ಸಾರಾಂಶ
ಅಂಕೋಲಾ: ಆರಿದ್ರ ಮಳೆಯಬ್ಬರಕ್ಕೆ ತಾಲೂಕಿನ ಶಿಂಗನಮಕ್ಕಿ ಗ್ರಾಮದ ಒಂದು ಮನೆ ಜಲಾವೃತಗೊಂಡಿದ್ದು, ತಾಲೂಕು ದಂಡಾಧಿಕಾರಿ ಅನಂತ ಶಂಕರ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಂಕೋಲಾ ಸುತ್ತಮುತ್ತಲಿನ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಗುರುವಾರ ಬೆಳಗ್ಗೆ ಶಿಂಗನಮಕ್ಕಿಯ ರುಹು ಹರಿಕಂತ್ರ ಮನೆಯ ಅಂಗಳಕ್ಕೆ ನೀರು ನುಗ್ಗಿದೆ.ನಿವಾಸಿಗಳ ಸುರಕ್ಷತೆಯ ದೃಷ್ಟಿಯಿಂದ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಾದ ಶಿಂಗನಮಕ್ಕಿ, ಹಡಸಿಗದ್ದೆ, ಕೆಳಗಿನ ಮಂಜುಗುಣಿ, ಮೇಲಿನ ಮಂಜುಗುಣಿ ಸೇರಿದಂತೆ ಮಂಜುಗುಣಿಯ ಗುರುದಾಸ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾಸವಾಗಿರುವ ಕುಟುಂಬಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ತೆರವು ಕಾರ್ಯಾಚರಣೆಗೆ ನಾಲ್ಕು ದೋಣಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾದೇವ ಗುನಗಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್, ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ, ಪಿಡಿಒ ಹಸ್ಮತ್ ಖಾನ್, ಬಿಎಲ್‌ಒ ಬಾಲಕೃಷ್ಣ ನಾಯ್ಕ, ಗ್ರಾಮ ಸಹಾಯಕ ಗಣಪತಿ ನಾಯ್ಕ ಸೇರಿದಂತೆ ಹಲವರು ಪರಿಶೀಲನೆ ನಡೆಸಿದ್ದಾರೆ. ಜಲಾವೃತವಾದ ಅಂಕೋಲಾ ತಾಲೂಕಿನ ಶಿಂಗನಮಕ್ಕಿ ಗ್ರಾಮದ ಮನೆಗೆ ಅನಂತ ತಾಲೂಕು ದಂಡಾಧಿಕಾರಿ ಶಂಕರ ಭೇಟಿ ನೀಡಿ ಪರಿಶೀಲಿಸಿದರು.
ಧರೆ ಕುಸಿದು ರಸ್ತೆ ಸಂಪರ್ಕ ಕಡಿತಶಿರಸಿ: ತಾಲೂಕಿನಾದ್ಯಂತ ಜು. ೪ರಂದು ಸುರಿದ ಧಾರಾಕಾರ ಮಳೆಗೆ ಮನೆಯ ಮೇಲೆ ಮರ ಬಿದ್ದು, ಧರೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡು ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.ದೊಡ್ನಳ್ಳಿ ಗ್ರಾಮದ ಸಂತೋಷ ನಾಗ್ಯಾ ಜೋಗಿಯ ವಾಸ್ತವ್ಯದ ಕಚ್ಚಾ ಮನೆಯ ಗೋಡೆಗಳು, ಚಾವಣಿ ಕುಸಿದು ಬಿದ್ದು ಅಂದಾಜು ₹೨,೨೦ ಲಕ್ಷ ಹಾನಿಯಾಗಿದೆ. ಸಾಲ್ಕಣಿ ಗ್ರಾಮದ ಮರನಮನೆಗೆ ತೆರಳುವ ರಸ್ತೆಯ ಧರೆ ಕುಸಿದು ಬಿದ್ದು ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ಇದೇ ರೀತಿ ಮಳೆ ಮುಂದುವರಿದರೆ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ.ನೈಗಾರ ಗ್ರಾಮದಿಂದ ಮಣದೂರು ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಧರೆ ಕುಸಿದು ಬಿದ್ದು ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ಮಳೆ ಮುಂದುವರಿದರೆ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ. ಘಟನೆಯಲ್ಲಿ ಜನ, ಜಾನುವಾರುಗಳಿಗೆ ಹಾನಿಯಾಗಿಲ್ಲ ಎಂದು ತಹಸೀಲ್ದಾರ್ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.