ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಶಯಗಳು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿಯಾಗಬೇಕು. ಜಿಲ್ಲೆಯ ಅಭಿವೃದ್ಧಿ, ಸಂಸ್ಕೃತಿ ಮತ್ತು ಭಾಷೆಗೆ ತಕ್ಕಂತೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವ ಮೂಲಕ ಸಮ್ಮೇಳನವು ಮಾರ್ಗದರ್ಶಕವಾಗಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಶಯಗಳು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿಯಾಗಬೇಕು. ಜಿಲ್ಲೆಯ ಅಭಿವೃದ್ಧಿ, ಸಂಸ್ಕೃತಿ ಮತ್ತು ಭಾಷೆಗೆ ತಕ್ಕಂತೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವ ಮೂಲಕ ಸಮ್ಮೇಳನವು ಮಾರ್ಗದರ್ಶಕವಾಗಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.

ಸೋಮವಾರ ನಗರದ ಗಾಜಿನಮನೆ ಆವರಣದಲ್ಲಿ 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜ್ಯದ ಆಡಳಿತ, ಅಭಿವೃದ್ಧಿ ಹಾಗೂ ಸಮಾಜಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳು ಚರ್ಚೆಗಳಾಗುತ್ತಿದ್ದು, ಅಂದಿನ ಸರ್ಕಾರಗಳಿಗೆ ಪರಿಣಾಮಕಾರಿ ಸಲಹೆ–ಸೂಚನೆಗಳನ್ನು ನೀಡಿದ ಇತಿಹಾಸವಿದೆ. ಅಂತೆಯೇ ಈ ಸಮ್ಮೇಳನ ಕೂಡ ಅಭಿವೃದ್ಧಿಗೆ ದಿಕ್ಸೂಚಿ ಆಗಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಸಮ್ಮೇಳನಗಳ ನಿರ್ಣಯಗಳನ್ನು ಸರ್ಕಾರಗಳು ಕಡಿಮೆ ಮಟ್ಟದಲ್ಲಿ ಅಳವಡಿಸಿಕೊಳ್ಳುತ್ತಿರುವುದು ಕಂಡುಬರುತ್ತಿದ್ದರೂ ಕನ್ನಡ ನಾಡಿನ ಬೆಳವಣಿಗೆ ಕನ್ನಡಿಗರಿಂದಲೇ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಜಿಲ್ಲೆಯ 17ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಮ್ಮೇಳನದಲ್ಲಿ ಚರ್ಚೆಗೆ ಬರಲಿರುವ ಅನೇಕ ವಿಚಾರಗಳು ಜಿಲ್ಲೆಯ ಹಾಗೂ ರಾಜ್ಯದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಲಿವೆ ಎಂದು ತಿಳಿಸಿದರು.

ಇಡೀ ಜಗತ್ತಿನಾದ್ಯಂತ ಕನ್ನಡಿಗರು ಕನ್ನಡ ಭಾಷೆಯಷ್ಟೇ ಅಲ್ಲ, ನಮ್ಮ ಸಂಸ್ಕೃತಿಯನ್ನೂ ಜಗದಗಲ ಪ್ರಚಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇತ್ತೀಚೆಗೆ ನಾನು ಬೆಹ್ರಾನ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿ ಕನ್ನಡ ಸಂಘಟನೆಗಳ ಮೂಲಕ ದೊಡ್ಡ ಕಟ್ಟಡ ನಿರ್ಮಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುತ್ತಿರುವುದನ್ನು ಕಂಡೆ. ಅಲ್ಲಿನ ಮಕ್ಕಳಲ್ಲಿ ಕಲೆ ಮತ್ತು ಸಂಸ್ಕೃತಿಯ ಮೇಲಿನ ಆಸಕ್ತಿಯನ್ನು ನೋಡಿ ನಾನು ವೈಯಕ್ತಿಕವಾಗಿ ಒಂದು ಕೋಟಿ ರು.ಗಳನ್ನು ಸಂಘಕ್ಕೆ ನೀಡಿದ್ದೇನೆ. ಇಂತಹ ಕನ್ನಡ ಸೇವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು.

ಬೆಂಗಳೂರಿನ ಮೂಲದ ನಾಸಾ ವಿಜ್ಞಾನಿ ಡಾ. ಸೀತಾರಾಮಯ್ಯ ಅವರು ಅಮೆರಿಕದಲ್ಲಿದ್ದರೂ ಕನ್ನಡದಲ್ಲೇ ಮಾತನಾಡುತ್ತಾರೆ. ಇದು ಕನ್ನಡದ ಶಕ್ತಿ ಮತ್ತು ಸಂಸ್ಕೃತಿಯ ಜೀವಂತ ಉದಾಹರಣೆಯಾಗಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳಿಗೆ ಬೀಗಮುದ್ರೆ : ಪ್ರೊ. ಬರಗೂರು ಕಳವಳ

ರಾಜ್ಯದಲ್ಲಿ ದಿನೇ ದಿನೇ ಸರ್ಕಾರಿ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಹಾಗೂ ನೂರಾರು ಶಾಲೆಗಳು ಮುಚ್ಚುವ ಭೀತಿ ಎದುರಾಗುತ್ತಿರುವ ಬಗ್ಗೆ ನಾಡಿನ ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸೋಮವಾರ ತುಮಕೂರಿನ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದ್ದ 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ವಿಶ್ವ ಮಾನವ ದಿನಾಚರಣೆಯ ಭಾಷಣ ಮಾಡಿ ಅವರು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಪಾಲಿನ ಆಶಾಕಿರಣವಾಗಿದ್ದು, ಅದನ್ನು ಉಳಿಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕು. ಆದರೆ ಶಿಕ್ಷಕರು ಮಕ್ಕಳ ಕೊರತೆ ಕಾರಣ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ಇರಾದೆ ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಖಾಸಗಿ ಶಾಲೆಗಳ ವ್ಯಾಮೋಹ ಮತ್ತು ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ಕೊರತೆಯಿಂದಾಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದು ಶಾಲೆಗಳನ್ನು ಶೂನ್ಯ ದಾಖಲಾತಿ ಶಾಲೆಗಳನ್ನಾಗಿ ಮಾರ್ಪಡಿಸಿ, ಅಂತಿಮವಾಗಿ ಬೀಗ ಹಾಕುವ ಸಂದರ್ಭ ಉಂಟುಮಾಡುತ್ತಿದೆ ಎಂದರು.

ಸರ್ಕಾರಕ್ಕೆ ರಾಷ್ಟ್ರಕವಿ ಕುವೆಂಪು ಅವರ ಮೇಲೆ ನಿಜವಾದ ಗೌರವವಿದ್ದರೆ, ಮೊದಲು ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಸರ್ಕಾರದ ನಡವಳಿಕೆಯನ್ನು ಪ್ರಶ್ನಿಸಿದ ಅವರು, ಕನ್ನಡ ಕೇವಲ ಭಾಷೆಯ ಪ್ರಶ್ನೆಯಲ್ಲ, ಬದಲಾಗಿ ನಮ್ಮ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳನ್ನು ಸೆಳೆಯುವಂತಾಗಲು ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಬೇಕು. ಶಾಲೆಗಳು ನೋಡಲು ಆಕರ್ಷಕವಾಗಿರಬೇಕು. ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ವಿದ್ಯಾರ್ಥಿಗಳು ತಾವಾಗಿಯೇ ಬರುವಂತಹ ವಾತಾವರಣ ನಿರ್ಮಿಸಬೇಕು. ಕಡ್ಡಾಯ ಶಿಕ್ಷಣ ಕಾಯಿದೆಯಂತೆ ಪ್ರತಿ ಎರಡು ಕಿ.ಮೀ.ಗೆ ಕಿರಿಯ ಪ್ರಾಥಮಿಕ, 3 ಕಿ.ಮೀ.ಗೆ ಹಿರಿಯ ಪ್ರಾಥಮಿಕ ಹಾಗೂ 5 ಕಿ.ಮೀ. ವ್ಯಾಪ್ತಿಯಲ್ಲಿ ಪ್ರೌಢಶಾಲೆ ಇರುವಂತೆ ಮಾಡುವುದು ಸರ್ಕಾರದ ಕರ್ತವ್ಯ ಎಂದರು.

ಕನ್ನಡ ಶಾಲೆಗಳು ಇಲ್ಲದಿದ್ದರೆ ಭವಿಷ್ಯದಲ್ಲಿ ಕನ್ನಡ ಪತ್ರಿಕೆಗಳನ್ನು ಓದುವವರು, ಕನ್ನಡ ನಾಟಕ ಹಾಗೂ ಸಿನಿಮಾಗಳನ್ನು ನೋಡುವವರ ಸಂಖ್ಯೆ ಕ್ಷೀಣಿಸುತ್ತದೆ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಹೊಡೆತ ಎಂದ ಅವರು, ಸರ್ಕಾರಿ ಶಾಲೆಗಳಿಲ್ಲದಿದ್ದರೆ ಸ್ವಾತಂತ್ರ‍್ಯ ದಿನಾಚರಣೆ, ಗಣರಾಜ್ಯೋತ್ಸವ, ಅಂಬೇಡ್ಕರ್ ಹಾಗೂ ಗಾಂಧಿ ಜಯಂತಿಗಳಂತಹ ಪ್ರಜಾಸತ್ತಾತ್ಮಕ ಉತ್ಸವಗಳು ಕ್ಷೀಣಿಸುವ ಪ್ರಸಂಗಗಳು ಸಮೀಪಿಸುತ್ತಿವೆ ಎಂದರು.

ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು, 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಅಗ್ರಹಾರ ಕೃಷ್ಣಮೂರ್ತಿ, ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.