ಬಿಜೆಪಿ ಕಾಂಗ್ರೆಸ್‌ಗೆ ಹೊಸಪೇಟೆ ನಗರಸಭೆ ಚುನಾವಣೆ ಪ್ರತಿಷ್ಠೆ ಕಣ

| Published : Sep 12 2024, 01:50 AM IST

ಸಾರಾಂಶ

ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸುತ್ತಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ನಗರಸಭೆಯಲ್ಲಿ ಈ ಬಾರಿ ತನ್ನ ಬಾವುಟ ಹಾರಿಸಲು ಕಾಂಗ್ರೆಸ್‌ ತೆರೆಮರೆಯ ಕಸರತ್ತು ನಡೆಸಿದೆ. ಇತ್ತ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸುತ್ತಿದೆ. ಸೆ.12ರಂದು ಚುನಾವಣೆ ನಿಗದಿಯಾಗಿದ್ದು, ಉಭಯ ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ನಗರಸಭೆಯ 35 ಸದಸ್ಯರಲ್ಲಿ ಬಿಜೆಪಿ 10 ಸ್ಥಾನ, ಕಾಂಗ್ರೆಸ್‌ 12 ಸ್ಥಾನ, ಆಪ್‌ ಒಂದು ಸ್ಥಾನದಲ್ಲಿ ಮತ್ತು ಪಕ್ಷೇತರರು 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಶಾಸಕರು, ಸಂಸದರು ಮತ ಚಲಾಯಿಸಬಹುದು. 37 ಮತಗಳಲ್ಲಿ ಯಾರೂ ಹೆಚ್ಚು ಮತಗಳನ್ನು ಪಡೆಯುತ್ತಾರೆಯೋ ಅವರು ಗೆಲುವು ಸಾಧಿಸಲಿದ್ದಾರೆ.

ಕಾಂಗ್ರೆಸ್‌ ಲೆಕ್ಕಾಚಾರ:

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ಅಸ್ಲಂ ಮಾಳಗಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯ ಗುಜ್ಜಲ ರಾಘವೇಂದ್ರ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಪಕ್ಷದ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಯುವವರ ಹೆಸರನ್ನು ಅಖೈರುಗೊಳಿಸಲಾಗಿದೆ. ಕಾಂಗ್ರೆಸ್‌ನ 12 ಸದಸ್ಯರು ಮತ್ತು ಪಕ್ಷಕ್ಕೆ ಸೇರ್ಪಡೆಯಾಗಿರುವ ಪಕ್ಷೇತರ ಸದಸ್ಯ ಸಂತೋಷಕುಮಾರಗೆ ವಿಪ್‌ ಜಾರಿ ಮಾಡಲಾಗಿದೆ. ಇನ್ನು ಪಕ್ಷ ಕಣಕ್ಕಿಳಿಸುವ ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತೇವೆ ಎಂದು ಮಾತುಕೊಟ್ಟ ಏಳು ಪಕ್ಷೇತರರಿಗೂ ಮೌಖಿಕವಾಗಿ ತಿಳಿಸಲಾಗಿದೆ ಎಂದು ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಶಾಸಕ ಎಚ್.ಆರ್‌. ಗವಿಯಪ್ಪ, ಸಂಸದ ತುಕಾರಾಂ ಮತಗಳನ್ನು ಕೂಡ ಕಾಂಗ್ರೆಸ್‌ ಪಡೆಯಲಿದೆ. ಈ ಬಾರಿ 22 ಮತಗಳನ್ನು ಪಡೆಯುವ ಮೂಲಕ ನಗರಸಭೆಯಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಲಾಗುವುದು ಎಂದು ಕಾಂಗ್ರೆಸ್‌ ಪಾಳಯ ಹೇಳುತ್ತಿದೆ.

ಬಿಜೆಪಿ ಲೆಕ್ಕಾಚಾರ:

ಮಾಜಿ ಸಚಿವ ಆನಂದ ಸಿಂಗ್‌, ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ನೇತೃತ್ವದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ರೂಪೇಶ್‌ಕುಮಾರ, ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯ ರಮೇಶ್ ಗುಪ್ತಾ ಹೆಸರನ್ನು ಅಖೈರುಗೊಳಿಸಿದೆ. 10 ಬಿಜೆಪಿ ಸದಸ್ಯರಿಗೆ ಪಕ್ಷದಿಂದ ವಿಪ್‌ ಜಾರಿ ಮಾಡಲಾಗಿದೆ. ಈ ಹಿಂದೆ ಪಕ್ಷ ಸೇರ್ಪಡೆಯಾದ ಆಪ್‌ ಸದಸ್ಯ, 9 ಪಕ್ಷೇತರರಿಗೆ ಮೌಖಿಕವಾಗಿ ಸೂಚಿಸಲಾಗಿದೆ.

ಶಾಸಕ ಗವಿಯಪ್ಪ, ಸಂಸದ ತುಕಾರಾಂಗೂ ಪಕ್ಷದ ಹೈಕಮಾಂಡ್‌ ಸೂಚನೆ ರವಾನಿಸಿದೆ. ಹಾಗಾಗಿ ಈ ಬಾರಿ ನಗರಸಭೆ ಚುನಾವಣೆ ಕಣ ಭಾರೀ ಕುತೂಹಲಕ್ಕೆಡೆ ಮಾಡಿದೆ.

ಈ ಬಾರಿ ನಗರಸಭೆಯಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಲಾಗುವುದು. ಈಗಾಗಲೇ ಎಲ್ಲ ತಯಾರಿ ಮಾಡಲಾಗಿದೆ. ಪಕ್ಷದ ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗಿದೆ. ಪಕ್ಷದ ಸದಸ್ಯರಿಗೂ ವಿಪ್‌ ಕೂಡ ಜಾರಿ ಮಾಡಲಾಗಿದೆ ಎನ್ನುತ್ತಾರೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌.

ಬಿಜೆಪಿ ಈ ಬಾರಿಯೂ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಹಿಂದೆ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಪಕ್ಷೇತರ ಸದಸ್ಯರಿಗೂ ಮೌಖಿಕವಾಗಿ ಸೂಚನೆ ರವಾನಿಸಲಾಗಿದೆ ಎನ್ನುತ್ತಾರೆ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌.