲ ಸಹಕಾರ ನನ್ನಿಂದ ಇದೆ ಎಂದರು. ಸಾಹಿತಿ ಪ್ರೊ.ಮಾರುತಿ ಶಿಡ್ಲಾಪುರ ಆಶಯ ನುಡಿ ನುಡಿದರು. ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಅಧ್ಯಕ್ಷತೆವಹಿಸಿದ್ದರು. ಗೌರವಾಧ್ಯಕ್ಷ ಕೆ.ಎಲ್. ದೇಶಪಾಂಡೆ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ತಾಲೂಕು ತಹಸೀಲ್ದಾರ ಎಸ್. ರೇಣುಕಾ, ನಾಡಹಬ್ಬ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ವಿಜಯಕುಮಾರ ದೊಡ್ಡಮನಿ, ಸಿದ್ದನಗೌಡ ಪಾಟೀಲ, ಟಾಕನಗೌಡ ಪಾಟೀಲ, ಅಶೋಕ ಹಲಸೂರ, ಮಂಜು ಗುರಣ್ಣನವರ ಅತಿಥಿಗಳಾಗಿದ್ದರು.

ನಿಖಿತಾ ಮಾಳಗಿ ಪ್ರಾರ್ಥನೆ ಹಾಡಿದರು. ನ್ಯಾಯವಾದಿ ಎಸ್.ಎಂ.ಕೋತಂಬರಿ ಸ್ವಾಗತಿಸಿದರು. ಡಿ.ಜೆ.ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.