ಮೂಡುಬಿದಿರೆ ಮಾರುಕಟ್ಟೆ ಕಟ್ಟಡ ಕಾಮಗಾರಿ ಮುಂದುವರಿಸಲು ಹೈಕೋರ್ಟ್‌ ಅನುಮತಿ

| Published : Oct 01 2024, 01:33 AM IST

ಸಾರಾಂಶ

ಹಳೆ ಮಾರ್ಕೆಟ್ ಕಟ್ಟಡದ ಕಾಮಗಾರಿಯ ಶೇ.70 ಪೂರ್ಣಗೊಂಡಿದ್ದು ಕಾಮಗಾರಿಯು ನಡೆಯುತ್ತಿದ್ದಂತೆ ಪುರಾತತ್ವ ಇಲಾಖೆಯಿಂದ ನಿರಾಕ್ಷೇಪಣೆ ಪಡೆಯದಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಕೆಯಾದ ಪರಿಣಾಮ ಕಟ್ಟಡ ಕಾಮಗಾರಿಗೆ ಉಚ್ಛ ನ್ಯಾಯಾಲಯವು ಈ ಹಿಂದೆ ತಡೆಯಾಜ್ಞೆ ನೀಡಿತ್ತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಳೆದ ಏಳು ವರ್ಷಗಳಿಂದ ವಿವಾದದಲ್ಲಿದ್ದ ಮೂಡುಬಿದಿರೆ ದಿನವಹಿ ಮಾರ್ಕೆಟ್ ಕಟ್ಟಡದ ಬಗ್ಗೆ ಹೈಕೋರ್ಟ್‌ ವಿಚಾರಣೆ ನಡೆದು ಕಾಮಗಾರಿ ಮುಂದುವರಿಸಲು ಅನುಮತಿ ನೀಡಿದೆ.

ಮೂಡುಬಿದಿರೆ ಪುರಸಭೆಯ ದಿನವಹಿ ಮಾರುಕಟ್ಟೆಯು ಹಲವು ವರ್ಷಗಳ ಹಳೆಯ ಕಟ್ಟಡವಾಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಸುಮಾರು ೨೬ ಕೋಟಿ ರು. ಅಂದಾಜು ಮೊತ್ತದ ಹೈಟೆಕ್‌ ಮಾರುಕಟ್ಟೆಯನ್ನು ಖಾಸಗಿ ಸಂಸ್ಥೆಯ ಸಹಬಾಗಿತ್ವದಲ್ಲಿ ಕೆಯುಐಡಿಎಫ್‌ಸಿ ಮೂಲಕ ಟೆಂಡರ್‌ ಕರೆಯಲಾಗಿತ್ತು. ಈ ಸಂದರ್ಭ ಹಳೆ ಮಾರ್ಕೆಟ್ ನಲ್ಲಿದ್ದ ವ್ಯಾಪಾರಸ್ಥರನ್ನು ತಾತ್ಕಾಲಿಕ ನೆಲೆಯಲ್ಲಿ ಎಂಬಂತೆ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು.

ಹಳೆ ಮಾರ್ಕೆಟ್ ಕಟ್ಟಡದ ಕಾಮಗಾರಿಯ ಶೇ.70 ಪೂರ್ಣಗೊಂಡಿದ್ದು ಕಾಮಗಾರಿಯು ನಡೆಯುತ್ತಿದ್ದಂತೆ ಪುರಾತತ್ವ ಇಲಾಖೆಯಿಂದ ನಿರಾಕ್ಷೇಪಣೆ ಪಡೆಯದಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಕೆಯಾದ ಪರಿಣಾಮ ಕಟ್ಟಡ ಕಾಮಗಾರಿಗೆ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು.

ತಡೆಯಾಜ್ಞೆ ಇದ್ದ ಕಾರಣ ಕಟ್ಟಡ ಕಾಮಗಾರಿ ಮುಂದುವರಿಯದೆ ಸ್ಥಗಿತಗೊಂಡಿತ್ತು. ಸುದೀರ್ಘ ಕಾಲದ ವಿಚಾರಣೆ ನಡೆದು ಅಂತಿಮವಾಗಿ ಮೂಡುಬಿದಿರೆ ಪುರಸಭೆಯು ಪ್ರಾಚ್ಯ ಇಲಾಖೆಗೆ ಮೂರು ವಾರಗಳಲ್ಲಿ ಕಟ್ಟಡ ಕಾಮಗಾರಿ ಮುಂದುವರಿಸಲು ಅನುಮತಿ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಬೇಕು, ಪ್ರಾಚ್ಯ ಇಲಾಖೆ ಅದಕ್ಕೆ ನಾಲ್ಕು ವಾರಗಳಲ್ಲಿ ಅನುಮತಿ ನೀಡಬೇಕೆಂದು ಹೈಕೋರ್ಟ್ ಆದೇಶಿಸಿರುವುದಾಗಿ ತಿಳಿದು ಬಂದಿದೆ.