ದೇಗುಲದಂತೆ ಇಟ್ಟಿದ್ದ ಆಸ್ಪತ್ರೆ ಔಷಧಾಲಯ :- ಡಾ. ಅಶೋಕ್ ವೆಂಕೋಬರಾವ್ ಪ್ರಶಂಸೆ

| Published : Mar 01 2025, 01:06 AM IST

ದೇಗುಲದಂತೆ ಇಟ್ಟಿದ್ದ ಆಸ್ಪತ್ರೆ ಔಷಧಾಲಯ :- ಡಾ. ಅಶೋಕ್ ವೆಂಕೋಬರಾವ್ ಪ್ರಶಂಸೆ
Share this Article
  • FB
  • TW
  • Linkdin
  • Email

ಸಾರಾಂಶ

ಫಾರ್ಮಸಿ ಎಂಬುದು ಒಂದು ಆಸ್ಪತ್ರೆಯ ಹೃದಯವಿದ್ದಂತೆ, ಅದನ್ನು ಸಮರ್ಥವಾಗಿ ನಿಭಾಯಿಸುವುದು ಅಷ್ಟು ಸುಲಭವಲ್ಲ. ಆದರೆ, ನಗರದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ವೇದಮೂರ್ತಿ ತಮ್ಮ ಸೇವಾವಧಿಯಲ್ಲಿ ಆಸ್ಪತ್ರೆಯ ಔಷಧಾಲಯವನ್ನು ಒಂದು ದೇವಸ್ಥಾನದ ರೀತಿ ಇಟ್ಟಿದ್ದರು ಎಂದು ಆರೋಗ್ಯ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ. ಅಶೋಕ್ ವೆಂಕೋಬರಾವ್ ಪ್ರಶಂಸೆ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ಚನ್ನಪಟ್ಟಣ: ಫಾರ್ಮಸಿ ಎಂಬುದು ಒಂದು ಆಸ್ಪತ್ರೆಯ ಹೃದಯವಿದ್ದಂತೆ, ಅದನ್ನು ಸಮರ್ಥವಾಗಿ ನಿಭಾಯಿಸುವುದು ಅಷ್ಟು ಸುಲಭವಲ್ಲ. ಆದರೆ, ನಗರದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ವೇದಮೂರ್ತಿ ತಮ್ಮ ಸೇವಾವಧಿಯಲ್ಲಿ ಆಸ್ಪತ್ರೆಯ ಔಷಧಾಲಯವನ್ನು ಒಂದು ದೇವಸ್ಥಾನದ ರೀತಿ ಇಟ್ಟಿದ್ದರು ಎಂದು ಆರೋಗ್ಯ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ. ಅಶೋಕ್ ವೆಂಕೋಬರಾವ್ ಪ್ರಶಂಸೆ ವ್ಯಕ್ತಪಡಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ಫಾರ್ಮಸಿಸ್ಟ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವೇದಮೂರ್ತಿಯವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಲ್ಲಿನ ಫಾರ್ಮಸಿಯಲ್ಲಿ ಎಲ್ಲ ಔಷಧಗಳನ್ನು ವೇದಮೂರ್ತಿ ಅಚ್ಚುಕಟ್ಟಾಗಿ ಜೋಡಿಸಿ ಇಟ್ಟಿದ್ದರು. ರೋಗಿಗಳಿಗೆ ಅಗತ್ಯವಿರುವ ಔಷಧಗಳನ್ನು ಸಕಾಲಕ್ಕೆ ಒದಗಿಸುವ ಮೂಲಕ ಜನರಿಗೆ ಪ್ರೀತಿಪಾತ್ರರಾಗಿದ್ದರು. ನಾನು ಇಲ್ಲಿನ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಸಾಕಷ್ಟು ಸಹಕಾರ ನೀಡಿದರು. ರಾತ್ರಿ ಎಷ್ಟು ಹೊತ್ತಿಗೆ ಕರೆ ಮಾಡಿದರೂ ಸಮಸ್ಯೆ ಬಗೆಹರಿಸುತ್ತಿದ್ದರು ಎಂದು ಸ್ಪರಿಸಿದರು.

ವೇದಮೂರ್ತಿ ಎಂದೂ ತಮ್ಮ ಸ್ವಾರ್ಥಕ್ಕಾಗಿ ಕೆಲಸ ಮಾಡದೇ, ನಿಸ್ವಾರ್ಥವಾಗಿ ಕೆಲಸ ಮಾಡಿದರು. ಅವರಂಥ ಕರ್ತವ್ಯ ನಿಷ್ಠರಿಗೆ ರಾಜ್ಯೋತ್ಸವದಂತ ಪ್ರಶಸ್ತಿ ಸಿಗಬೇಕಿತ್ತು, ಅದು ಸಿಗಲಿಲ್ಲ ಎಂಬ ಬೇಸರವಿದೆ. ಅವರ ಸೇವೆಯ ಕುರಿತು ಒಂದು ಪುಸ್ತಕ ಬರೆಯುವ ಇಚ್ಛೆ ಇದ್ದು, ಸಾಧ್ಯವಾದಲ್ಲಿ ಪುಸ್ತಕ ಬರೆಯುವುದಾಗಿ ತಿಳಿಸಿದರು.

ಕೀಲು ಮತ್ತು ಮೂಳೆ ತಜ್ಞ ಡಾ. ರಾಜ್ ಕುಮಾರ್ ಮಾತನಾಡಿ, ವೇದಮೂರ್ತಿ ಆಸ್ಪತ್ರೆಯ ಪಾಲಿಗೆ ಶ್ರೀಕೃಷ್ಣನಂತೆ ಇದ್ದರು. ಯಾವುದೇ ಸಮಸ್ಯೆ ಎದುರಾದರೂ ಅದನ್ನು ಪರಿಹರಿಸುತ್ತಿದ್ದರು. ಪ್ರತಿನಿತ್ಯ ಬೆಳಗ್ಗೆ ಎದ್ದು ವಾಕಿಂಗ್ ಮಾಡುವ ಜತೆಗೆ ನೂರಾರು ಜನರಿಗೆ ಕರೆ ಮಾಡಿ ವಾಕಿಂಗ್ ಮಾಡುವಂತೆ ಪ್ರೇರೇಪಿಸುತ್ತಿದ್ದರು. ವಾಕಿಂಗೇ ವೇದಮೂರ್ತಿಯವರ ಆರೋಗ್ಯದ ಗುಟ್ಟು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜಗದೀಶ್ ಮಾತನಾಡಿ, ವೇದಮೂರ್ತಿ ಫಾರ್ಮಸಿಯಲ್ಲಿ ಇದ್ದು ಜನಾನುರಾಗಿಯಾಗಿ ಕೆಲಸ ಮಾಡಬಹುದು ಎಂದು ತೋರಿಸಿದರು. ಅವರು ಆಸ್ಪತ್ರೆಯ ಪಾಲಿಗೆ ಸೇವಕರಾಗಿ, ರೋಗಿಗಳ ಪಾಲಿಗೆ ರಕ್ಷಕರಾಗಿ ಕೆಲಸ ಮಾಡಿದರು. ಒತ್ತಡದ ಸಮಯದಲ್ಲಿ ನನಗೆ ಸಾಕಷ್ಟು ಧೃರ್ಯ ತುಂಬುತ್ತಿದ್ದ ಅವರು ನನ್ನ ಪಾಲಿಗೆ ಅಣ್ಣನಂತಿದ್ದರು ಎಂದರು.

ಅವರು ಎಂದು ಹಣದ ಹಿಂದೆ ಬೀಳದೇ ಜನರ ಪ್ರೀತಿ ವಿಶ್ವಾಸ ಸಂಪಾದಿಸಿದ ಶ್ರೀಮಂತರು ಎನಿಸಿದರು. ತಮ್ಮ ಸೇವಾವಧಿಯಲ್ಲಿ ಅವರು ಎಂದೂ ಹೆಸರು ಕೆಡಿಸಿಕೊಂಡವರಲ್ಲ. ಸಂಸಾರದ ಜತೆ ಸಮಾಜಸೇವೆಯನ್ನು ಸಮಾನವಾಗಿ ನಿಭಾಯಿಸಿದರು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ, ನಿವೃತ್ತಿ ನಂತರವೂ ಅವರ ಸಲಹೆ ಸಹಕಾರ ಇರಲಿ ಎಂದರು.

ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ವೇದಮೂರ್ತಿ, ನನ್ನ ಸೇವಾವಧಿಯಲ್ಲಿ ಸಾಕಷ್ಟು ಅಧಿಕಾರಿಗಳು, ವೈದರು, ದಾದಿಯರು, ಫಾರ್ಮಸಿ ವಿಭಾಗದವರು, ಹಿತೈಷಿಗಳು ಸಹಕಾರ ನೀಡಿದ್ದು, ಅವರಿಗೆ ನಾನು ಚಿರಋಣಿಯಾಗಿದ್ದೇನೆ. ನಾನು ವೈದರು ಸೂಚಿಸಿದ ಔಷಧಗಳನ್ನು ನೀಡುವ ಜತೆಗೆ ಜನರ ಸಮಸ್ಯೆಯನ್ನು ತಾಳ್ಮೆಯಿಂದ ಕೇಳುತ್ತ ಸ್ಪಂದಿಸುತ್ತಿದ್ದೆ. ಕೆಲವು ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದು ಅದರಂತೆ ನಡೆದ್ದೇನೆ ಎಂದರು.

ಬಹು ವರ್ಷದ ಹಿಂದೆಯೇ ನಾನು ವಾಕಿಂಗ್ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ನಮ್ಮ ತಾಯಿ ನಿಧನರಾದ ದಿನ ಹೊರತುಪಡಿಸಿ ಅದನ್ನು ಒಂದು ದಿನವೂ ತಪ್ಪಿಸಲಿಲ್ಲ. ಪ್ರತಿ ನಿತ್ಯ ಒಂದು ತಾಸು ವಾಕಿಂಗ್ ಮಾಡುವುದನ್ನು ರೂಡಿಸಿಕೊಂಡು ಆರೋಗ್ಯವಂತರಾಗಿರಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಲವು ವೈದ್ಯರು, ದಾದಿಯರು, ಫಾರ್ಮಸಿ ವಿಭಾಗದವರು ವೇದಮೂರ್ತಿಯವರೊಂದಿಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು.

ಆರೋಗ್ಯ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಸಂಪಂಗಿ ರಾಮಯ್ಯ, ಡಾ. ಮಹೇಂದ್ರ ಕುಮಾರ್, ಡಾ. ಅಮರೇಶ್, ಡಾ. ತಾನಯ್ಯ, ಡಾ. ಗಿರೀಶ್, ಡಾ. ಗೀತಾಂಜಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪೊಟೋ೨೮ಸಿಪಿಟಿ೨: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ್ದ ಹಿರಿಯ ಫಾರ್ಮಸಿಸ್ಟ್ ವೇದಮೂರ್ತಿ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಲಾಯಿತು.