ಸಾರಾಂಶ
ಅಶೋಕ ಸೊರಟೂರ ಲಕ್ಷ್ಮೇಶ್ವರ
ಸಮೀಪದ ಗೊಜನೂರ ಹತ್ತಿರ ಶುಕ್ರವಾರ ಸಂಜೆ 6.45 ಸುಮಾರಿಗೆ ಅಜ್ಜ ಮೈಲಾರೆಪ್ಪ ಭಜಕ್ಕನವರ (65) ಹಾಗೂ ಮೊಮ್ಮಗ ಕಿರಣ ಬಾರಕೇರ (10) ಎಂಬ ಎರಡು ಜೀವಗಳನ್ನು ಪಾಳಾ ಬಾದಾಮಿ ಎಂಬ ಹೆದ್ದಾರಿಯ ಗುಂಡಿಗಳು ಬಲಿ ಪಡೆದ ದುರಂತ ಕಣ್ಣ ಮುಂದೆ ಓಡಾಡುತ್ತವೆ.ಗೊಜನೂರ ಕಡೆಯಿಂದ ಸವಣೂರು ತಾಲೂಕಿನ ಕಡಕೋಳ ಗ್ರಾಮದ ಕಡೆಗೆ ಬೈಕ್ ಮೇಲೆ ತಂದೆಯ ಜತೆಯಲ್ಲಿ ಹೊರಟಿದ್ದ ಆ ಬಾಲಕ ಮಾಡಿದ ತಪ್ಪಾದರೂ ಯಾವುದು? ಬೈಕ್ ಚಾಲನೆ ಮಾಡುತ್ತಿದ್ದ ಅಜ್ಜ ಹೆದ್ದಾರಿಯಲ್ಲಿ ಬಿದ್ದಿರುವ ಬೃಹತ್ ಗಾತ್ರದ ಗುಂಡಿ ತಪ್ಪಿಸಲು ಹೋಗಿದ್ದಾನೆ. ಎದುರಿಗೆ ಹಾವೇರಿಯ ಕಡೆಯಿಂದ ಗದಗ ಕಡೆಗೆ ಹೊರಟಿದ್ದ ಬಸ್‌ಗೆ ಬೈಕ್ ಬಡಿದಿದೆ. ಈ ಸಮಯದಲ್ಲಿ ಆಯ ತಪ್ಪಿದ್ದ ಅಜ್ಜ ಮೈಲಾರೆಪ್ಪ ಭಜಕ್ಕನವರ ತಲೆಯ ಮೇಲೆ ಬಸ್ ಹಿಂದಿನ ಟೈರ್ ಹಾಯ್ದು ಹೋಗಿದ್ದರಿಂದ ಅಜ್ಜನ ತಲೆ ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ ನೋಡಲು ಭಯಪಡುವಷ್ಟು ದೇಹ ವಿಕಾರವಾಗಿತ್ತು. ಇನ್ನು ಜೀವನ್ಮರಣದ ಹೋರಾಟದಲ್ಲಿದ್ದ ಬಾಲಕ ಕಿರಣನನ್ನು ಹೊತ್ತು ತಂದು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ತಂದೆಯ ಅಂಗಿ ಸಂಪೂರ್ಣ ರಕ್ತಮಯವಾಗಿದ್ದ ದೃಶ್ಯ ನೋಡುಗರ ಕರುಳು ಚುರುಕ್ ಎನ್ನವಂತೆ ಮಾಡಿದ್ದು ಸುಳ್ಳಲ್ಲ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಬಾಲಕನಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ ಕಣ್ಣುಗಳು ಒದ್ದೆಯಾಗಿದ್ದು ಕಂಡು ಬಂದಿತು. ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ಕಳುಹಿಸಿಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ದಾರಿಯ ಮಧ್ಯದಲ್ಲಿ ಬಾಲಕನ ಪ್ರಾಣಪಕ್ಷಿ ಹಾರಿ ಹೋಗಿದೆ.
ಗದಗ-ಲಕ್ಷ್ಮೇಶ್ವರಕ್ಕೆ ಸಂಪರ್ಕ ಕಲ್ಪಿಸುವ ಪಾಳಾ-ಬಾದಾಮಿ ಹೆದ್ದಾರಿಯು ಸಾವಿನ ರಹದಾರಿಯಾಗಿದೆ. ಕಳೆದ ಹಲವು ವರ್ಷಗಳಿಂದ ಕಿತ್ತು ಹೋಗಿರುವ ಪಾಳಾ-ಬಾದಾಮಿ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳು ಸಾವಿನ ಸೆರೆಮನೆಗಳಾಗಿವೆ. ಇಂತಹ ದುರಂತಗಳಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯು ಬಹುತೇಕ ಕಾರಣವಾಗಿದೆ. ಯಾವುದೇ ತಪ್ಪು ಮಾಡದ ಎರಡು ಅಮಾಯಕ ಜೀವಗಳು ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜತೆಯಲ್ಲಿ ಬೈಕ್‌ಗೆ ಡಿಕ್ಕಿಪಡಿಸಿದ ಸಾರಿಗೆ ಇಲಾಖೆಯ ಸಿಬ್ಬಂದಿಯ ಅಜಾಗರೂಕತೆಗೆ ಬೆಲೆ ತೆರಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಗೊಜನೂರ ಗ್ರಾಮದ ಹತ್ತಿರ ನಡೆದ ಬೈಕ್ ಅಪಘಾತದಲ್ಲಿ ಅಜ್ಜ ಹಾಗೂ ಮೊಮ್ಮಗನ ಸಾವು ತುಂಬಾ ನೋವು ತಂದಿದೆ. ಲಕ್ಷ್ಮೇಶ್ವರ-ಗದಗಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹದಗೆಟ್ಟು ಹೋಗಿ ಗುಂಡಿಗಳು ಬಿದ್ದು ಹಲವು ವರ್ಷ ಕಳೆದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅವುಗಳನ್ನು ಮುಚ್ಚುವ ಗೋಜಿಗೆ ಹೋಗಿಲ್ಲ. ಇದರಿಂದ ಗುಂಡಿ ತಪ್ಪಿಸಲು ಹೋಗಿ ಬೈಕ್ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ. ಇದರಲ್ಲಿ ಎರಡು ಅಮಾಯಕ ಜೀವಗಳು ಪ್ರಾಣ ತೆತ್ತಿವೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಮರಣವನ್ನಪ್ಪಿದ ಅಮಾಯಕರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಲಕ್ಷ್ಮೇಶ್ವರ ಹಿರಿಯ ವಕೀಲ ಬಸವರಾಜ ಬಾಳೇಶ್ವರಮಠ ತಿಳಿಸಿದ್ದಾರೆ.
ಕಳೆದ ರಾತ್ರಿ ಗೊಜನೂರ ಹತ್ತಿರ ನಡೆದ ಬೈಕ್ ಅಪಘಾತದಲ್ಲಿ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ನಮ್ಮ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿದೆ ಎಂದು ಹೇಳುತ್ತಿರುವುದರಿಂದ ಸ್ಥಳ ವೀಕ್ಷಣೆ ಮಾಡಲು ಬಂದಿರುವೆ. ಬೈಕ್‌ಗೆ ಬಸ್ ಡಿಕ್ಕಿಯಾದರೆ ಬಸ್ಸಿನಲ್ಲಿದ್ದ ಪ್ರಯಾಣಿಕರು ತಕರಾರು ಮಾಡುತ್ತಿದ್ದರು. ಆದರೆ ಆ ತರಹದ ಘಟನೆ ನಡೆದಿಲ್ಲ ಎಂದು ಸಾರಿಗೆಯ ಇಲಾಖೆಯ ಕಾನೂನು ಸಲಹೆಗಾರರು ಮಂಜುನಾಥ ತಿಳಿಸಿದ್ದಾರೆ.