ಸಾರಾಂಶ
ಮನುಷ್ಯನಿಗೆ ಸಂಸ್ಕಾರ, ಬದುಕಿನ ಹಾದಿ ತೋರಿಸಿದಾತ ಗುರು ಎಂದು ಉಜ್ಜಯನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು ನುಡಿದರು.
ರಾಣಿಬೆನ್ನೂರು: ಮನುಷ್ಯನಿಗೆ ಸಂಸ್ಕಾರ, ಬದುಕಿನ ಹಾದಿ ತೋರಿಸಿದಾತ ಗುರು ಎಂದು ಉಜ್ಜಯನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು ನುಡಿದರು. ಇಲ್ಲಿನ ಮ್ಯತ್ಯುಂಜಯ ನಗರ ಚೆನ್ನೇಶ್ವರ ಮಠದ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಗುರುಪೌರ್ಣಿಮೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜ್ಞಾನದ ಅರಿವು ಮೂಡಿಸುವ ತಾಯಿ ಕೂಡ ಗುರುವಾಗಿದ್ದಾರೆ. ಗುರುವಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಶಿವ ತಿಳಿಸಿದ್ದಾನೆ. ಗುರುವಿನ ಮೇಲೆ ನಂಬಿಕೆ ಇದ್ದರೆ ಮಾತ್ರ ಆತನ ಒಲುಮೆ ದೊರೆಯುತ್ತದೆ. ದೇವರ ಆಶೀರ್ವಾದ ಪಡೆಯಲು ಗುರುವಿನ ಸಹಕಾರ ಇರಬೇಕು. ಗುರುವಿನಲ್ಲಿ ಗುರುತ್ವಾಕರ್ಷಣ ಶಕ್ತಿಗಿಂತ ಮೀರಿದ ಶಕ್ತಿಯಿದೆ. ದೀಕ್ಷೆ, ಸಂಸ್ಕಾರದ ಮೂಲಕ ಗುರು ಶಿಷ್ಯರಿಗೆ ದೇವರ ಅನುಗ್ರಹ ಮಾಡಿಸುತ್ತಾರೆ. ಆದ್ದರಿಂದ ಗುರುವಿನ ಮೊರೆ ಹೋಗಬೇಕು. ಜೀವನದ ಅರಿವನ್ನು ನೀಡುವ ಗುರು ಇಂದು ನಮಗೆ ಬೇಕಾಗಿದ್ದಾರೆ ಎಂದರು. ನೇತೃತ್ವ ವಹಿಸಿದ್ದ ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಗುರುವಿನ ಒಲುಮೆಯಿಂದ ಜ್ಞಾನ ಪ್ರಾಪ್ತಿ. ಗುರು ಸದಾ ಶಿಷ್ಯನ ಶ್ರೇಯಸ್ಸು ಬಯಸುತ್ತಾರೆ. ಗುರುವಿನ ಆಶೀರ್ವಾದದಿಂದ ಜಗತ್ತನ್ನೇ ಗೆಲ್ಲಬಹುದು. ಆಗಸದಲ್ಲಿನ ಎಲ್ಲಾ ಮೋಡಗಳು ಮಳೆ ಸುರಿಸುವುದಿಲ್ಲ. ಕೆಲವು ಮೋಡಗಳು ಮಾತ್ರ ಮಳೆ ಸುರಿಸುತ್ತವೆ. ಅದೇ ರೀತಿ ಉಜ್ಜಯಿನಿ ಶ್ರೀಗಳು ಭಕ್ತರ ಇಷ್ಟಾರ್ಥ ಈಡೇರಿಸುತ್ತಾರೆ ಎಂದರು. ಕಡೆನಂದಿಹಳ್ಳಿ ವೀರಭದ್ರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿದರು. ಬಸವರಾಜ ಪಟ್ಟಣಶೆಟ್ಟಿ, ವ್ಹಿ.ಪಿ. ಲಿಂಗನಗೌಡ್ರ, ಉಮೇಶ ಗುಂಡಗಟ್ಟಿ, ಗುರುರಾಜ ತಿಳವಳ್ಳಿ, ಜಯಶ್ರೀ ತಿಳವಳ್ಳಿ, ಅಮೃತಗೌಡ ಪಾಟೀಲ, ಎಫ್.ಕೆ. ಭಸ್ಮಾಂಗಿಮಠ, ಕಸ್ತೂರಿ ಪಾಟೀಲ, ಸುನಂದಮ್ಮ ತಿಳವಳ್ಳಿ, ಮೃತ್ಯುಂಜಯ ಪಾಟೀಲ, ರವಿಕುಮಾರ ಪಾಟೀಲ, ಪ್ರಕಾಶ ಗಚ್ಚಿನಮಠ, ಕೊಟ್ರೇಶ ಅಂಗಡಿ, ಅಮೃತಗೌಡ ಪಾಟೀಲ, ಆನಂದಸ್ವಾಮಿ ಹಿರೇಮಠ, ಹಾಲಸಿದ್ದಯ್ಯ ಶಾಸ್ತ್ರಿಗಳು, ನೆಗಳೂರಮಠ, ಗುಡ್ಡಪ್ಪ ಹಿಂದಿನಮನಿ, ರಜನಿ ಕರಿಗಾರ ಮತ್ತಿತರರಿದ್ದರು.