ಸಾರಾಂಶ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ಕೆಲಸದ ಒತ್ತಡಕ್ಕೆ ಸಿಲುಕಿ ಅನೇಕ ರೋಗಗಳಿಗೆ ಬಲಿ
ಮುಂಡರಗಿ: ಆಯುರ್ವೇದಿಕ ಚಿಕಿತ್ಸಾ ಪರಂಪರೆ ನಮ್ಮ ದೇಶದ ಹೆಮ್ಮೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರಾಷ್ಟ್ರಗಳು ಈ ಚಿಕಿತ್ಸೆ ಒಪ್ಪಿಕೊಂಡು ತಮ್ಮ ದೇಶಗಳಲ್ಲಿ ಅನುಷ್ಠಾನಕ್ಕೆ ತರಲು ಪ್ರಾರಂಭಿಸಿವೆ ಎಂದು ಗದಗ ಜಿಲ್ಲಾ ಆಯುಷ್ಯ ಅಧಿಕಾರಿ ಡಾ. ಎಂ.ಎಸ್. ಉಪ್ಪಿನ ಹೇಳಿದರು.
ಅವರು ಸೋಮವಾರ ಮುಂಡರಗಿ ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ಲಿಂ.ವಿ.ಸಿ.ಹಂಚಿನಾಳ ಮೆಮೋರಿಯಲ್ ಟ್ರಸ್ಟ್ ಅಡಿಯಲ್ಲಿ ಪ್ರಾರಂಭವಾದ ಪಂಚಕರ್ಮ ಹಾಗೂ ಯೋಗ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಯೋಗದಿಂದ ರೋಗ ದೂರ ಎನ್ನುವ ಮಾತಿದೆ. ಇತ್ತೀಚಿನ ವರ್ಷಗಳಲ್ಲಿ ಯೋಗಾಭ್ಯಾಸ ಇಡೀ ವಿಶ್ವವೇ ಒಪ್ಪಿಕೊಂಡು ಎಲ್ಲೆಡೆ ಜೂ.21 ರಂದು ವಿಶ್ವ ಯೋಗ ದಿನ ಆಚರಿಸುತ್ತಿದ್ದೇವೆ ಎಂದರು.
ಅತಿಥಿಯಾಗಿ ಆಗಮಿಸಿದ್ದ ಗದಗ ಡಿ.ಜಿ.ಎಂ.ಆಯುರ್ವೇದಿಕ್ ಕಾಲೇಜಿನ ವಿಶ್ರಾಂತ ಪ್ರಾ.ಡಾ.ಉಮೇಶ್ ಪುರದ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ಕೆಲಸದ ಒತ್ತಡಕ್ಕೆ ಸಿಲುಕಿ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಇದಕ್ಕೆ ಪರಿಹಾರವಾಗಿ ಆಧುನಿಕ ಚಿಕಿತ್ಸೆಗೆ ಒಳಗಾಗುವುದು ಅನಿವಾರ್ಯವಾಗಿದೆ. ಆದರೆ ಸೂಕ್ಷ್ಮವಾಗಿ ಯೋಚಿಸಿದರೆ ಆಯುರ್ವೇದಿಕ್ ಪದ್ಧತಿಯ ಪಂಚಕರ್ಮ ಮತ್ತು ಯೋಗಭ್ಯಾಸದಿಂದ ದುಬಾರಿ ವೆಚ್ಚದ ಚಿಕಿತ್ಸೆಗೆ ಕಡಿವಾಣ ಹಾಕಿ ಸುಲಭ ರೀತಿ ಚಿಕಿತ್ಸೆ ಪಡೆಯಬಹುದಾಗಿದೆ. ಇದರಿಂದ ಶಾಶ್ವತವಾಗಿ ರೋಗ ಪರಿಹಾರ ಮಾಡಿಕೊಳ್ಳುವುದರ ಜತೆಗೆ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಬೆಳೆಸಿಕೊಳ್ಳುವುದಲ್ಲದೆ ಅಸ್ತಮಾ, ರಕ್ತದ ಒತ್ತಡದಂತಹ ಕಾಯಿಲೆಗಳಿಂದ ಮುಕ್ತರಾಗಬಹುದು ಎಂದರು.ಕರಾ ಬೆಲ್ಲದ ಕಾಲೇಜಿನ ವಿಶ್ರಾಂತ ಪ್ರಾ. ಎಸ್.ಬಿ. ಕರಿಭರಮಗೌಡರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕರಬಸಪ್ಪ ಹಂಚಿನಾಳ, ಸುಂದಮ್ಮ ಹಂಚಿನಾಳ, ಡಾ. ಅನ್ನದಾನಿ ಮೇಟಿ, ಡಾ. ಲಕ್ಷ್ಮಣ ಪೂಜಾರ, ಡಾ. ಮಾಲಾ ಮೂಲಿಮನಿ, ಡಾ. ಸುನಿಲ್ ಅರಳಿ, ಡಾ. ವೈ.ಎಸ್.ಮೇಟಿ, ನಾಗೇಶ ಹುಬ್ಬಳ್ಳಿ ಸೇರಿದಂತೆ ಅನೇಕರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಆಯುಷ್ಯ ಅಧಿಕಾರಿ ಡಾ. ಪಿ.ಬಿ. ಹಿರೇಗೌಡ್ರ, ಧಾರವಾಡ ಕೆಎಂಎಫ್ ನೂತನ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ. ಜಗದೀಶ್ ಹಂಚಿನಾಳ ಸ್ವಾಗತಿಸಿ, ಎಸ್.ವಿ. ಪಾಟೀಲ್ ನಿರೂಪಿಸಿ ಶಶಿಕಲಾ ಕುಕನೂರು ವಂದಿಸಿದರು.