ನಿರಂತರ ಸುರಿದ ಮಳೆಗೆ ಗಿರಿಯಪ್ಪ ಮನೆ ಪ್ರದೇಶದ ಮನೆಗಳು ಜಲಾವೃತ

| Published : Aug 21 2024, 12:39 AM IST

ನಿರಂತರ ಸುರಿದ ಮಳೆಗೆ ಗಿರಿಯಪ್ಪ ಮನೆ ಪ್ರದೇಶದ ಮನೆಗಳು ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ಧಾರಕಾರವಾಗಿ ಸುರಿದ ಮಳೆಯ ಆರ್ಭಟಕ್ಕೆ ಸುಂಟಿಕೊಪ್ಪದ ತಗ್ಗು ಪ್ರದೇಶದ ಮಂದಿ ನಿರಂತರವಾಗಿ ಭೀತಿ ಹಾಗೂ ಸಂಕಷ್ಟ ಎದುರಿಸುವಂತಾಗುತ್ತಿದೆ. ಮಂಗಳವಾರ 1 ಗಂಟೆ ಕಾಲ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಯಿತು. ಮಂಗಳವಾರ ಮಧ್ಯಾಹ್ನ 2.45 ರ ಸಂದರ್ಭ ಮಳೆ ಧಾರಕಾರವಾಗಿ 1 ಗಂಟೆ ಸುರಿಯಿತು. ಪರಿಣಾಮ ಗಿರಿಯಪ್ಪ ಮನೆಯ ತಗ್ಗು ಪ್ರದೇಶದಲ್ಲಿರುವ ಚರಂಡಿ ತೊರೆಗಳು ಏಕಕಾಲದಲ್ಲಿ ತುಂಬಿ ಹರಿದವು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಇದ್ಯಾವುದೋ ಸಿಲಿಕಾನ್ ಹಾಗೂ ಗಾರ್ಡನ್ ಸಿಟಿ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ಸುಂಟಿಕೊಪ್ಪದ ಗದ್ದೆಹಳ್ಳದ ಗಿರಿಯಪ್ಪ ಮನೆ ಎಂಬಲ್ಲಿ ಗುಡ್ಡಗಾಡು ತಗ್ಗು ಪ್ರದೇಶದಲ್ಲಿ ಬಡಕಾರ್ಮಿಕರು ಸೂರು ನಿರ್ಮಿಸಿಕೊಂಡವರ ಗೋಳು ಇದು.

ಧಾರಕಾರವಾಗಿ ಸುರಿದ ಮಳೆಯ ಆರ್ಭಟಕ್ಕೆ ಸುಂಟಿಕೊಪ್ಪದ ತಗ್ಗು ಪ್ರದೇಶದ ಮಂದಿ ನಿರಂತರವಾಗಿ ಭೀತಿ ಹಾಗೂ ಸಂಕಷ್ಟ ಎದುರಿಸುವಂತಾಗುತ್ತಿದೆ. ಮಂಗಳವಾರ 1 ಗಂಟೆ ಕಾಲ ಸುರಿದ ಮಳೆಗೆ ಈ ಅವಾಂತರ ಸೃಷ್ಟಿಯಾಗಿದೆ.

ಮಂಗಳವಾರ ಮಧ್ಯಾಹ್ನ 2.45 ರ ಸಂದರ್ಭ ಮಳೆ ಧಾರಕಾರವಾಗಿ 1 ಗಂಟೆ ಸುರಿಯಿತು. ಪರಿಣಾಮ ಗಿರಿಯಪ್ಪ ಮನೆಯ ತಗ್ಗು ಪ್ರದೇಶದಲ್ಲಿರುವ ಚರಂಡಿ ತೊರೆಗಳು ಏಕಕಾಲದಲ್ಲಿ ತುಂಬಿ ಹರಿದವು. ಕಾಂಕ್ರಿಟ್‌ ರಸ್ತೆಯಲ್ಲಿ ಹೊಳೆಯ ಮಾದರಿಯಲ್ಲಿ ಹರಿದು ಬಡಾವಣೆ ನಿವಾಸಿಗಳಾದ ಹನೀಫ, ಫೌಸಿಯ, ಇಸ್ಮಾಯಿಲ್, ಅಬ್ಬೂಕ್ಕರ್, ಸಲೀಂ ಉಮ್ಮರ್ ಎಂಬವರ ಮನೆಗಳಿಗೆ ಕೊಳಚೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಯಾಯಿತು.

ಈ ಭಾಗದಲ್ಲಿ ಕಳೆದ ಎರಡು ತಿಂಗಳ ಕಾಲ ಮುಂಗಾರು ಆರಂಭದಲ್ಲಿ ಎಡೆಬಿಡದೆ ಸುರಿಯುತ್ತಿದ್ದ ಮಳೆಯು ಯಾವುದೇ ದೊಡ್ಡ ಅವಾಂತರ ಸೃಷ್ಟಿಸಿರಲ್ಲಿಲ್ಲ. ಮಂಗಳವಾರ ಮಧ್ಯಾಹ್ನ ವೇಳೆ ಸುರಿದ ಬಾರೀ ಮಳೆ ಇನ್ನಿಲ್ಲದ ಅವಾಂತರ ಉಂಟು ಮಾಡಿತು.

ಮಂಗಳವಾರ ಮಧ್ಯಾಹ್ನ ಮಳೆಯ ರಭಸಕ್ಕೆ ಸುಂಟಿಕೊಪ್ಪದಿಂದ ಗದ್ದೆಹಳ್ಳಕ್ಕಾಗಿ ಹರಿಯುವ ತೋಡು ನೀರು ತುಂಬಿಕೊಂಡ ಪರಿಣಾಮ ಗದ್ದೆಹಳ್ಳ ಗಿರಿಯಪ್ಪ ಮನೆ ತಗ್ಗು ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮನೆಗಳಿಗೆ ಮಳೆಯ ನೀರು ಸೇರಿದಂತೆ ಕೊಳಚೆ ನೀರು ನುಗ್ಗಿತು. ಮನೆಗಳ ಗೃಹೋಪಯೋಗಿ ವಸ್ತುಗಳು ಹಾಗೂ ಪೀಠೋಪಕರಣಗಳೂ ಹಾನಿಗೀಡಾದವು.

ಅವೈಜ್ಞಾನಿಕ ಬಡಾವಣೆ ಕಾರಣ:

ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಲು ಸುಂಟಿಕೊಪ್ಪ ಹೃದಯಭಾಗದಲ್ಲಿ ಅವೈಜ್ಞಾನಿಕವಾಗಿ ಬಡಾವಣೆಗಳ ನಿರ್ಮಾಣ ಕಾರಣವಾಗಿರುವುದು ಮೇಲ್ನೋಟಕ್ಕೇ ಕಂಡುಬರುತ್ತಿದೆ. ಭಾರಿ ಮಳೆಯಾದ ಸಂದರ್ಭ ಗದ್ದೆಹಳ್ಳದ ಗಿರಿಯಪ್ಪ ಮನೆಯ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಸಂಬಂಧಿಸಿದ ಇಲಾಖೆಯವರು, ಆಡಳಿತ ಮಂಡಳಿಯವರು ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಈ ಭಾಗದ ನಿವಾಸಿಗಳು ದೂರಿಕೊಂಡಿದ್ದಾರೆ.

ಸ್ಥಳಕ್ಕೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಪಂಚಾಯಿತಿ ಸದಸ್ಯರಾದ ಪಿ.ಎಫ್.ಸಬಾಸ್ಟೀನ್ ಭೇಟಿ ನೀಡಿ ಅವಲೋಕಿಸಿದರು.

ಕಳೆದ ಮಂಗಳವಾರವೂ ಇದೇ ರೀತಿ ಪ್ರವಾಹ ಆವರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.