ಮಳೆಗೆ ಧರೆಗುರುಳಿದ ಐತಿಹಾಸಿಕ ಮಳಖೇಡ ಕೋಟೆ

| Published : Sep 01 2024, 01:45 AM IST

ಸಾರಾಂಶ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಐತಿಹಾಸಿಕ ರಾಷ್ಟ್ರಕೂಟರ ಕಾಲದ ಕೋಟೆ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಧರೆಗುರುಳಿದೆ. ಶುಕ್ರವಾರ ರಾತ್ರಿಯಿಂದ ಮಳೆ ಆರಂಭಗೊಂಡಿದ್ದು ಶನಿವಾರವೂ ಮಳೆ ಮುಂದುವರೆದಿದ್ದು, ಕೋಟೆ ಗೋಡೆಗಳಲ್ಲಿ ನೀರು ನಿಂತು ಕುಸಿದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಐತಿಹಾಸಿಕ ರಾಷ್ಟ್ರಕೂಟರ ಕಾಲದ ಕೋಟೆ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಧರೆಗುರುಳಿದೆ.

ಶುಕ್ರವಾರ ರಾತ್ರಿಯಿಂದ ಮಳೆ ಆರಂಭಗೊಂಡಿದ್ದು ಶನಿವಾರವೂ ಮಳೆ ಮುಂದುವರೆದಿದ್ದು, ಕೋಟೆ ಗೋಡೆಗಳಲ್ಲಿ ನೀರು ನಿಂತು ಕುಸಿದಿದೆ. ಇದರಿಂದ ಪಕ್ಕದಲ್ಲಿದ್ದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಜೀರ್ಣೋದ್ಧಾರಗೊಂಡಿತ್ತು : ರಾಷ್ಟ್ರಕೂಟರ ರಾಜ ಅಮೋಘವರ್ಷ ನೃಪತುಂಗ ಮಳಖೇಡ (ಮಾನ್ಯಖೇಟ) ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಆಸ್ಥಾನದಲ್ಲಿದ್ದ ಕವಿ ಶ್ರೀವಿಜಯ ‘ಕವಿರಾಜ ಮಾರ್ಗ’ ಗ್ರಂಥ ಬರೆದಿದ್ದ. ಇದು ಕನ್ನಡದ ಮೊದಲ ಉಪಲಬ್ದ ಕೃತಿಯಾಗಿದೆ. ಕೋಟೆಯನ್ನು 2016 – 18ರ ಅವಧಿಯಲ್ಲಿ ಅಂದಿನ ಮತ್ತು ಇಂದಿನ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು 5 ಕೋಟಿ‌ ರು. ಅನುದಾನ ನೀಡಿ ಜೀರ್ಣೋದ್ಧಾರ ಮಾಡಿಸಿದ್ದರು. ಜೊತೆಗೆ ಆಗಿನ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರು 1 ಕೋಟಿ ರು. ಅನುದಾನ ನೀಡಿದ್ದರು. 2018ರಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಪಾಟೀಲ ಅವರ ನೇತೃತ್ವದಲ್ಲಿ ರಾಷ್ಟ್ರಕೂಟರ ಉತ್ಸವ ಕೂಡ ಜರುಗಿತ್ತು. ಹಳೆ ಗೋಡೆಗಳು ಬಿದ್ದಿಲ್ಲ. ಆದರೆ ಜೀರ್ಣೋದ್ಧಾರ ಮಾಡಿದ ಗೋಡೆಯೇ ಬಿದ್ದಿರುವದು ಜನರಲ್ಲಿ ಅಚ್ಚರಿ ಮೂಡಿಸಿದೆ.