ಸಾರಾಂಶ
ಭೀಮಾ ಕೋರೆಗಾಂವ್ ಯುದ್ಧ ಅಂಬೇಡ್ಕರ್ ಹೋರಾಟಗಳಿಗೆ ಸ್ಪೂರ್ತಿಯಾಗಿತ್ತು. ಪೇಶ್ವೆಗಳ ಜಾತಿ ತಾರತಮ್ಯದ ವಿರುದ್ಧ ಹೋರಾಡಿ ಮಡಿದ ಸಿದ್ದನಾಕ ಮತ್ತು ಮಹರ್ ಸೈನ್ಯಕ್ಕೆ ಗೌರವ ನಮನ ಸಲ್ಲಿಸುವುದು, ಸಾಮಾಜಿಕ ಅಸಮಾನತೆ ವಿರುದ್ಧದ ಹೋರಾಟಕ್ಕೆ ಪ್ರೇರಣೆಯಾಗಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಜಾತಿ ಕ್ರೌರ್ಯದ ವಿರುದ್ಧ ನಡೆದ ಐತಿಹಾಸಿಕ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಪಟ್ಟಣದಲ್ಲಿ ತಾಲೂಕಿನ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಮುಖಂಡರು ಆಚರಿಸಿ ಸಂಭ್ರಮಿಸಿದರು.ಪಟ್ಟಣದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಟಿ.ಬಿ.ವೃತ್ತದಿಂದ ತಾಲೂಕು ಆಡಳಿತ ಸೌಧದವರೆಗೆ ಮೆರವಣಿಗೆ ನಡೆಸಿದ ನೂರಾರು ಮಂದಿ ಡಾ.ಅಂಬೇಡ್ಕರ್ ಮತ್ತು ಭೀಮಾ ಕೋರೆಗಾಂವ್ ಯುದ್ಧದಲ್ಲಿ ವೀರಮರಣ ಹೊಂದಿದ ಸಿದ್ದನಾಕ ಸೇರಿದಂತೆ 22 ಮಂದಿಗೆ ಜಯಘೋಷಣೆ ಕೂಗಿದರು. ಬಳಿಕ ಬುದ್ಧವಂದನೆ ಮೂಲಕ ಮಹನೀಯರ ತ್ಯಾಗಕ್ಕೆ ಗೌರವ ನಮನ ಸಲ್ಲಿಸಿದರು.
ದಸಂಸ ಜಿಲ್ಲಾ ಸಂಚಾಲಕ ಕಂಚಿನಕೋಟೆ ಮೂರ್ತಿ ಮಾತನಾಡಿ, ಭೀಮಾ ಕೋರೆಗಾಂವ್ ಯುದ್ಧ ಅಂಬೇಡ್ಕರ್ ಹೋರಾಟಗಳಿಗೆ ಸ್ಪೂರ್ತಿಯಾಗಿತ್ತು. ಪೇಶ್ವೆಗಳ ಜಾತಿ ತಾರತಮ್ಯದ ವಿರುದ್ಧ ಹೋರಾಡಿ ಮಡಿದ ಸಿದ್ದನಾಕ ಮತ್ತು ಮಹರ್ ಸೈನ್ಯಕ್ಕೆ ಗೌರವ ನಮನ ಸಲ್ಲಿಸುವುದು, ಸಾಮಾಜಿಕ ಅಸಮಾನತೆ ವಿರುದ್ಧದ ಹೋರಾಟಕ್ಕೆ ಪ್ರೇರಣೆಯಾಗಿದೆ ಎಂದರು.ಮುಚ್ಚಿಟ್ಟ ದಲಿತರ ಇತಿಹಾಸವನ್ನು ಅಂಬೇಡ್ಕರ್ ನಮ್ಮ ಮುಂದಿಟ್ಟಿದ್ದಾರೆ. ಇಂದಿಗೂ ಸಮಾಜದಲ್ಲಿ ತಾಂಡವಾಡುತ್ತಿರುವ ಜಾತಿ ವ್ಯವಸ್ಥೆ, ದೌರ್ಜನ್ಯಗಳ ವಿರುದ್ಧ ಹೋರಾಡಲು ಭೀಮಾ ಕೋರೆ ಗಾಂವ್ ಸ್ಫೋರ್ತಿಯಾಗಿದೆ ಎಂದರು.
ಪತ್ರಕರ್ತ ಗದ್ದೇಭೂವನಹಳ್ಳಿ ದೇವರಾಜು ಮಾತನಾಡಿ, ಭೀಮಾ ಕೋರೆಗಾಂವ್ ಯುದ್ಧ ಭಾರತದಲ್ಲಿ ಸ್ವಾಭಿಮಾನದ ಬದುಕಿನ ಹಕ್ಕಿಗಾಗಿ ನಡೆದ ಮೊದಲ ಯುದ್ಧ. ಬ್ರಾಹ್ಮಣ ರಾಜ ಶೋಷಿತ ವರ್ಗಗಳ ಸಮುದಾಯಗಳಿಗೆ ವಿದ್ಯೆ ಆಸ್ತಿ ಗೌರವ ಅಧಿಕಾರಗಳಿಂದ ದೂರವಿಟ್ಟು ಅತ್ಯಂತ ನಿಕೃಷ್ಟವಾಗಿ ನಡೆದುಕೊಳ್ಳುವ ಜೊತೆಗೆ ಸೇನೆಯಿಂದಲೂ ದಲಿತರನ್ನು ಸಂಪೂರ್ಣ ಹೊರ ಹಾಕಿದ್ದನು ಎಂದರು.ಅಶ್ಪೃಶ್ಯತೆ, ಅಸಮಾನತೆ ಮತ್ತು ಅಮಾನವೀಯ ಜಾತಿ ಕ್ರೌರ್ಯದ ಪೇಶ್ವೇಗಳ ದುರಾಡಳಿತದ ವಿರುದ್ದ ಮಹಾರಾಷ್ಟ್ರದ ಭೀಮಾ ತೀರದಲ್ಲಿ ನಡೆದ ಯುದ್ದದಲ್ಲಿ ಮಹರ್ ಸೈನಿಕರು ವಿರೋಚಿತ ಗೆಲುವು ಸಾಧಿಸುವ ಮೂಲಕ ದೇಶದ ದಲಿತರ ಸ್ವಾಭಿಮಾನ ಬದುಕಿಗೆ ದಿಟ್ಟ ಸಂದೇಶ ನೀಡಿದ್ದಾರೆ ಎಂದರು.
ಸಂಘಟನೆಗಳ ಮುಖಂಡರಾದ ಕ್ಯಾತನಹಳ್ಳಿ ಮಂಜು, ಅಟೋ ಶಿವಣ್ಣ, ಹುರುಳಿಗಂಗನಹಳ್ಳಿ ಮಹದೇವು, ಮುಳಕಟ್ಟೆ ಶಿವರಾಮಯ್ಯ, ವಿನೋದ, ಚಂದ್ರು, ಬೆಟ್ಟದ ಮಲ್ಲೇನಹಳ್ಳಿ ರಮೇಶ್, ಪುಟ್ಟರಾಜು, ವಿಜಯಾನಂದ, ಲೋಕೇಶ್, ಗೋವಿಂದರಾಜು, ತೊಳಲಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಇದ್ದರು.