ಸಾರಾಂಶ
ಮಂಡ್ಯ : ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯ ಮಾಡದೇ ಮತಾಂಧ ಶಕ್ತಿಗಳನ್ನು ಹತ್ತಿಕ್ಕಬೇಕು. ನಾಗಮಂಗಲದಲ್ಲಿ ನಡೆದಿರುವ ಕೋಮುಗಲಭೆಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕೆರಗೋಡು ಹನುಮ ಧ್ವಜ ತೆರವು, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ ನಂತರ ಈ ಸರ್ಕಾರವು ಹೇಗೆ ದೇಶ ವಿರೋಧಿ ಶಕ್ತಿಗಳಿಗೆ ರಾಜ್ಯವನ್ನು ಒತ್ತೆ ಇಟ್ಟಿದೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಣೇಶ ವಿಸರ್ಜನೆ ವೇಳೆ ಮತಾಂಧರು ಧೂರ್ತತನ ಪ್ರದರ್ಶಿಸಿದ್ದಾರೆ. ಗಣಪತಿ ಭಕ್ತರ ಮೇಲೆ ದುರುದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆ. ಈ ಘಟನೆಗೆ ಕೋಮು ದಳ್ಳುರಿ ಹೊತ್ತಿಸಿ ಜನರು, ಪೊಲೀಸರ ಮೇಲೆ ಪೂರ್ವಯೋಜಿತವಾಗಿ ದೌರ್ಜನ್ಯ ನಡೆಸಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಪುತ್ರ ಜೈಲು ಪಾಲು, ಕುಸಿದ ಬಿದ್ದ ತಾಯಿ
ನಾಗಮಂಗಲ:ಪಟ್ಟಣದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಪುತ್ರ ಜೈಲು ಪಾಲಾಗಿದ್ದರಿಂದ ಆಘಾತಕ್ಕೊಳಗಾಗಿ ಆತನ ತಾಯಿ ಕುಸಿದ ಬಿದ್ದ ಘಟನೆ ನಾಗಮಂಗಲ ಕೋರ್ಟ್ ಮುಂಭಾಗ ಗುರುವಾರ ನಡೆದಿದೆ. ಮಕ್ಕಳು ಜೈಲುಪಾಲಾಗಿದನ್ನ ಕೇಳಿ ತಾಯಿಯೊಬ್ಬರು ಕುಸಿದುಬಿದ್ದರೆ, ಮತ್ತೊಂದೆಡೆ ಜೈಲುಸೇರಿದವರ ಕುಟುಂಬಸ್ಥರ ಆಕ್ರಂಧನ ಹೆಚ್ಚಾಗಿತ್ತು. ನ್ಯಾಯಾಲಯದ ಹೊರಗೆ ನೂರಾರು ಸಂಖ್ಯೆಯಲ್ಲಿ ಕುಟುಂಬಸ್ಥರು ಜಮಾಯಿಸಿದ್ದರು.