ಮಳೆ ಅವಾಂತರಕ್ಕೆ ನಲುಗಿದ ತಿರ್ಲಾಪುರದ ಹಿರಿಯ ಪ್ರಾಥಮಿಕ ಶಾಲೆ

| Published : Oct 21 2024, 12:34 AM IST

ಸಾರಾಂಶ

ಕಳೆದ ಹಲವು ದಿನಗಳಿಂದ ಹಾಗೂ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯು ಸಂಪೂರ್ಣ ಮಳೆ ನೀರಿನಿಂದ ತುಂಬಿ ಕೆಸರುಗದ್ದೆಯಂತಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಕಳೆದ ಹಲವು ದಿನಗಳಿಂದ ಹಾಗೂ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯು ಸಂಪೂರ್ಣ ಮಳೆ ನೀರಿನಿಂದ ತುಂಬಿ ಕೆಸರುಗದ್ದೆಯಂತಾಗಿದೆ.

ಸೋಮವಾರದಿಂದ ಶಾಲೆಗಳು ಪುನಾರಂಭವಾಗುತ್ತಿದ್ದು, ಶಾಲಾ ಆರಂಭದ ಒಂದು ದಿನ ಮೊದಲೇ ಶಾಲೆಯು ಧಾರಾಕಾರ ಮಳೆಯಿಂದಾಗಿ ಕೆಸರುಮಯವಾಗಿದ್ದು, ಮಕ್ಕಳು ಶಾಲೆಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಶಾಲೆಯು ತೆಗ್ಗು ಪ್ರದೇಶದಲ್ಲಿದೆ. ಪ್ರತಿ ಬಾರಿ ಮಳೆ ಬಂದಾಗ ಇದೇ ಪರಿಸ್ಥಿತಿಯನ್ನು ಇಲ್ಲಿನ ಮಕ್ಕಳು ಹಾಗೂ ಶಿಕ್ಷಕರು ಅನುಭವಿಸುವಂತಾಗಿದೆ.

5 ಕೊಠಡಿಯೊಳಗೆ ನೀರು

ಶಾಲೆಯಲ್ಲಿ 1ರಿಂದ 7ನೇ ತರಗತಿಯ ವರೆಗೆ 185 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 11 ಕೊಠಡಿಗಳನ್ನು ಹೊಂದಿದ್ದು, ಇದರಲ್ಲಿ 5 ಕೊಠಡಿಗಳು ಹಳೆಯದಾಗಿದ್ದರೆ, 6 ಕೊಠಡಿಗಳನ್ನು ಕಳೆದ ವರ್ಷ ನಿರ್ಮಿಸಲಾಗಿದೆ. ಇದರಲ್ಲಿ ಹಳೆಯದಾಗಿರುವ 5 ಕೊಠಡಿಗಳಲ್ಲಿ ಹಾಗೂ ಶಾಲಾ ಆವರಣದಲ್ಲಿ 2 ಅಡಿಗೂ ಅಧಿಕ ಕೆಸರುಮಯವಾಗಿರುವ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಶಾಲೆಗೆ ತಡೆಗೋಡೆಯೇ ಇಲ್ಲನಿರ್ಮಾಣವಾಗಿ 40 ವರ್ಷ ಕಳೆದರೂ ಈ ವರೆಗೂ ಶಾಲೆಗೆ ತಡೆಗೋಡೆ ನಿರ್ಮಿಸಲಾಗಿಲ್ಲ. ಈ ಕುರಿತು ಗ್ರಾಮಸ್ಥರು ಶಿಕ್ಷಣಾಧಿಕಾರಿಗಳಿಗೆ ಹಾಗೂ ಗ್ರಾಪಂ ಅಧ್ಯಕ್ಷರಿಗೆ ಹಲವು ವರ್ಷಗಳ ಹಿಂದೆಯೇ ಮನವಿ ಸಲ್ಲಿಸಿದ್ದಾರೆ. ತಡೆಗೋಡೆ ನಿರ್ಮಾಣ ಮಾಡುವುದಾಗಿ ಭರವಸೆಯನ್ನೂ ನೀಡಿದ್ದಾರೆ. ಆದರೆ, ಈ ವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

4-5 ವರ್ಷಗಳಿಂದ ಸಮಸ್ಯೆ

ಶಾಲೆಯ ಸುತ್ತಲೂ ತಡೆಗೋಡೆ ಇಲ್ಲ. ಗ್ರಾಮದಿಂದ ಈ ಶಾಲೆಯು ತೆಗ್ಗು ಪ್ರದೇಶದಲ್ಲಿರುವುದರಿಂದಾಗಿ ಮಳೆಯಾದ ವೇಳೆ ಗ್ರಾಮದ ಹಾಗೂ ಶಾಲೆಯ ಸುತ್ತಮುತ್ತಲಿನ ಪ್ರದೇಶದ ಮಳೆಯ ನೀರು ಇದೇ ಶಾಲೆಗೆ ನುಗ್ಗುತ್ತಿದೆ. ಕಳೆದ 4-5 ವರ್ಷಗಳಿಂದ ಈ ಸಮಸ್ಯೆ ಅನುಭವಿಸಲಾಗುತ್ತಿದೆ. ಈ ಕುರಿತು ಶಾಸಕರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಹೀಗಾದರೆ ಮಕ್ಕಳೇ ಬರುವುದಿಲ್ಲ

ಸೋಮವಾರದಿಂದ ಶಾಲೆ ಆರಂಭವಾಗುತ್ತಿದೆ. ನಾವೆಲ್ಲರೂ ಸೇರಿ ಅದ್ಧೂರಿಯಾಗಿ ತಳಿರು ತೋರಣ ಕಟ್ಟಿ, ಸಂಭ್ರಮದಿಂದ ಮಕ್ಕಳನ್ನು ಬರಮಾಡಿಕೊಳ್ಳುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಆದರೆ, ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಶಾಲೆಯ ಆವರಣ ಮತ್ತು ಕೊಠಡಿಗಳಲ್ಲಿ 2 ಅಡಿಗೂ ಅಧಿಕ ನೀರು, ಅಪಾರ ಪ್ರಮಾಣದ ಕೆಸರು ಸಂಗ್ರಹಗೊಂಡಿದೆ. ಶಾಲೆಯ ಈ ಸ್ಥಿತಿ ನೋಡಿದರೆ ಮಕ್ಕಳು ಶಾಲೆಗೆ ಬರುವುದಿರಲಿ ಪಾಲಕರೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುವಂತಾಗಿದೆ. ಈ ಘಟನೆಯಿಂದಾಗಿ ನಮಗೆ ದಿಕ್ಕೇ ತೋಚದಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ವೀರಣ್ಣ ಕೊಪ್ಪದ ಕನ್ನಡಪ್ರಭಕ್ಕೆ ತಿಳಿಸಿದರು. ಮನವಿ ಸಲ್ಲಿಕೆ

ಮಳೆ ಬಂದರೆ ಸಾಕು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಕೆಸರುಮಯವಾಗುತ್ತದೆ. ಈ ಕುರಿತು ಶಾಸಕರಿಗೆ, ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ.

ಬಸವರಾಜ ಬೆಣ್ಣಿ, ಗ್ರಾಮಸ್ಥ

ಸಮಸ್ಯೆಯಾಗದಂತೆ ಕ್ರಮ

ಮಳೆಯಿಂದಾಗಿ ತಿರ್ಲಾಪುರ ಶಾಲೆಯಲ್ಲಿ ನೀರು ನುಗ್ಗಿ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಗ್ರಾಪಂ ಸಿಬ್ಬಂದಿಗಳಿಂದ ಶಾಲೆ ಕೊಠಡಿಯೊಳಗಿನ ನೀರು ತೆರವುಗೊಳಿಸಲಾಗಿದೆ. ಸೋಮವಾರದ ಶಾಲಾ ಆರಂಭಕ್ಕೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಎಸ್‌.ಬಿ. ಮಲ್ಲಾಡದ, ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ