ಶಾಸಕ ಹ್ಯಾರಿಸ್‌ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಜಾಗೆ ಹೈಕೋರ್ಟ್‌ ನಕಾರ

| Published : Feb 23 2024, 01:49 AM IST

ಶಾಸಕ ಹ್ಯಾರಿಸ್‌ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಜಾಗೆ ಹೈಕೋರ್ಟ್‌ ನಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಶಾಂತಿನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ಹ್ಯಾರಿಸ್‌ ಅವರ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾಕ್ಕೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಂತಿನಗರದ ಕ್ಷೇತ್ರದಿಂದ ತಾವು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ಕೆ.ಶಿವಕುಮಾರ್​ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿ ಶಾಸಕ ಎನ್‌.ಎ. ಹ್ಯಾರಿಸ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್​ ತಿರಸ್ಕರಿಸಿದೆ.

ಹ್ಯಾರಿಸ್‌ ಸಲ್ಲಿಸಿದ್ದ ಪ್ರಮಾಣ ಪತ್ರ ಅಸಮರ್ಪಕವಾಗಿದೆ. ಹೀಗಾಗಿ ಅವರ ಆಯ್ಕೆ ಅಸಿಂಧುಗೊಳಿಸಬೇಕು ಹಾಗೂ ತಮ್ಮನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಕೋರಿ ಕೆ.ಶಿವಕುಮಾರ್​ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸುವಂತೆ ಕೋರಿ ಹ್ಯಾರಿಸ್‌ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು ಅವರ ನ್ಯಾಯಪೀಠ ಆದೇಶಿಸಿದೆ. ಇದರಿಂದ ಶಿವಕುಮಾರ್​ ಅವರ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಮುಂದುವರೆಲಿದೆ.

ಹ್ಯಾರಿಸ್​ ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂಬ ಬಗ್ಗೆ ಅರ್ಜಿದಾರರ ಮನವಿಯ ಬಗ್ಗೆ ನ್ಯಾಯಾಲಯ ಸೂಕ್ತ ನಿರ್ಧಾರ ಕೈಗೊಳ್ಳವರೆಗೂ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಮುಂದುವರೆಯಬೇಕಿದೆ. ಆದ್ದರಿಂದ ಚುನಾವಣಾ ತಕರಾರು ಅರ್ಜಿಯನ್ನು ಈ ಹಂತದಲ್ಲಿ ವಜಾಗೊಳಿಸಲು ಸಾಧ್ಯವಿಲ್ಲ. ಒಂದೊಮ್ಮೆ ಹ್ಯಾರಿಸ್​ ಅವರ ಆಯ್ಕೆ ಅನೂರ್ಜಿತ ಎಂದು ಘೋಷಣೆ ಮಾಡಿದರೂ, ಅದೇ ಕಾರಣದಿಂದ ಅರ್ಜಿದಾರರು ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಲು ಸಾಧ್ಯವಾಗುವುದಿಲ್ಲ. ಶಿವಕುಮಾರ್‌ ಅವರು ವಿಜೇತ ಅಭ್ಯರ್ಥಿಯಾಗಿ ಘೋಷಿಸುವುದಕ್ಕೆ ಪೂರಕ ಆಧಾರಗಳನ್ನು ಬೇಕಾಗಿದೆ. ಆದ್ದರಿಂದ ಚುನಾವಣಾ ತಕರಾರು ಅರ್ಜಿ ವಿಚಾರಣೆ ಮುಂದುವರಿಸಲಾಗುತ್ತಿದ್ದು, ಹ್ಯಾರಿಸ್‌ ಅವರ ಮಧ್ಯಂತರ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಪ್ರಕರಣದ ಹಿನ್ನೆಲೆ

ಕಾಂಗ್ರೆಸ್​ನ ಎನ್​.ಎ.ಹ್ಯಾರಿಸ್​ ಅವರು ಚುನಾವಣೆಗೆ ಸಲ್ಲಿಸಿದ್ದ ಪ್ರಮಾಣ ಪತ್ರ ಅಸಮರ್ಪಕವಾಗಿದೆ. ಆದ್ದರಿಂದ ಅವರ ಆಯ್ಕೆಯನ್ನು ಅಸಿಂಧು ಗೊಳಿಸಬೇಕು. ಜತೆಗೆ ತಮ್ಮನ್ನು ಶಾಂತಿನಗರ ಕ್ಷೇತ್ರದ ಶಾಸಕ ಎಂಬುದಾಗಿ ಘೋಷಣೆ ಮಾಡುವಂತೆ ಕೋರಿ ಬಿಜೆಪಿಯ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ.ಶಿವಕುಮಾರ್​ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಹ್ಯಾರಿಸ್​ ಮಧ್ಯಂತರ ಮನವಿ ಮಾಡಿದ್ದರು.