ಬಜೆಟ್: ಹುಸಿಯಾಯಿತು ಜಿಲ್ಲೆ ಜನರ ನಿರೀಕ್ಷೆ

| Published : Mar 08 2025, 12:31 AM IST

ಸಾರಾಂಶ

ಇಬ್ಬರು ಪ್ರಭಾವಿ ಸಚಿವರು ಹಾಗೂ 7 ಮಂದಿ ಕಾಂಗ್ರೆಸ್ ಶಾಸಕರನ್ನು ಒಳಗೊಂಡಿರುವ ತುಮಕೂರು ಜಿಲ್ಲೆಗೆ ಈ ಬಾರಿಯ ಬಂಪರ್ ಬಜೆಟ್ ನಿರೀಕ್ಷಿಸಲಾಗಿತ್ತು. ಆದರೆ ಅದು ಹುಸಿಯಾಗಿದೆ. ಬೆಳಗಾವಿ ಬಳಿಕ ಅತ್ಯಂತ ದೊಡ್ಡ ಜಿ.ಪಂ. ಕ್ಷೇತ್ರಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ಘೋಷಿಸಬಹುದೆಂಬ ನಿರೀಕ್ಷೆ ಕಳೆದ ಬಾರಿಯಂತೆ ಈ ಬಾರಿಯೂ ಹುಸಿಯಾಗಿದೆ.

ಉಗಮ ಶ್ರೀನಿವಾಸ್ ಕನ್ನಡಪ್ರಭ ವಾರ್ತೆ, ತುಮಕೂರು ಇಬ್ಬರು ಪ್ರಭಾವಿ ಸಚಿವರು ಹಾಗೂ 7 ಮಂದಿ ಕಾಂಗ್ರೆಸ್ ಶಾಸಕರನ್ನು ಒಳಗೊಂಡಿರುವ ತುಮಕೂರು ಜಿಲ್ಲೆಗೆ ಈ ಬಾರಿಯ ಬಂಪರ್ ಬಜೆಟ್ ನಿರೀಕ್ಷಿಸಲಾಗಿತ್ತು. ಆದರೆ ಅದು ಹುಸಿಯಾಗಿದೆ. ಬೆಳಗಾವಿ ಬಳಿಕ ಅತ್ಯಂತ ದೊಡ್ಡ ಜಿ.ಪಂ. ಕ್ಷೇತ್ರಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ಘೋಷಿಸಬಹುದೆಂಬ ನಿರೀಕ್ಷೆ ಕಳೆದ ಬಾರಿಯಂತೆ ಈ ಬಾರಿಯೂ ಹುಸಿಯಾಗಿದೆ. ತುಮಕೂರು ವಿವಿಗೆ ಬಜೆಟ್ ನಲ್ಲಿ ಹಣ ಘೋಷಣೆಯಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಅದು ಕೂಡ ಸುಳ್ಳಾಗಿದೆ. ನೀರಾವರಿ ವಿಷಯದಲ್ಲಿ ಒಂದಿಷ್ಟು ಸಮಾಧಾನ ಪಟ್ಟುಕೊಳ್ಳಬಹುದು. ಮಧುಗಿರಿ, ಕೊರಟಗೆರೆ ಹಾಗೂ ಪಾವಗಡಕ್ಕೆ ನೀರಾವರಿಗೆ ಬಜೆಟ್ ನಲ್ಲಿ ಜಾಗ ನೀಡಲಾಗಿದೆ.ಎತ್ತಿನಹೊಳೆ ಯೋಜನೆಯಿಂದ ತುಮಕೂರು ಜಿಲ್ಲೆಯ ಮಧುಗಿರಿ ಹಾಗೂ ಕೊರಟಗೆರೆಯ 107 ಕೆರೆಗಳಿಗೆ ನೀರನ್ನು ತುಂಬಿಸಿ ಅಂತರ್ಜಲ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ. ಕೊರಟಗೆರೆ ತಾಲೂಕಿನ 62 ಕೆರೆಗಳು ಹಾಗೂ ಮಧುಗಿರಿ ತಾಲೂಕಿನ 45 ಕೆರೆಗಳಿಗೆ ನೀರು ತುಂಬಿಸಲಾಗುವುದು ಹಾಗೆಯೇ ಭದ್ರಾ ಮೇಲ್ದಂಡೆ ಯೋಜನೆಯಡಿ ಪಾವಗಡ ಕೆರೆಗಳನ್ನು ತುಂಬಿಸಲು ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಇನ್ನು ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಯೋಜನೆಗಳು ಕಾರ್ಯಾರಂಭ ಮಾಡಿಲ್ಲ. ಆ ಯೋಜನೆಗಳಿಗೆ ಚಾಲನೆ ನೀಡುವ ಯಾವ ಕಾರ್ಯಕ್ರಮವನ್ನು ಈ ಬಜೆಟ್ ನಲ್ಲಿ ಘೋಷಿಸಿಲ್ಲ. ಗುಬ್ಬಿ ತಾಲೂಕು ಮಠದ ಹಳ್ಳಿ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಈ ಬಜೆಟ್ ನಲ್ಲೂ ಜಾಗ ಸಿಕ್ಕಿಲ್ಲ. ವಸಂತನರಸಾಪುರ ಹಾಗೂ ತುಮಕೂರಿನಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ಬಗ್ಗೆಯೂ ಕೂಡ ಬಜೆಟ್ ನಲ್ಲಿ ಚಕಾರವಿಲ್ಲ. ಇನ್ನು ತುಮಕೂರಿನವರೆಗೆ ಮೆಟ್ರೋ ವಿಸ್ತರಣೆ ಬಗ್ಗೆ ಕೂಡ ಯಾವೊಂದು ಮಾಹಿತಿ ಬಜೆಟ್ ನಲ್ಲಿ ಇಲ್ಲ. ತುಮಕೂರು ಜಿಲ್ಲೆಯಲ್ಲಿ ಮಹಿಳಾ ಹಾಸ್ಟೆಲ್ ಸ್ಥಾಪನೆ ಮಾಡುವ ಘೋಷಣೆ ಬಜೆಟ್ ನಲ್ಲಿ ಸೇರಿಸಲಾಗಿದೆ. ಕಳೆದ ಬಾರಿ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಯೋಜನೆಗಳಿಗೆ ಚಾಲನೆ ಸಿಕ್ಕಿಲ್ಲ. ಇನ್ನು ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಸಂಬಂಧ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದರು. ಏಷ್ಯಾದಲ್ಲೇ ಅತ್ಯಂತ ವಿಶಿಷ್ಟ ಬೆಟ್ಟ ಇದಾಗಿದ್ದು ಇದರ ಬಗ್ಗೆಯೂ ಬಜೆಟ್ ನಲ್ಲಿ ಘೋಷಣೆಯಿಲ್ಲ. ಒಟ್ಟಾರೆಯಾಗಿ ಜಿಲ್ಲೆಯ ಮಟ್ಟಿಗೆ ದೊಡ್ಡ ಕೊಡುಗೆ ಸಿಕ್ಕಿಲ್ಲ. ಬಜೆಟ್ ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು 1. ಎತ್ತಿನಹೊಳೆಯಿಂದ ಜಿಲ್ಲೆಯ ಮಧುಗಿರಿ, ಕೊರಟಗೆರೆ ಕೆರೆಗಳಿಗೆ ನೀರು2. ಮಧುಗಿರಿಯ 45 ಹಾಗೂ ಕೊರಟಗೆರೆಯ 62 ಕೆರೆಗಳಿಗೆ ನೀರು3. ಭದ್ರಾ ಮೇಲ್ದಂಡೆ ಯೋಜನೆಯಿಂದ ಪಾವಗಡ ಕೆರೆಗೆ ನೀ ರು4. ಜಿಲ್ಲೆಯಲ್ಲಿ ಮಹಿಳಾ ಹಾಸ್ಟೆಲ್ ಸ್ಥಾಪನೆ