ಸಾರಾಂಶ
ಅಧಿಕಾರಕ್ಕೆ ಬರುವ ಮೊದಲು ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅದರಂತೆ ನಡೆದಿದ್ದರೆ ಅವರ ಅಧಿಕಾರದ ಅವಧಿಯಲ್ಲಿ ಈವರೆಗೆ ೨೦ ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ದೇಶದ ಉದ್ದಗಲಕ್ಕೂ ನಿರುದ್ಯೋಗಿಗಳೇ ಕಾಣುತ್ತಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಹೇಳಿದರು.
- ಪಟ್ಟಣದ ಬಸ್ ನಿಲ್ದಾಣದಲ್ಲಿ ಅಬ್ಬರದ ಮಳೆ ನಡುವೆಯೇ ಕಾಂಗ್ರೆಸ್ ಚುನಾವಣಾ ಪ್ರಚಾರಸಭೆ
ಕನ್ನಡಪ್ರಭ ವಾರ್ತೆ, ಕೊಪ್ಪಅಧಿಕಾರಕ್ಕೆ ಬರುವ ಮೊದಲು ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅದರಂತೆ ನಡೆದಿದ್ದರೆ ಅವರ ಅಧಿಕಾರದ ಅವಧಿಯಲ್ಲಿ ಈವರೆಗೆ ೨೦ ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ದೇಶದ ಉದ್ದಗಲಕ್ಕೂ ನಿರುದ್ಯೋಗಿಗಳೇ ಕಾಣುತ್ತಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು ಸ್ವಿಸ್ ಬ್ಯಾಂಕಿನಲ್ಲಿದ್ದ ಕಪ್ಪು ಹಣ ತಂದು ಎಲ್ಲರ ಖಾತೆಗೆ ೧೫ ಲಕ್ಷ ರು.ಗಳನ್ನು ಹಾಕುತ್ತೇವೆ ಎಂದ ಬಿಜೆಪಿಗರ ಭರವಸೆ ಹುಸಿಯಾಗಿಯೇ ನಿಂತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಭರವಸೆಯನ್ನು ಅಧಿಕಾರಕ್ಕೆ ಬಂದ ಕೇವಲ ೯ ತಿಂಗಳಲ್ಲಿ ಈಡೇರಿಸಿದ್ದಾರೆ. ರಾಜ್ಯದಲ್ಲಿ ಹೆಚ್ಚಿನ ಕುಟುಂಬಗಳು ೫ ಗ್ಯಾರಂಟಿ ಗಳ ಫಲಾನುಭವಿಗಳಾಗಿದ್ದಾರೆ. ಕಾಂಗ್ರೆಸ್ ನುಡಿದಂತೆ ನಡೆವ ಪಕ್ಷ ಎಂದ ಅವರು ನಾನು ಸಂಸದನಾಗಿದ್ದ ೨೦ ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನ್ನ ಅಭಿವೃದ್ಧಿ ಕೆಲಸದ ಆಧಾರದಲ್ಲಿ ಮತ ಯಾಚಿಸುತ್ತಿದ್ದೇನೆ. ನನಗೆ ಮತ ನೀಡಿ ಗೆಲ್ಲಿಸಿದಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಡಲು ಬದ್ಧರಾಗಿದ್ದೇನೆ ಎಂದರು. ಅಡಿಕೆ ಬೆಳೆಗಾರರ ಸಮಸ್ಯೆಗೆ ನಾನು ಸ್ಪಂದಿಸಿದ್ದೇನೆ. ಗೋರಖ್ ಸಿಂಗ್ ವರದಿ ಅನುಷ್ಠಾನ ಮಾಡಲು ಅವರಿಗೆ ಎರಡು ಅವಧಿಯಲ್ಲಿ ಸಾಧ್ಯವಾಗಲಿಲ್ಲ. ಅಡಿಕೆ ಸಮಸ್ಯೆಗೆ ಜಯಪ್ರಕಾಶ್ ಹೆಗ್ಡೆ ಸ್ಪಂದಿಸಿಲ್ಲ ನಾವು ಸ್ಪಂದಿಸಿದ್ದೇವೆ ಎಂದು ಬಿಜೆಪಿಗರು ಹೇಳಿದ್ದಾರೆ, ಬಿಜೆಪಿಗರು ದಾಖಲೆ ರಹಿತವಾಗಿ ಮಾತನಾಡಬಾರದು ಎಂದರು. ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಬಿಜೆಪಿಗರು ಜಾತಿ, ಮತ, ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ರಾಜಕಾರಣ ಮಾಡುತ್ತಿದ್ದಾರೆ. ದೇಶದ ಹಿತರಕ್ಷಣೆ ಮಾಡುತ್ತೇವೆ ಎನ್ನುವವರು ಈಗ ಚೀನ ನಮ್ಮ ದೇಶದ ಪ್ರದೇಶ ಅತಿಕ್ರಮಿಸಿದ್ದರೂ ಸುಮ್ಮನಿದ್ದಾರೆ. ಅವರ ಅವಧಿಯಲ್ಲಿ ಪಠಾಣ್ ಕೋಟ್ ದಾಳಿಯಾಯಿತು. ಯುವಕರಿಗೆ ಉದ್ಯೋಗ ಹುಸಿಯಾಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನವಾಯಿತು ಎಂದು ತಿಳಿಸಿದರು.ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಗುಡುಗು ಸಿಡಿಲಿನೊಂದಿಗೆ ಭಾರಿ ಮಳೆ ಸುರಿಯುತ್ತಿದ್ದರೂ ಕಾರ್ಯಕ್ರಮ ಮುಂದುವರೆಯಿತು. ಕಾರ್ಯಕ್ರಮ ಆರಂಭದಲ್ಲಿಯೇ ಕೊಪ್ಪಕ್ಕೆ ಈ ವರ್ಷದ ಪ್ರಥಮ ಮಳೆ ಸುರಿದಿದೆ. ಮಳೆ ಶುಭ ಸೂಚಕ. ಕಾಂಗ್ರೆಸ್ ಪಕ್ಷ ಈ ಬಾರಿ ಎಲ್ಲೆಡೆ ಜಯಗಳಿಸಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳೆಮನೆ ನಟರಾಜ್ ಮಾತನಾಡಿದರು. ರಾಜ್ಯ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಚಿನ್ ಮೀಗ, ಶೃಂಗೇರಿ ಕ್ಷೇತ್ರ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಸಮಿತಿ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಮುಖಂಡರಾದ ವಜ್ರಪ್ಪ, ರಾಜಶಂಕರ್, ಎಚ್.ಎಸ್.ಇನೇಶ್, ಅನ್ನಪೂರ್ಣಾ ನರೇಶ್, ಸಂತೋಷ್ ಮುಂತಾದವರು ಇದ್ದರು.