ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಸಾಕಷ್ಟು ವ್ಯಕ್ತಿಗಳ ಇತಿಹಾಸ ಸರಿಯಾದ ಸಮಯಕ್ಕೆ ಪ್ರಚಾರಕ್ಕೆ ಬಾರದೆ ಹೋಗಿದೆ. ಮುಧೋಳ ತಾಲೂಕಿನ ಹಲಗಲಿ ಗ್ರಾಮದ ವೀರ ಜಡಗಣ್ಣ - ಬಾಲಣ್ಣರು ಕೂಡ ಸೇರಿದ್ದಾರೆ. ಇವರು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ನಿಶಸ್ತ್ರೀಕರಣ ಕಾಯ್ದೆ ವಿರುದ್ಧ ಬಂಡಾಯ ಸಾರಿದ ವೀರ ಸೇನಾನಿಗಳು. ಇವರ ಇತಿಹಾಸ ಇಂದಿನ ಯುವ ಪೀಳಿಗೆಗೆ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಸಮಾಜದವರು ಕೆಲಸ ಮಾಡಬೇಕೆಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಶುಕ್ರವಾರ ನಗರದ ಉತ್ತರ ಗೇಟ್ ನಲ್ಲಿ ಮುಧೋಳ ನಗರಸಭೆ ನಗರೋತ್ಥಾನ ಯೋಜನೆಯಡಿ ಅಂದಾಜು ₹50ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಂಚಿನ ಪುತ್ಥಳಿ ಅನಾವರಣಗೊಳಿಸಿ, ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಡಿದ ಜಡಗಣ್ಣ-ಬಾಲಣ್ಣರನ್ನು ಇದೇ ಸ್ಥಳದಲ್ಲಿಯೇ ಶುಕ್ರವಾರ ಸಂತೆ ದಿನದಂದು ಗಲ್ಲಿಗೇರಿಸಲಾಗಿತ್ತು. ತಳ ಸಮುದಾಯದವರ ನೈಜ ಇತಿಹಾಸ ಮರೆಮಾಚುವ ಪ್ರಯತ್ನ ಹಿಂದಿನ ಕಾಲದಿಂದಲೂ ನಿರಂತರವಾಗಿ ನಡೆಯುತ್ತಲಿದೆ. ನಿಜವಾದ ಶೂರರು, ವೀರರು ಮತ್ತು ಮಹಾನ್ ವ್ಯಕ್ತಿಗಳ ಕೊಡುಗೆಗಳು ಇತಿಹಾಸದ ಪುಟಗಳಿಂದ ಮರೆಯಾಗುತ್ತಿರುವುದು ವಿಷಾದನೀಯ ಸಂಗತಿ. ಯಾವುದೇ ಸರ್ಕಾರ ಆಡಳಿತದಲ್ಲಿರಲಿ ದೇಶಕ್ಕಾಗಿ ತ್ಯಾಗ, ಬಲಿದಾನ ಹಾಗೂ ಕೊಡುಗೆ ನೀಡಿದ ವ್ಯಕ್ತಿಗಳನ್ನು ಪ್ರಚಾರ ಮತ್ತು ಪ್ರಸಾರ ಮಾಡಿ ಸಮಾಜಕ್ಕೆ ಪರಿಚಯಿಸಬೇಕೆಂದರು.
ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿ, ಜಡಗಣ್ಣ-ಬಾಲಣ್ಣರ ಇತಿಹಾಸ ಇಂದಿನ ಯುವ ಜನಾಂಗಕ್ಕೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಯಲು ಸರ್ಕಾರ ಪಠ್ಯಪುಸ್ತಕದಲ್ಲಿ ಸೇರಿಸಬೇಕು. ಅವರ ಕುರಿತು ಪ್ರಚಾರ ಮಾಡಬೇಕು. ತಾವು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ ವಾಲ್ಮೀಕಿ ಜನಾಂಗದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿರುವುದನ್ನು ಸ್ಮರಿಸಿಕೊಂಡ ಅವರು ಜಡಗಣ್ಣ-ಬಾಲಣ್ಣರ ಪುತ್ಥಳಿ ನಿರ್ಮಾಣಕ್ಕೆ ನನ್ನ ಕೊಡುಗೆ ಇದೆ ಎಂದು ಹೇಳಿದರು.ಮಾಜಿ ಸಚಿವ ರಾಜುಗೌಡ ನಾಯಕ ಜಡಗಣ್ಣ-ಬಾಲಣ್ಣರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿ, ಹಲಗಲಿ ಬೇಡರಾದ ಜಡಗಣ್ಣ-ಬಾಲಣ್ಣರು ವಾಲ್ಮೀಕಿ ಸಮಾಜದ ಕಿರೀಟ ಇದ್ದಂತೆ. ವಾಲ್ಮೀಕಿ ಜನಾಂಗದ ನಾಯಕರು ಯಾವುದೇ ಪಕ್ಷ ಮತ್ತು ಸರ್ಕಾರದಲ್ಲಿರಲಿ ಒಗ್ಗಟ್ಟಾಗಿ ವಾಲ್ಮೀಕಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ಸಮಾಜದ ಸತೀಶ ಜಾರಕಿಹೊಳಿ ಸಿಎಂ ಆಗಲೆಂದು ಆಶಿಸುತ್ತೇವೆಂದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಡಗಣ್ಣ-ಬಾಲಣ್ಣರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ನಗರಸಭೆಯವರು ನಗರೋತ್ಥಾನ ಯೋಜನೆಯಡಿ ಅನುದಾನ ನೀಡಿರುವುದಕ್ಕೆ ನಗರಸಭೆ ಸರ್ವ ಸದಸ್ಯರಿಗೆ ತಾವು ಅಭಿನಂದಿಸುತ್ತೇನೆ,ಸತೀಶ ಜಾರಕಿಹೊಳಿ ಅವರು ಒಂದಿಲ್ಲೊಂದು ದಿನ ರಾಜ್ಯದ ಸಿಎಂ ಆಗೇ ಆಗುತ್ತಾರೆಂಬ ವಿಶ್ವಾಸ ನನಗಿದೆ ಎಂದು ಹೇಳಿದ ಅವರು, ವಿದ್ಯೆ ಯಾರ ಸ್ವತ್ತೂ ಅಲ್ಲ ಎಂಬುದಕ್ಕೆ ವಾಲ್ಮೀಕಿ ಅವರೇ ಸಾಕ್ಷಿ. ಜಡಗಣ್ಣ-ಬಾಲಣ್ಣರು ಮುಧೋಳ ತಾಲೂಕಿನವರೆಂಬುದು ಹೆಮ್ಮೆ ಮತ್ತು ಅಭಿಮಾನದ ಸಂಗತಿ. ಜಾತಿಗಿಂತ ದೇಶ ದೊಡ್ಡದು ಎಂದು ತಿಳಿದು ದೇಶಕ್ಕಾಗಿ ನಾವು ಯಾವ ತ್ಯಾಗಕ್ಕೂ ಸಿದ್ಧರಾಗಬೇಕು ಎಂದ ಅವರು, ಅಭಿವೃದ್ದಿ ಕೆಲಸಗಾರರನ್ನು ಗುರುತಿಸಿ ಆಯ್ಕೆ ಮಾಡಬೇಕು, ವಾಲ್ಮೀಕಿ ಜನಾಂಗಕ್ಕೆ ಸೇರಿದ ಪ್ರತಿಯೊರ್ವ ಮಕ್ಕಳು ಶಿಕ್ಷಣವಂತರಾಗಬೇಕು ಮತ್ತು ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು. ಒಂದು ವರ್ಷದೊಳಗೆ ಜಡಗಣ್ಣ-ಬಾಲಣ್ಣರ ಮೂರ್ತಿಗಳಿಗೆ ಹೊಸ ರೂಪ ನೀಡಲಾಗುವುದು ಎಂದು ತಿಳಿಸಿದರು.ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಬಂಡಿಗಣಿಯ ಅನ್ನದಾನೇಶ್ವರ ಅಪ್ಪಾಜಿ, ಲೋಕಾಪೂರದ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿ, ಆಶೀರ್ವಚನ ನೀಡಿದರು. ಜಿಪಂ ಸಿಇಒ ಶಶಿಧರ ಕುರೇರ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಶಿವಾನಂದ ಉದಪುಡಿ, ವಾಲ್ಮೀಕಿ ಸಮಾಜದ ಮುಖಂಡರಾದ ದ್ಯಾಮಣ್ಣ ಗಾಳಿ, ಭೀಮಪ್ಪ ತಳವಾರ, ಚನ್ನಬಸು ಮುತ್ತೂರ, ಮಾರುತಿ ಕರೆನ್ನವರ, ಲಕ್ಷ್ಮಣ ಮಾಲಗಿ, ಸುಭಾಸ ಗಸ್ತಿ, ಗೋವಿಂದಪ್ಪ ಕೌಲಗಿ, ಸತೀಶ ಕೋವಳ್ಳಿ, ಮಂಜು ಬಾವಿದಂಡಿ, ಲಕ್ಷ್ಮಣ ಆನೆಗುದ್ದಿ, ಭೈಲಪ್ಪ ಶಿರಗುಂಪಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.