ಕೈಕೊಟ್ಟ ಮಳೆ; ಕಮರಿಹೋದ ಶೇಂಗಾ ಬೆಳೆ

| Published : Sep 22 2024, 01:54 AM IST

ಸಾರಾಂಶ

ಆಗೊಮ್ಮೆ ಈಗೊಮ್ಮೆ ಎದುರಾದ ಮಳೆಯನ್ನೇ ನಂಬಿಕೊಂಡು ಕೆಲವು ರೈತರು ತಮ್ಮ ಜಮೀನುಗಳಲ್ಲಿ ಶೇಂಗಾ ಬೀಜ ಬಿತ್ತನೆ ಮಾಡಿದ್ದಾರೆ. ಇನ್ನೇನು ಕಾಯಿಯಾಗುವ ಹಂತ ತಲುಪಿದಾಗ ಮಳೆ ಕೈಕೊಟ್ಟ ಪರಿಣಾಮ ಶೇಂಗಾ ಗಿಡ ಬೆಳೆಯಲೇ ಇಲ್ಲ.

ಕನ್ನಡಪ್ರಭ ವಾರ್ತೆ ಚೇಳೂರುಹೊಲದಲ್ಲಿ ಬಿತ್ತನೆಯಾಗಿದ್ದ ಶೇಂಗಾ ಬೆಳೆ ಹೂವು ಕಟ್ಟಿದೆ. ನೆಲದೊಳಗೆ ಚಿಕ್ಕ ಚಿಕ್ಕ ನೀರುಗಾಯಿ ಕಟ್ಟುವ ಹಂತದಲ್ಲಿದೆ. ಬೆಳೆಗೆ ಈಗ ಮಳೆಯ ಅವಶ್ಯಕತೆ ಹೆಚ್ಚಿದೆ. ಇನ್ನು ೪-೫ ದಿನದಲ್ಲಿ ಅಲ್ಪ ಮಳೆ ಬಂದರೂ ಮುಕ್ಕಾಲು ಭಾಗ ಬೆಳೆ ಬದುಕುತ್ತದೆ. ಆದರೆ ಮಳೆ ಇಲ್ಲದೆ ಬೆಳೆ ಬಾಡುತ್ತಿದೆ. ರೈತರಿಗೆ ಇತ್ತ ಬೆಳೆಯೂ ಸಿಗುತ್ತಿಲ್ಲ, ಅತ್ತ ಬೆಳೆ ವಿಮೆಯೂ ಬರದೇ ಸಾಲಗಾರರಾಗುತ್ತಲೇ ಇದ್ದಾರೆ. ಈ ಹಿಂದೆ ಮಾಡಿರುವ ಸಾಲ ಒಂದು ಕಡೆಯಾದರೆ ಈಗ ಮತ್ತೆ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶಗಳು ಎದುರಾಗುತ್ತಲೇ ಇವೆ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ಶೇಂಗಾ ಬಿತ್ತನೆ ಮಾಡಿದ್ದು, ಮಳೆ ಕೈಕೊಟ್ಟ ಕಾರಣ ನಷ್ಟ ಅನುಭವಿಸಿದ್ದಾರೆ.ಕಾಯಿಕಟ್ಟುವ ಹಂತದಲ್ಲಿ ನೀರಿಲ್ಲ

ವರ್ಷದ ಆರಂಭದಲ್ಲಿ ರೈತಾಪಿ ವರ್ಗಕ್ಕೆ ಒಂದಿಷ್ಟು ಸಂತಸದ ಸನ್ನಿವೇಶ ಉಂಟಾಗಿತ್ತು. ಈ ವರ್ಷ ಮಳೆ ಬರಬಹುದು ಎಂಬ ನಂಬಿಕೆಯಿಂದಲೇ ರೈತರು ಎದುರು ನೋಡುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಎದುರಾದ ಮಳೆಯನ್ನೇ ನಂಬಿಕೊಂಡು ಕೆಲವು ರೈತರು ತಮ್ಮ ಜಮೀನುಗಳಲ್ಲಿ ಶೇಂಗಾ ಬೀಜ ಬಿತ್ತನೆ ಮಾಡಿದ್ದಾರೆ. ಇನ್ನೇನು ಕಾಯಿಯಾಗುವ ಹಂತ ತಲುಪಿದಾಗ ಮಳೆ ಕೈಕೊಟ್ಟ ಪರಿಣಾಮ ಶೇಂಗಾ ಗಿಡ ಬೆಳೆಯಲೇ ಇಲ್ಲ.

ತಾಲೂಕಿನ ಕೆಲವು ಪ್ರದೇಶಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಹೊಲಗಳಲ್ಲಿ ಶೇಂಗಾ ಒಣಗಿರುವ ದೃಶ್ಯ ಕಂಡುಬರುತ್ತದೆ. ನೀರಾವರಿ ಇರುವ ಪ್ರದೇಶಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ರೈತರಿಗೆ ಈ ಬಾರಿಯೂ ಶೇಂಗಾದಲ್ಲಿ ಇಳುವರಿ ಸಾಧ್ಯವಾಗುತ್ತಿಲ್ಲ. ಇದು ರೈತರಿಗೆ ಆತಂಕವನ್ನುಂಟು ಮಾಡಿದೆ.

ಹೆಸರಿಗಷ್ಟೇ ಬರಪೀಡಿತ ಪ್ರದೇಶ

ರಾಜ್ಯ ಸರ್ಕಾರಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಬರ ಪೀಡಿತ ಪ್ರದೇಶಕ್ಕೆ ಬಿಡುಗಡೆಯಾದ ಯೋಜನೆಯ ಸೌಲಭ್ಯ ಬಡವರಿಗೆ ಸಿಗುತ್ತಿಲ್ಲ. ಅದರೆ ಸರ್ಕಾರಗಳು ಇವು ಯಾವುದನ್ನೂ ಮಾಡದೇ ನಾಮಕಾವಸ್ತೆ ಘೋಷಣೆ ಮಾಡಿರಬಹುದು. ಬರಪೀಡಿತ ಪ್ರದೇಶದಲ್ಲಿ ಇರುವ ರೈತರಿಗೆ ಬೇಕಾಗಿರುವುದು ಪರಿಹಾರ. ಕೂಲಿ ಕಾರ್ಮಿಕರಿಗೆ ಉದ್ಯೋಗ ಕೊಡಾ ಬೇಕಾಗಿದ್ದು, ಇವೆಲ್ಲವನ್ನು ಗಾಳಿಗೆ ತೂರಿ ಮನಬಂದಂತೆ ಯೋಜನೆಗಳನ್ನು ರೂಪಿಸುತ್ತಿವೆ. ಬೇರೆ ಯೋಜನೆಗಳು ಬಿಡುಗಡೆ ಮಾಡಿದರೆ ಪ್ರತಿಫಲ ಏನು ಎಂಬುದು ಪ್ರಜ್ಞಾವಂತರ ಪ್ರಶ್ನೆ.

ನೀರಾವರಿ ಸೌಲಭ್ಯವೇ ಇಲ್ಲ

ಚೇಳೂರು ತಾಲ್ಲೂಕಿನ ರೈತರು ಶೇಂಗಾ ಬೆಳೆಯನ್ನು ನಂಬಿ ಜೀವನ ನಡೆಸುತ್ತಿದ್ದರು. ಆದರೆ ಸರಿಯಾಗಿ ಮಳೆಯಾಗದೇ ಕಂಗಾಲಾಗಿದ್ದಾನೆ. ಇಷ್ಟಾದರೂ ಸರ್ಕಾರ ತಾಲೂಕಿಗೆ ಯಾವುದೇ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುತ್ತಿಲ್ಲ.