ಸಾರಾಂಶ
ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 1ರಲ್ಲಿ ಶಿಕ್ಷಕರೇ ಮುಂದಾಗಿ ಮುಖ್ಯ ಶಿಕ್ಷಕಿಯ ಕೊಠಡಿಗೆ ಬೀಗ ಹಾಕಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಲಕ್ಷ್ಮೇಶ್ವರ: ಸಮೀಪದ ಶಿಗ್ಲಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 1ರಲ್ಲಿ ಶಿಕ್ಷಕರೇ ಮುಂದಾಗಿ ಮುಖ್ಯ ಶಿಕ್ಷಕಿಯ ಕೊಠಡಿಗೆ ಬೀಗ ಹಾಕಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಮುಖ್ಯ ಶಿಕ್ಷಕಿ ಎನ್.ಎಂ. ಕೊಟಗಿ ಹಾಗೂ ಸಹ ಶಿಕ್ಷಕರ ನಡುವೆ ಹೊಂದಾಣಿಕೆಯ ಕೊರತೆಯೇ ಕಾರಣ ಎನ್ನಲಾಗಿದೆ. ತಮ್ಮ ಕೊಠಡಿಗೆ ಬೀಗ ಜಡಿದಿದ್ದರಿಂದ ಮುಖ್ಯ ಶಿಕ್ಷಕಿ ಕಳೆದ 3-4 ದಿನಗಳಿಂದ ಕೊಠಡಿ ಹೊರಗೆ ಕುಳಿತು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯ ಶಿಕ್ಷಕಿ ಸಹ ಮತ್ತೊಂದು ಬೀಗ ಹಾಕಿದ್ದಾರೆ. ಹೀಗಾಗಿ ಈ ಕೊಠಡಿಗೆ 2 ಬೀಗ ಬಿದ್ದಿವೆ.ಸಹ ಶಿಕ್ಷಕರಿಗೆ ಹಾಜರಿ ಪುಸ್ತಕ ನೀಡುತ್ತಿಲ್ಲ. ಹೀಗಾಗಿ ಅವರು ತಾವೇ ಒಂದು ಹಾಜರಿ ಪುಸ್ತಕ ತಂದು ಸಹಿ ಮಾಡುತ್ತಿದ್ದಾರೆ. ಪರಸ್ಪರ ನಿತ್ಯ ಮಾತಿನ ಚಕಮಕಿ, ಬೈಗುಳ ಹಾಗೂ ಗಲಾಟೆಯೊಂದಿಗೆ ಶಾಲೆ ಆರಂಭವಾಗುತ್ತಿದೆ. ಜ. 26ರಂದು ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ ರಾಷ್ಟ್ರಧ್ವಜ ನೀಡದೆ ಸತಾಯಿಸಿದ ಘಟನೆಯೂ ನಡೆದಿದೆಯಂತೆ.ಈ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ 105 ಮಕ್ಕಳು ಇದ್ದು, 6 ಜನ ಶಿಕ್ಷಕರು ಇದ್ದಾರೆ. ಈ ವಿಷಯ ಬಿಇಒ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಿಗೆ ಕಳೆದ ಹಲವು ತಿಂಗಳ ಹಿಂದೆಯೇ ಗೊತ್ತಾಗಿ ಪರಸ್ಪರರ ನಡುವೆ ರಾಜಿ ಪಂಚಾಯ್ತಿ ಮಾಡಿಸಿದ್ದಾರೆ. ಆದರೆ ಇದು ಯಾವುದು ಫಲ ನೀಡಿಲ್ಲ.
ಈ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಶಂಭುಲಿಂಗ ಕಟ್ಟಿಮನಿ ಮಾತನಾಡಿ, ಶಿಕ್ಷಕರ ನಡುವೆ ಹೊಂದಾಣಿಕೆಯ ಕೊರತೆಯಿಂದ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆ ಉಂಟಾಗಿದೆ. ಬಿಇಒ ಅವರು ಮುಖ್ಯ ಶಿಕ್ಷಕಿಯನ್ನು ಬೇರೆಡೆ ವರ್ಗ ಮಾಡುವ ಬಗ್ಗೆ ಶಾಲೆಯ ಎಸ್‌ಡಿಎಂಸಿ ಅವರ ಜೊತೆಗೆ ಹಾಗೂ ಗ್ರಾಪಂ ಸದಸ್ಯರು, ಸಾರ್ವಜನಿಕರೊಂದಿಗೆ ಚರ್ಚಿಸಿ ಹೋಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರದಲ್ಲಿ ಮುಖ್ಯ ಶಿಕ್ಷಕಿಯನ್ನು ಬೇರೆಡೆಗೆ ಸ್ಥಳಾಂತರ ಮಾಡದೆ ಹೋದಲ್ಲಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.ಈ ವೇಳೆ ಗ್ರಾಪಂ ಸದಸ್ಯೆ ರೇಣುಕಾ ಅತಡಕರ, ಮುದಕಣ್ಣ ಗಾಡಾದ, ಎಸ್‌ಡಿಎಂಸಿ ಸದಸ್ಯ ಶಂಕರ ಕಲಾಲ, ಈರಣ್ಣ ಅಳ್ಳಳ್ಳಿ, ಶಿವಯ್ಯ ಬಳ್ಳಾರಿಮಠ, ಮಂಜುನಾಥ ತಳವಾರ ಇದ್ದರು. ಈ ವೇಳೆ ಸ್ಥಳಕ್ಕೆ ಸಿಆರ್‌ಸಿ ಜ್ಯೋತಿ ಗಾಯಕವಾಡ ಆಗಮಿಸಿ ಬಿಇಒ ಅವರೊಂದಿಗೆ ಶಾಲೆಯಲ್ಲಿ ನಡೆದಿರುವ ವಿಷಯದ ಕುರಿತು ಚರ್ಚಿಸಿ ನಾಳೆಯಿಂದ ಮುಖ್ಯ ಶಿಕ್ಷಕಿಯನ್ನು ಬೇರೆಡೆಗೆ ಕೆಲಸಕ್ಕೆ ನಿಯೋಜನೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ. ಆದ್ದರಿಂದ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಲಾಗಿದೆ, ಸಹ ಶಿಕ್ಷಕರಿಗೆ ತಾತ್ಕಾಲಿಕ ವ್ಯವಸ್ಥೆಯನ್ನು ನೋಡಿಕೊಂಡು ಹೋಗುವಂತೆ ಬಿಇಒ ಅವರು ಸೂಚನೆ ನೀಡಿದ್ದಾರೆ ಎಂದು ಹೇಳಿದರು. ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಬಸವರಾಜ ಯತ್ತಿನಹಳ್ಳಿ ಇದ್ದರು.