ಹಂಗರಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಜ. 16, 17ರಂದು ಕ್ರೀಡೆ ಆಯೋಜಿಸಲಾಗಿದೆ. ಕ್ರೀಡಾ ಮಹೋತ್ಸವಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಲಿದ್ದು, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸುತ್ತಾರೆ.

ಧಾರವಾಡ:

ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ ಗ್ರಾಮೀಣ ಕ್ಷೇತ್ರ ಮಟ್ಟದ ಸಂಸದರ ಕ್ರೀಡಾ ಮಹೋತ್ಸವಕ್ಕೆ ತಾಲೂಕಿನ ಗರಗ ಬಳಿಯ ಹಂಗರಕಿಯ ಶಾಲಾ ಮೈದಾನವು ಸಜ್ಜಾಗಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗ್ರಾಮೀಣ ಮಂಡಲ ಬಿಜೆಪಿ ಅಧ್ಯಕ್ಷ ಶಂಕರ ಕೋಮಾರದೇಸಾಯಿ ಹಾಗೂ ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಹಂಗರಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಜ. 16, 17ರಂದು ಕ್ರೀಡೆ ಆಯೋಜಿಸಲಾಗಿದೆ. ಕ್ರೀಡಾ ಮಹೋತ್ಸವಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಲಿದ್ದು, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸುತ್ತಾರೆ. ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜಿಸಲು ಈ ಮಹೋತ್ಸವ ನಡೆಸಲಾಗುತ್ತಿದೆ ಎಂದರು.

ಗುಂಪು ಆಟಗಳಲ್ಲಿ ವಾಲಿಬಾಲ್‌, ಕಬಡ್ಡಿ ಹಾಗೂ ಖೋಖೋ ನಡೆಯಲಿವೆ. ಈಗಾಗಲೇ ತಲಾ ಗುಂಪು ಆಟಗಳಿಗೆ 80 ತಂಡ ನೋಂದಣಿಯಾಗಿವೆ. ಈ ಆಟದಲ್ಲಿ ಪ್ರಥಮ ಬಹುಮಾನ ₹ 30 ಸಾವಿರ, ದ್ವಿತೀಯ ಬಹುಮಾನ ₹ 20 ಸಾವಿರ ಹಾಗೂ ತೃತೀಯ ಬಹುಮಾನ ₹ 10 ಸಾವಿರ ನೀಡಲಾಗುತ್ತಿದೆ. ಕಬಡ್ಡಿ ಮತ್ತು ವಾಲಿಬಾಲ್‌ ಆಟಗಳಿಗೆ 16 ವರ್ಷಕ್ಕಿಂತ ಮೀರಿದವರು ಇರಬೇಕು. ಖೋಖೋ ಆಟಕ್ಕೆ 25 ವರ್ಷ ಮೀರಿರಬಾರದು. ಇನ್ನು, ವೈಯಕ್ತಿಕ ಆಟಗಳಾಗಿ 100 ಮೀಟರ್‌, 800 ಮೀಟರ್ ಓಟ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಗುಂಡು ಎಸೆತಗಳಿವೆ. ಇಲ್ಲಿ ಪ್ರಥಮ ಬಹುಮಾನ ₹ 7 ಸಾವಿರ, ದ್ವಿತೀಯ ₹ 5 ಸಾವಿರ ಹಾಗೂ ತೃತೀಯ ₹ 3 ಸಾವಿರ ಬಹುಮಾನವಿದೆ. ಇಲ್ಲಿ 17 ವರ್ಷಕ್ಕಿಂತ ಕಡಿಮೆ ಜ್ಯೂನಿಯರ್‌ ಹಾಗೂ 17 ವರ್ಷದ ಮೇಲ್ಪಟ್ಟವರಿಗೆ ಹಿರಿಯರ ವಿಭಾಗದ ಅಡಿ ಆಡಬೇಕು ಎಂದು ತಿಳಿಸಿದರು.

ಈ ಕ್ರೀಡಾಕೂಟದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿರಬೇಕು. ಕಬಡ್ಡಿ ನೋಂದಣಿಗೆ ಯಲ್ಲಪ್ಪ ಜಾನಕೂನವರ 8618924052, ಖೋಖೋ ನೋಂದಣಿಗೆ ಮುತ್ತು ಬ್ಯಾಳಿ 9738559313, ವಾಲಿಬಾಲ್‌ ನೋಂದಣಿಗೆ ಮೃತ್ಯುಂಜಯ ಹಿರೇಮಠ 9164559994 ಹಾಗೂ ಅಥ್ಲೇಟಿಕ್ಸ್‌ ನೋದಂಣಿಗೆ ಮಹಾಂತೇಶ ಹುಲ್ಲೂರ 9742083906 ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ನಾಗಪ್ಪ ಗಾಣಿಗೇರ, ಶಶಿಮೌಳಿ ಕುಲಕರ್ಣಿ, ಗುರುನಾಥ ಗೌಡರ, ನಿಜನಗೌಡ ಪಾಟೀಲ ಮತ್ತಿತರರು ಇದ್ದರು.