ಪೌರಕಾರ್ಮಿಕರ ಶ್ರಮ, ಸೇವೆ ಅನನ್ಯ: ಮಂಜುನಾಥ್

| Published : Feb 25 2025, 12:49 AM IST

ಸಾರಾಂಶ

ಪ್ರತಿನಿತ್ಯ ನಗರ ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ಮಿಕರ ಸೇವೆ ಅನನ್ಯ, ಬಣ್ಣಿಸಲು ಆಗದು. ಇದು ಎಂದಿಗೂ ಮರೆಯಲಾಗದಂಥ ಸೇವೆ. ಪೌರಕಾರ್ಮಿಕರ ಶ್ರಮವನ್ನು ಗುರುತಿಸಿ, ಕೈಯಲ್ಲಾದಷ್ಟು ಸಹಾಯ ಮಾಡುವುದು ಪುಣ್ಯದ ಕೆಲಸ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಎಂಸಿಸಿ ಬಿ ಬ್ಲಾಕ್‌ನಲ್ಲಿ ಪೌರಕಾರ್ಮಿಕರಿಗೆ ವಿಶೇಷ ಉಡುಗೊರೆ ನೀಡಿ ಸನ್ಮಾನ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರತಿನಿತ್ಯ ನಗರ ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ಮಿಕರ ಸೇವೆ ಅನನ್ಯ, ಬಣ್ಣಿಸಲು ಆಗದು. ಇದು ಎಂದಿಗೂ ಮರೆಯಲಾಗದಂಥ ಸೇವೆ. ಪೌರಕಾರ್ಮಿಕರ ಶ್ರಮವನ್ನು ಗುರುತಿಸಿ, ಕೈಯಲ್ಲಾದಷ್ಟು ಸಹಾಯ ಮಾಡುವುದು ಪುಣ್ಯದ ಕೆಲಸ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಹೇಳಿದರು.

ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿ ಭಾನುವಾರ ಪೌರಕಾರ್ಮಿಕರಿಗೆ ವಿಶೇಷ ಉಡುಗೊರೆ ನೀಡಿ ಸನ್ಮಾನಿಸಿ ಅವರು ಮಾತನಾಡಿದರು. ದಾವಣಗೆರೆ ನಗರದಲ್ಲಿ ಪೌರಕಾರ್ಮಿಕರು ಇಲ್ಲದ ದಿನಗಳನ್ನು ಊಹಿಸಿಕೊಳ್ಳಲು ಆಗದು. ಎಂಥ ಪರಿಸ್ಥಿತಿ ಇರಲಿ. ನಗರದ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸುವವರು. ಮಳೆ, ಗಾಳಿ, ಬಿಸಿಲು ಎನ್ನದೇ ಸ್ವಚ್ಛತಾ ಕಾರ್ಯ ಮಾಡಿ ನಗರವನ್ನು ಸುಂದರವಾಗಿಸುತ್ತಾರೆ ಎಂದು ಬಣ್ಣಿಸಿದರು.

ಕೊರೋನಾ ಹಾವಳಿಯಂಥ ಸಂಕಷ್ಟದ ವೇಳೆಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಜೊತೆಗೆ ನಗರದ ಸ್ವಚ್ಛತೆ ಮಾಡಿದ್ದಾರೆ. ಭಯವಿಲ್ಲದೇ ಜನರ ಆರೋಗ್ಯದ ದೃಷ್ಟಿಯಿಂದ ತಮ್ಮ ಪ್ರಾಣ ಪಣಕ್ಕಿಟ್ಟು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅವರಿದ್ದರೆ ಸ್ವಚ್ಛತೆ. ಅವರನ್ನು ಗುರುತಿಸಿ ಗೌರವಿಸಿದ್ದು ಸಂತೋಷ ತಂದಿದೆ. ಅವರಿಗೂ ಖುಷಿ ಆಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಪೌರಕಾರ್ಮಿಕರ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಪೌರ ಕಾರ್ಮಿಕರಿಗೆ ವಸತಿ, ಚಿಕಿತ್ಸಾ ಸೌಲಭ್ಯ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಸೂಚನೆ ನೀಡಿ ನೆರವಾಗಿದ್ದಾರೆ ಎಂದರು.

ಡಾ.ಕರಿಬಸಪ್ಪ ನಿರ್ಮಲ ದಂಪತಿ ಪುತ್ರಿ ಡಾ.ಚೇತನಾ ಬಳ್ಳಾರಿ ಹಾಗೂ ಡಾ. ಷಡಾಕ್ಷರಿ ಅವರ 25ನೇ ವಿವಾಹ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ಪೌರಕಾರ್ಮಿಕರಿಗೆ ಕೊಡುಗೆ ನೀಡಿದರು. ಅದೇ ರೀತಿಯಲ್ಲಿ ಗಡಿಗುಡಾಳ್ ಮಂಜುನಾಥ್ ಸಹಾಯ ಮಾಡಿದರು.

ಈ ವೇಳೆ ಮಾತನಾಡಿದ ಪೌರ ಕಾರ್ಮಿಕರು, ನಾವು ಈ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವುದು ಪುಣ್ಯ ಎನಿಸಿದೆ. ಪಾಲಿಕೆ ಸದಸ್ಯರಾಗಿದ್ದ ಐದು ವರ್ಷಗಳ ಅವಧಿಯಲ್ಲಿಯೂ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡುವ ಮಾದರಿ ಕಾರ್ಪೊರೇಟರ್ ಆಗಿ ಮಂಜುನಾಥ್ ನಿಂತಿದ್ದಾರೆ. ಅವರಂಥ ಜನಪ್ರತಿನಿಧಿ ಬೇಕು. ಜನರು ಇಂಥ ಜನಸೇವಕ ಮತ್ತು ಜನಪರ ಕಾಳಜಿಯುಳ್ಳ, ಮಾನವೀಯ ಗುಣವುಳ್ಳ ಜನಪ್ರತಿನಿಧಿಗಳನ್ನು ಮರೆಯಬಾರದು. ಸೇವೆಯನ್ನು ಗುರುತಿಸಿ, ಅವರನ್ನೂ ಗೌರವಿಸುವಂತಾಗಬೇಕು ಎಂದು ಹೇಳಿದರು.

ಪೌರಕಾರ್ಮಿಕರು ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.

- - - -23ಕೆಡಿವಿಜಿ31.ಜೆಪಿಜಿ:

ದಾವಣಗೆರೆಯಲ್ಲಿ ಪಾಲಿಕೆ ಸದಸ್ಯ ಗಡಿಗುಡಾಳ ಮಂಜುನಾಥ ಪೌರ ಕಾರ್ಮಿಕರಿಗೆ ಉಡುಗೊರೆ ನೀಡಿ ಸನ್ಮಾನಿಸಿದರು.