ಸನಾತನ, ಧಾರ್ಮಿಕ, ಆಧ್ಯಾತ್ಮಿಕ ತಾಣವಾಗಿರುವ ಈ ತಾಣ ಅಭಿವೃದ್ಧಿಯಾಗಲು ಎಲ್ಲರಲ್ಲಿ ಒಗ್ಗಟ್ಟಿನ ಶಕ್ತಿ, ಮನೋಭಾವ ಮೂಡಬೇಕು. ಕೆಎಸ್ ನ ಕಾವ್ಯಸ್ಪೂರ್ತಿಯಾಗಿರುವ ಸಿರೆಗೆರೆ ಇಂದು ಕವಿ ಹೆಸರಿನಲ್ಲಿ ಕೆ.ಎಸ್.ನರಸಿಂಹಸ್ವಾಮಿ ಸರೋವರವಾಗಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮೇಲುಕೋಟೆಯಲ್ಲಿ ಪುತಿನ ಮನೆ ಇರುವಂತೆ ಕಿಕ್ಕೇರಿಯ ಕೆ.ಎಸ್.ನರಸಿಂಹಸ್ವಾಮಿ ಮನೆ ಸ್ಮಾರಕವಾದರೆ ಕನ್ನಡದ ಮನಸ್ಸು ಗಟ್ಟಿಯಾಗಲು ಸಾಧ್ಯ ಎಂದು ಮೇಲುಕೋಟೆ ಯದುಗಿರಿಯತಿರಾಜ ಮಠದ ಪೀಠಾಧಿಪತಿ ಶ್ರೀನಾರಾಯಣ ರಾಮಾನುಜಜೀಯರ್ ಹೇಳಿದರು.ಪಟ್ಟಣದ ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಹುಟ್ಟಿದ ಮನೆ ವೀಕ್ಷಣೆ ಮಾಡಿ ಮಾತನಾಡಿ, ಈ ಊರಿನಲ್ಲಿ ಕವಿ ಹುಟ್ಟಿರುವುದೇ ಬಲು ದೊಡ್ಡ ಅಸ್ಮಿತೆ. ಯತಿವರ್ಯರು, ಆಚಾರ್ಯರು, ಸಾಧು ಸಂತರು, ಕವಿ, ಸಾಹಿತಿಗಳು ನೆಲೆಸಿ ನಡೆದಾಡಿದ ಪುಣ್ಯ ತಾಣವಾಗಿದ್ದು, ಇದಕ್ಕೆ ಸಾಕಷ್ಟು ಆಧಾರಗಳಿವೆ ಎಂದರು.
ಸನಾತನ, ಧಾರ್ಮಿಕ, ಆಧ್ಯಾತ್ಮಿಕ ತಾಣವಾಗಿರುವ ಈ ತಾಣ ಅಭಿವೃದ್ಧಿಯಾಗಲು ಎಲ್ಲರಲ್ಲಿ ಒಗ್ಗಟ್ಟಿನ ಶಕ್ತಿ, ಮನೋಭಾವ ಮೂಡಬೇಕು. ಕೆಎಸ್ ನ ಕಾವ್ಯಸ್ಪೂರ್ತಿಯಾಗಿರುವ ಸಿರೆಗೆರೆ ಇಂದು ಕವಿ ಹೆಸರಿನಲ್ಲಿ ಕೆ.ಎಸ್.ನರಸಿಂಹಸ್ವಾಮಿ ಸರೋವರವಾಗಿದೆ ಎಂದು ಶ್ಲಾಘಿಸಿದರು.ಸರೋವರ ಎಂದರೆ ಹಂಸಕ್ಷೀರ ನ್ಯಾಯದಂತೆ ಎಲ್ಲವನ್ನು ಸ್ವೀಕರಿಸುವ ತಾಣ. ಮುಂದಿನ ದಿನದಲ್ಲಿ ಸರೋವರ ರೈತ, ಗ್ರಾಮಸ್ಥರಿಗೆ ಅನುಕೂಲ ಮಾಡುವ ಜತೆಗೆ ಉತ್ತಮ ಪ್ರೇಕ್ಷಣೀಯ ತಾಣವಾಗಲಿದೆ ಎಂದು ನುಡಿದರು.
ಈ ಸರೋವರಕ್ಕೆ ಬಲು ಹಿಂದೆ ಕೇತಕಿ ನದಿಯಾಗಿತ್ತು. ಸಾಧು ಸಂತರು ಪುಣ್ಯಸ್ನಾನ, ಜಪತಪ ಮಾಡಲಾಗುತ್ತಿತ್ತು. ಕಾಲನಂತರ ಕೆರೆಯಾಗಿ ಅಂತಿಮವಾಗಿ ಸರೋವರವಾಗಿದೆ. ಕೆಎಸ್ ನ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಸದಸ್ಯರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕೆಎಸ್ ನ ಹುಟ್ಟಿದ ಮನೆ ಒಳ ಹೊರಗೂ ಇಣುಕಿ ನೋಡಿದ ಯತಿರಾಜೀಯರ್ ಶಿಥಿಲಾವಸ್ಥೆಯ ನಾಡ ಹೆಂದಿನ ಮನೆ ಒಳಗೆ ಪ್ರವೇಶಿಸಿ ಅವರು ಕುಳಿತು ಕೊಳ್ಳುತ್ತಿದ್ದ ಜಾಗ, ಅಡುಗೆ ಮನೆ, ಮಲಗುವ ಕೋಣೆ ವೀಕ್ಷಣೆ ಮಾಡಿದರು.
ಈ ವೇಳೆ ಕಾರ್ಯಂ ಶ್ರೀರಂಗರಾಜನ್, ಆಸ್ಥಾನ ವಿದ್ವಾಂಸ ಶ್ರೀರಂಗ ರಾಮಾನುಜನ್, ಮಣಿಕರ್ಣಿಕೆ ವಾಸುದೇವನ್, ಗೋಪಾಲಕೃಷ್ಣ, ಎಂ.ಡಿ.ಜಯಸಿಂಹ, ಡಿ. ರವೀಂದ್ರನಾಥ, ಪುಷ್ಪಲತಾ ಇದ್ದರು.